ಬೈಕ್‌ನಲ್ಲಿ ತೆರಳುತ್ತಿದ್ದ ಶಿಕ್ಷಕ ಕೆಳಗೆ ಬಿದ್ದಿದ್ದು, ಅವರ ಮೇಲೆ ಲಾರಿ ಹರಿದಿದೆ. ಪರಿಣಾಮ, ಶಿಕ್ಷಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.
ಕಾರವಾರದ ದೇವಳಮಕ್ಕಿ ಶಾಲೆಯ ಶಿಕ್ಷಕ ಉಮೇಶ್ ಗುನಗಿ ಮೃತ ದುರ್ದೈವಿ. ಉಮೇಶ್ ಅವರು ಶುಕ್ರವಾರ ಬೆಳಗ್ಗೆ ತಮ್ಮ ನಿವಾಸದಿಂದ ದೇವಳಮಕ್ಕಿ ಶಾಲೆಗೆ ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ, ಹಬ್ಬುವಾಡದ ರೈಗಾ ರಸ್ತೆಯಲ್ಲಿ ಬೈಕ್ ನಿಯಂತ್ರಣ ತಪ್ಪಿದ್ದು, ಶಿಕ್ಷಕ ಕೆಳಗೆ ಬಿದ್ದಿದ್ದಾರೆ. ಅವರ ಮೇಲೆ ಲಾರಿ ಹರಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಕೈಗಾ ರಸ್ತೆಯಲ್ಲಿ ಕೆಳೆದ ಎರಡು ವರ್ಷಗಳಿಂದ ರಸ್ತೆ ಕಾಮಗಾರಿ ನಡೆಯುತ್ತಿದೆ. ಆದರೂ, ಕಾಮಗಾರಿ ಪೂರ್ಣಗೊಂಡಿಲ್ಲ. ಅವೈಜ್ಞಾನಿಕವಾಗಿ ನಡೆಯುತ್ತಿರುವ ಕಾಮಗಾರಿಯಿಂದಲೇ ಶಿಕ್ಷಕ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಸ್ತೆ ಮಧ್ಯೆ ಡಿವೈಡರ್ ಹಾಕದ ಕಾರಣ ಪದೇ-ಪದೇ ಅಪಘಾತಗಳು ಸಂಭವಿಸುತ್ತಿವೆ. ಆದರೂ, ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ ಎಂದು ಕಿಡಿಕಾರಿದ್ದಾರೆ.
ಸ್ಥಳಕ್ಕೆ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿಕ್ಷಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಕಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.