ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಕೋಮಾರಪಂತವಾಡಾ ಗ್ರಾಮದ ಜನರು ಓಡಾಡಲು ರಸ್ತೆಯಿಲ್ಲದೇ ಕಾಲುದಾರಿಯಲ್ಲೇ ಸಾಗುವ ಅನಿವಾರ್ಯತೆ ಇದ್ದು, ಗ್ರಾಮಸ್ಥರು ತಮ್ಮ ವಾಹನಗಳನ್ನು ಮನೆಯ ಬಾಗಿಲಿಗೆ ತರಲು ಆಗುತ್ತಿಲ್ಲ.
ಸುಸಜ್ಜಿತ ರಸ್ತೆಯನ್ನೇ ಕಾಣದೆ ಗ್ರಾಮಸ್ಥರು ನಿತ್ಯ ಓಡಾಟಕ್ಕೆ ಪರದಾಡುತ್ತಿದ್ದು, ಗ್ರಾಮದಲ್ಲಿ ಯಾರಿಗಾದರೂ ಅನಾರೋಗ್ಯ ಉಂಟಾದರೆ ಅವರನ್ನು ಎತ್ತಿಕೊಂಡು ದೂರದಲ್ಲಿರುವ ಮುಖ್ಯ ರಸ್ತೆವರೆಗೆ ಸಾಗಬೇಕು. ಅಲ್ಲಿಂದ ವಾಹನದಲ್ಲಿ ಕರೆದೊಯ್ಯಬೇಕು. ಕೇಣಿ ಮೇಲಿನಬಾಗ, ಕೋಮಾರಪಂತ ವಾಡಾ ಗ್ರಾಮದಲ್ಲಿ 200ಕ್ಕೂ ಹೆಚ್ಚು ಮನೆಗಳಿದ್ದು, 450ಕ್ಕಿಂತ ಅಧಿಕ ಜನ ವಾಸವಾಗಿದ್ದಾರೆ.
ಗ್ರಾಮದಲ್ಲಿ ಮಕ್ಕಳಿಗಾಗಿ ಅಂಗನವಾಡಿ ಇದೆ. ಶಾಲೆಗೆ ಮಕ್ಕಳನ್ನು ಕರೆದುಕೊಂಡು ಹೋಗಲು ಸರಿಯಾದ ರಸ್ತೆಯಿಲ್ಲ. ಕಿರಿದಾದ ಗದ್ದೆಯ ದಾರಿಯಲ್ಲೇ ಓಡಾಡಬೇಕು. ಮಳೆಗಾಲ ಬಂತೆಂದರೆ ಗದ್ದೆಯಲ್ಲಿ ನೀರು ತುಂಬಿ ನಡೆದಾಡಲು ದಾರಿಯೇ ಇಲ್ಲದಂತಾಗುತ್ತದೆ. ಈ ಭಾಗದಲ್ಲಿ ಯಾರಾದರು ಸಾವಿಗೀಡಾದರೆ, ಶವ ಸಂಸ್ಕಾರಕ್ಕಾಗಿ ಶವವನ್ನು ಹೊತ್ತು ಹೋಗಲು ಕಷ್ಟಪಡಬೇಕಾಗುತ್ತದೆ ಎನ್ನುವ ಗ್ರಾಮಸ್ಥರು, ನಮಗೊಂದು ಸುಸಜ್ಜಿತ ರಸ್ತೆ ಮಾಡಿಕೊಡಿ ಎಂದು ಸ್ಥಳೀಯ ಆಡಳಿತಕ್ಕೆ ಆಗ್ರಹಿಸುತ್ತಿದ್ದಾರೆ.