ಉತ್ತರ ಕನ್ನಡ ಜಿಲ್ಲೆಯಲ್ಲಿ ಸೆಪ್ಟೆಂಬರ್ 13ರಂದು ನಡೆಯುವ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ರಾಜಿಯಾಗಬಹುದಾದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ ಹೇಳಿದರು.
ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ಜಿಲ್ಲೆಯಲ್ಲಿ ಪ್ರಸ್ತುತ ವಿವಿಧ ಹಂತದ ನ್ಯಾಯಾಲಯಗಳಲ್ಲಿ 38744 ಪ್ರಕರಣಗಳು ಬಾಕಿ ಇದ್ದು, ಇದರಲ್ಲಿ 5000 ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥ ಮಾಡುವ ಗುರಿ ಹೊಂದಲಾಗಿದೆ. ಕಳೆದ ಬಾರಿ ನಡೆದ ಲೋಕ್ ಅದಾಲತ್‌ನಲ್ಲಿ 6263 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥ ಪಡಿಸುವ ಗುರಿ ಹೊಂದಲಾಗಿದೆ. ರಾಜ್ಯ ಮಟ್ಟದಲ್ಲಿ ಹಾಗೂ ವಲಯ ಮಟ್ಟದಲ್ಲಿ ಲೋಕ್ ಅದಾಲತ್ ಕುರಿತು ಸಭೆಗಳನ್ನು ನಡೆಸಲಾಗಿದ್ದು, ಪ್ರಕರಣಗಳನ್ನು ಶೀಘ್ರ ಇತ್ಯರ್ಥಕ್ಕೆ ಸಹಕರಿಸುವಂತೆ ಬ್ಯಾಂಕ್ ಮತ್ತು ವಿಮಾ ಕಂಪನಿಗಳಿಗೆ ಮಾಹಿತಿ ನೀಡಲಾಗಿದೆ” ಎಂದರು.
“ಜುಲೈ 1 ರಿಂದ ಅಕ್ಟೋಬರ್ 7 ರವರೆಗೆ ‘ವಿಶೇಷ ಮೀಡಿಯೇಶನ್ ಡ್ರೈವ್’ ದೇಶಕ್ಕಾಗಿ ಸಂಧಾನ ಎಂಬ ಧ್ಯೇಯದೊಂದಿಗೆ ವಿಶೇಷ ಸಂಧಾನದ ಅಭಿಯಾನ ನಡೆಸಲಾಗುತ್ತಿದ್ದು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥ ಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ ಇದರಲ್ಲಿ ರಾಜಿ ಆಗಬಲ್ಲ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳು, ಆಸ್ತಿ ವಿಭಾಗದ ಪ್ರಕರಣಗಳು ಚೆಕ್ ಬೌನ್ಸ್ ಪ್ರಕರಣಗಳು ಹಾಗೂ ಕೌಟುಂಬಿಕ ಪ್ರಕರಣಗಳನ್ನು ಸಹ ಸಂಧಾನದ ಮೂಲಕ ಬಗೆಹರಿಸುವ ಪ್ರಯತ್ನ ನಡೆಸಲಾಗುತ್ತಿದ್ದು, ಇದುವರೆಗೆ 162 ಪ್ರಕರಣಗಳು ಬಂದಿದ್ದು, ಇದರಲ್ಲಿ 16 ಪ್ರಕರಣಗಳು ಇತ್ಯರ್ಥವಾಗಿದೆ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು” ಎಂದರು.
“ಧಾರವಾಡ , ಉತ್ತರ ಕನ್ನಡ, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಗದಗ ಮತ್ತು ಹಾವೇರಿ ಜಿಲ್ಲೆ ಸೇರಿದಂತೆ ಧಾರವಾಡದಲ್ಲಿ ಖಾಯಂ ಜನತಾ ನ್ಯಾಯಾಲಯವಿದೆ ಈ ನ್ಯಾಯಾಲಯ ಮುಖ್ಯವಾಗಿ ಸಾರ್ವಜನಿಕ ಉಪಯುಕ್ತ ಸೇವೆಗಳಿಗೆ ಸಂಬಂಧಪಟ್ಟಂತಹ ವಿವಾದಗಳನ್ನು ರಾಜೀ ಮತ್ತು ವಿಚಾರಣೆ ಮೂಲಕ ತೀರ್ಮಾನ ಮಾಡುವ ಅಧಿಕಾರ ಹೊಂದಿದೆ ಎಂದರು. ಅಂಚೆ, ತಂತಿ, ದೂರವಾಣಿ ಸೇವೆಗಳು, ವಿದ್ಯುತ್, ಬೆಳಕು, ನೀರು ಸರಬರಾಜು ಮಾಡುವ ಯಾವುದೇ ಸಂಸ್ಥೆಗಳ ಸೇವೆಗಳು, ಸಾರ್ವಜನಿಕ ನೈರ್ಮಲ್ಯ ವ್ಯವಸ್ಥೆ, ಚರಂಡಿ ವ್ಯವಸ್ಥೆಯ ಕಾರ್ಯಗಳು, ವಿಮಾ ಸೇವೆಗಳು ಆಸ್ಪತ್ರೆ ಅಥವಾ ಔಷಧಾಲಯಗಳ ಸೇವೆಗಳು ಇನ್ನೂ ಹಲವಾರು ವಿಭಾಗಕ್ಕೆ ಸಂಬಂಧಪಟ್ಟ ಪ್ರಕರಣಗಳನ್ನು ಯಾವುದೇ ಶುಲ್ಕವಿಲ್ಲದೇ ಖಾಯಂ ಜನತಾ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಬಗೆಹರಿಸಿಕೊಳ್ಳಬಹುದು” ಎಂದರು.
ಇದನ್ನೂ ಓದಿ: ಉತ್ತರ ಕನ್ನಡ | ಮಳೆ ಕಾರಣದಿಂದ ನೀಡಿದ್ದ ರಜೆ ಸರಿದೂಗಿಸಲು ಶನಿವಾರ ಪೂರ್ಣಾವಧಿ ತರಗತಿ ನಡೆಸಲು ಆದೇಶ
“ಖಾಯಂ ನ್ಯಾಯಾಲಯದಲ್ಲಿ ಶುಲ್ಕ ನೀಡದೇ ಪ್ರಕರಣ ದಾಖಲಿಸಿ ಡಿಕ್ರಿ (ಅವಾರ್ಡ) ಪಡೆದುಕೊಳ್ಳಬಹುದು ಸಂಬಂಧಪಟ್ಟ ನ್ಯಾಯಾಲಯಲ್ಲಿ ಅದನ್ನು ಜಾರಿಗೆ ತರಬಹುದು. ಇದು ಸಿವಿಲ್ ಡಿಕ್ರಿಯಷ್ಟೇ ಖಾಯಂ ಜನತಾ ನ್ಯಾಯಾಲಯದ ಅರ್ವಾಡ ಅಧಿಕಾರ ಹೊಂದಿರುತ್ತದೆ. ಈ ನ್ಯಾಯಾಲಯದಲ್ಲಿ 1 ಕೋಟಿ ಮೌಲ್ಯದ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಬಹುದು. ಎಲ್ಲರೂ ಅರ್ಜಿ ಸಲ್ಲಿಸಬಹದು ಇದಕ್ಕೆ ಆದಾಯದ ಮೀತಿ ಇಲ್ಲ ಸಾರ್ವಜನಿಕರಿಗೆ ಹೆಚ್ಚಿನ ಉಪಯುಕ್ತವಾಗಿದೆ. ಈ ಕುರಿತು ಕರ ಪತ್ರಗಳನ್ನು ವಿತರಿಸುವ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತಿದೆ” ಎಂದರು.