ಮುಂಬರುವ ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ (Midterm elections) ರಿಪಬ್ಲಿಕನ್ ಪಕ್ಷವು ಕಾಂಗ್ರೆಸ್‌ನ (ಸಂಸತ್ತು) ಉಭಯ ಸದನಗಳಲ್ಲಿ ಮತ್ತೆ ಅಧಿಕಾರ ಉಳಿಸಿಕೊಂಡರೆ, ಪ್ರತಿಯೊಬ್ಬ ವಯಸ್ಕ ಅಮೆರಿಕನ್ ಪ್ರಜೆಗೂ 5,000 ಡಾಲರ್ ನೀಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ.
ಡಲ್ಲಾಸ್‌ನಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, “ಒಂದುವೇಳೆ ರಿಪಬ್ಲಿಕನ್ ಪಕ್ಷ ಗೆದ್ದರೆ, ನಮ್ಮೊಂದಿಗೆ ನೀವೂ ಗೆದ್ದಂತೆ. ಆಗ ನಿಮಗೆ 5,000(5 ಲಕ್ಷ ರೂ.) ಡಾಲರ್ ಸಿಗಲಿದ್ದು, ಅದನ್ನು ‘ಟ್ರಂಪ್ ಡಿವಿಡೆಂಡ್’ (ಟ್ರಂಪ್ ಲಾಭಾಂಶ) ಎಂದು ಕರೆಯಲಾಗುವುದು” ಎಂದರು. ಡೆಮಾಕ್ರಟಿಕ್ ಪಕ್ಷದ ಎದುರು ರಿಪಬ್ಲಿಕನ್ ಪಕ್ಷ ಹಿನ್ನಡೆ ಅನುಭವಿಸುತ್ತಿದೆ ಎಂಬ ಚುನಾವಣಾ ಪೂರ್ವ ಸಮೀಕ್ಷೆಗಳ ನಡುವೆಯೇ ಟ್ರಂಪ್ ಈ ಘೋಷಣೆ ಮಾಡಿದ್ದಾರೆ. ಕನಿಷ್ಠ 1 ಟ್ರಿಲಿಯನ್ ಡಾಲರ್(ಒಂದು ಲಕ್ಷ ಕೋಟಿ ರೂ.) ವೆಚ್ಚದ ಈ ಪ್ರಸ್ತಾವನೆ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅಸಾಧ್ಯವಾದದ್ದು ಎನ್ನಲಾಗುತ್ತಿದೆ. ಇದಕ್ಕೆ ಹಣ ಎಲ್ಲಿಂದ ಬರುತ್ತದೆ ಎಂಬುದನ್ನು ವಿವರಿಸದ ಟ್ರಂಪ್, “ನಮ್ಮ ದೇಶವು ಸಾಕಷ್ಟು ಹಣವನ್ನು ಗಳಿಸುತ್ತಿದೆ” ಎಂದು ಮಾತ್ರ ಸಮರ್ಥಿಸಿಕೊಂಡಿದ್ದಾರೆ.
ನವೆಂಬರ್ 3ರಂದು ನಡೆಯಲಿರುವ ಚುನಾವಣೆಯಲ್ಲಿ ಉಭಯ ಸದನಗಳನ್ನು ಉಳಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ ಟ್ರಂಪ್, ಸಮೀಕ್ಷೆಗಳನ್ನು ತಲೆಕೆಳಗಾಗಿಸುವ ಹುಮ್ಮಸ್ಸಿನಲ್ಲಿದ್ದಾರೆ. “ನಾನೇ ಕಣದಲ್ಲಿದ್ದೇನೆ, ನಾನೇ ಕಣದಲ್ಲಿದ್ದೇನೆ ಎಂದು ಮತ್ತೊಮ್ಮೆ ಕಲ್ಪಿಸಿಕೊಳ್ಳಿ” ಎಂದು ಜನರನ್ನು ಹುರಿದುಂಬಿಸಿದರು. ಆದರೆ, ಇರಾನ್ ಮೇಲಿನ ಯುದ್ಧ ಮತ್ತು ಏರುತ್ತಿರುವ ಬೆಲೆಗಳಿಂದಾಗಿ ಜನರ ಆಕ್ರೋಶಕ್ಕೆ ಗುರಿಯಾಗಿರುವ ಟ್ರಂಪ್ ಅವರ ಜನಪ್ರಿಯತೆ ಶೇ.30ರ ಆಸುಪಾಸಿಗೆ ಕುಸಿದಿದೆ. ಸಮೀಕ್ಷೆಗಳ ಪ್ರಕಾರ, ಮುಂಬರುವ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷವು ಹೌಸ್ (ಕೆಳಮನೆ) ವಿಭಾಗದಲ್ಲಿ 230-205 ಹಾಗೂ ಸೆನೆಟ್ (ಮೇಲ್ಮನೆ) ವಿಭಾಗದಲ್ಲಿ 51-49 ಅಂತರದಿಂದ ಜಯಗಳಿಸುವ ನಿರೀಕ್ಷೆಯಿದೆ.
ಸಮಾವೇಶದಲ್ಲಿ ಇರಾನ್ ಮೇಲಿನ ಯುದ್ಧವನ್ನು ಬಲವಾಗಿ ಸಮರ್ಥಿಸಿಕೊಂಡ ಟ್ರಂಪ್, ಈ ಯುದ್ಧವು ಅಮೆರಿಕದ ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡರು. “ನಾವು ಉತ್ತಮ ಸ್ಥಿತಿಯಲ್ಲಿದ್ದೆವು. ಆದರೆ, ಇರಾನ್ ಕೇವಲ ಎರಡು-ಮೂರು ವಾರಗಳಲ್ಲಿ ಅಣ್ವಸ್ತ್ರ ಹೊಂದುವ ಹಂತದಲ್ಲಿದ್ದ ಕಾರಣ ಯುದ್ಧ ಆರಂಭಿಸುವುದು ನನಗೆ ಅನಿವಾರ್ಯವಾಯಿತು” ಎಂದು ಅವರು ತಮ್ಮ ಆರ್ಥಿಕ ಸಲಹೆಗಾರರಿಗೆ ವಿವರಿಸಿದ್ದಾಗಿ ತಿಳಿಸಿದರು.
ಅತ್ಯಂತ ಆಯಕಟ್ಟಿನ ‘ಹಾರ್ಮುಜ್ ಜಲಸಂಧಿ’ಗೆ (Strait of Hormuz) ತಮ್ಮ ಹೆಸರಿಡಬೇಕು ಎಂದು ಪ್ರತಿಪಾದಿಸಿದ ಟ್ರಂಪ್, ಈ ಯುದ್ಧದ ಗೆಲುವಿನೊಂದಿಗೆ ತೈಲ ಬೆಲೆಗಳು ಇಳಿಕೆಯಾಗಲಿವೆ ಎಂದು ಭವಿಷ್ಯ ನುಡಿದರು. “ಆಹಾರ ಸಾಮಗ್ರಿಗಳು ಸೇರಿದಂತೆ ಬಹುತೇಕ ಎಲ್ಲ ವಸ್ತುಗಳ ಬೆಲೆಗಳು ವೇಗವಾಗಿ ಇಳಿಯುತ್ತಿವೆ. ಪ್ರಸ್ತುತ ನಡೆಯುತ್ತಿರುವ ಇರಾನ್ ವಿರುದ್ಧದ ಯುದ್ಧದಲ್ಲಿ ನಾವು ಗೆದ್ದ ತಕ್ಷಣವೇ ತೈಲ ಬೆಲೆಯೂ ಇಳಿಕೆಯಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದೇ ವೇಳೆ, ಅಮೆರಿಕದ ವ್ಯಾಪಾರ ಪಾಲುದಾರರ ಮೇಲೆ ಹೇರಲಾಗಿರುವ ಸುಂಕವನ್ನು (Tariffs) ಸಮರ್ಥಿಸಿಕೊಂಡ ಅವರು, ಈ ಆರ್ಥಿಕ ಏರುಪೇರು ಭವಿಷ್ಯದಲ್ಲಿ ಸತ್ಫಲ ನೀಡಲಿದೆ ಎಂದರು.





