ಉತ್ತರ ಕನ್ನಡ ಜಿಲ್ಲೆಯು ಆ.20 ವರೆಗೆ ರೆಡ್ ಅಲರ್ಟ್ ಇದೆ. ಪ್ರಸ್ತುತ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಮಳೆ ಕಡಿಮೆಯಾಗುವ ಸಾಧ್ಯತೆಯಿದ್ದು, ಘಟ್ಟದ ಮೇಲೆ ಇರುವ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಜಲಾಶಯಗಳ ನೀರಿನ ಮಟ್ಟವು ಗಣನೀಯವಾಗಿ ಹೆಚ್ಚಾಗುತ್ತಿದೆ. ಜಲಾಶಯಗಳಿಂದ ನೀರು ಹೊರಬಿಟ್ಟಲ್ಲಿ ಕೈಗೊಳ್ಳಬೇಕಾದ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ಜಿಲ್ಲಾಡಳಿದಿಂದ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ ಹೇಳಿದರು.
ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟವು 1816 ಅಡಿಗಳಾಗಿದ್ದು, ಈಗಾಗಲೇ ಈ ಮಟ್ಟವನ್ನು ತಲುಪಿರುವುದರಿಂದ ಮಂಗಳವಾರ ಬೆಳಗ್ಗೆ 10 ಗಂಟೆಗೆ 15000 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರಬಿಡಲಾಗಿದೆ. ಈ ಜಲಾಶಯದಿಂದ 50000 ಸಾವಿರ ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರ ಬಿಟ್ಟರೇ ನಮ್ಮ ಜಿಲ್ಲೆಯ 160 ಕುಟುಂಬಗಳಿಗೆ ಹಾನಿಯಾಗುವ ಸಾಧ್ಯತೆಯಿದೆ. ಪ್ರಸ್ತುತ ಹೊರಬಿಟ್ಟಿರುವ ನೀರಿನಿಂದ ಯಾವುದೇ ತೊಂದರೆಯಾಗುವುದಿಲ್ಲ. ಮುಂಜಾಗ್ರತಾ ಕ್ರಮವಾಗಿ ತಹಶೀಲ್ದಾರರು, ಗ್ರಾಮ ಪಂಚಾಯತಿ, ಪೊಲೀಸ್ ಒಳಗೊಂಡ ತಂಡವು, 37 ಪರುಷ, 48 ಮಹಿಳೆ 16 ಮಕ್ಕಳು ಸೇರಿದಂತೆ 101 ಸಾರ್ವಜನಿಕರನ್ನು ಸಮೀಪದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದರು.
ಗೇರುಸೊಪ್ಪ ಜಲಾಶಯದಿಂದ 1 ಲಕ್ಷ ಕ್ಯೂಸೆಕ್‌ಗಿಂತ ಹೆಚ್ಚಿನ ನೀರನ್ನು ಬಿಟ್ಟರೇ ಜಿಲ್ಲೆಯ 18 ಗ್ರಾಮ ಪಂಚಾಯಿತಿಗೆ ಹಾನಿಯಾಗುವ ಸಾಧ್ಯತೆಯಿದೆ. ಆದರೆ ಈ ಪ್ರಮಾಣದಲ್ಲಿ ನೀರು ಬಿಡುವ ಸಾಧ್ಯತೆ ತುಂಬಾ ಕಡಿಮೆ ಇದೆ. ಜಲಾಶಯದಿಂದ ನೀರನ್ನು ಬಿಟ್ಟರೇ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುತ್ತಾರೆ, ಸದ್ರಿ ಜಲಾಶಯದ ನೀರು ಇಲ್ಲಿಗೆ ತಲುಪಲು 3 ರಿಂದ 4 ಗಂಟೆಗಳ ಕಾಲಾವಕಾಶ ಬೇಕಿದ್ದು, ಸಾಕಷ್ಟು ಸಮಯವಿರುದರಿಂದ ಜಿಲ್ಲಾಡಳಿದಿಂದ ಎಲ್ಲಾ ಮುನ್ನೆಚ್ಚರಿಕೆ ಕೈಗೊಳ್ಳಲಾಗುವುದು ಎಂದರು.
ಇದನ್ನು ಓದಿದ್ದೀರಾ? ಶಿರಸಿ | ನಿಲೇಕಣಿ ಮೀನು ಮಾರುಕಟ್ಟೆ ಬಾಡಿಗೆ ಬಾಕಿ: ಪಾವತಿಸದಿದ್ದರೆ ಬೀಗ ಜಡಿಯುವ ಎಚ್ಚರಿಕೆ ನೀಡಿದ ನಗರಸಭೆ
ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿರುವುದರಿಂದ ಕದ್ರಾ ಜಲಾಶಯದ ನೀರಿನ ಮಟ್ಟವು 30.8 ಕ್ಕೆ ಏರಿದೆ. ಇಲ್ಲಿ ಪ್ರತಿ ನಿತ್ಯ ವಿದ್ಯುತ್ ಉತ್ಪಾದನೆಗೆ 20 ಕ್ಯೂಸೆಕ್ ಸಾವಿರ ನೀರನ್ನು ಹೊರಬಿಡಲಾಗುತ್ತಿದ್ದು, ಮಂಗಳವಾರ ಹೆಚ್ಚುವರಿಯಾಗಿ 30 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ. ಅಲ್ಲಿನ ಸಾರ್ವಜನಿಕರಿಗೆ ಈಗಾಗಲೇ ಸ್ಥಳಾಂತರಗೊಳ್ಳಲು ಸೂಚನೆ ನೀಡಲಾಗಿದೆ. ಒಟ್ಟು 50 ಸಾವಿರ ಕ್ಯೂಸೆಕ್ ವರೆಗೂ ನೀರು ಬಿಟ್ಟರೇ ಯಾವುದೇ ರೀತಿಯ ಹಾನಿಯಾಗುವುದಿಲ್ಲ ಇದಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಬಿಟ್ಟರೆ ಇದಕ್ಕೆ ಮುನ್ನೆಚ್ಚರಿಕೆಯಾಗಿ ಕಾಳಜಿ ಕೇಂದ್ರಗಳನ್ನು ಸನ್ನದ್ಧವಾಗಿ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿ ಪ್ರಿಯಾ ತಿಳಿಸಿದ್ದಾರೆ.
