ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಬುಧವಾರವೂ (ಜುಲೈ 05) ಧಾರಾಕಾರ ಮಳೆ ಬೀಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಐದು ತಾಲೂಕುಗಳ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.
ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಭಟ್ಕಳ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ಕಾರವಾರದಲ್ಲಿ ಅಬ್ಬರದ ಮಳೆಯಾಗುತ್ತಿದೆ. ಹಲವಾರು ರಸ್ತೆಗಳು ಜಲಾವೃತಗೊಂಡಿವೆ. ತಗ್ಗು ಪ್ರವೇಶಕ್ಕೆ ನೀರು ನುಗ್ಗಿದೆ. ಜಿಲ್ಲೆಗೆ
ಪ್ರಕೃತಿ ವಿಕೋಪ ನಿರ್ವಹಣಾ ತಂಡಗಳನ್ನು ಕಳಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಪ್ರತಿ ತಾಲೂಕಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಇನ್ನೂ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ.