ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದ ಜೆ ಎನ್ ರಸ್ತೆಯಲ್ಲಿರುವ ಎಸ್ ಕೆ ಏಜೆನ್ಸಿ ಹೊಲ್ಸೇಲ್ ಅಂಗಡಿಯಲ್ಲಿ ‘SANAN MEWA MODAK(SPECIAL)’ ಹೆಸರಿನೊಂದಿಗೆ ಮಾದಕ ಅಂಶ ಹೊಂದಿರುವ ವಸ್ತುಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ, ದಾಂಡೇಲಿ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಕಿರಣ ಪಾಟೀಲ ಅವರ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಹಾಗೂ ಪಂಚರ ಸಮಕ್ಷಮ ಶನಿವಾರ ದಾಳಿ ನಡೆಸಿ, ಸುಮಾರು 1 ಕೆಜಿ 986 ಗ್ರಾಂ ತೂಕದ ಮಾದಕ ಅಂಶ ಹೊಂದಿರುವ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಮಧ್ಯಾಹ್ನ ಸುಮಾರು 1.10ಕ್ಕೆ ಎಸ್ ಕೆ ಏಜೆನ್ಸಿ ಅಂಗಡಿ ಮೇಲೆ ದಾಳಿ ನಡೆಸಿದ ವೇಳೆ, ಯಾವುದೇ ಪರವಾನಗಿ ಇಲ್ಲದೆ ಸಾರ್ವಜನಿಕರಿಗೆ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದ ‘SANAN MEWA MODAK (SPECIAL)’ ಹೆಸರಿನ 10 ಚಿಕ್ಕ ರಟ್ಟಿನ ಬಾಕ್ಸ್‌ಗಳು ಪತ್ತೆಯಾಗಿವೆ.
ಉತ್ಪನ್ನದ ಪ್ಯಾಕೆಟ್ ಮೇಲೆ Cannabis Sativa ಅಂಶ ಇರುವುದಾಗಿ ನಮೂದಿಸಲಾಗಿತ್ತು. ಮಾಹಿತಿ ದೊರೆತ ಕೂಡಲೇ ಸ್ಥಳಕ್ಕೆ ಆಗಮಿಸಿದ ಎಸ್‌ಒಸಿಒ(SOCO – Scene of Crime Officer) ಅಧಿಕಾರಿಗಳು ಪ್ರಾಥಮಿಕ ಪರೀಕ್ಷಾ ಕಿಟ್ ಮೂಲಕ ಪರಿಶೀಲನೆ ನಡೆಸಿದಾಗ, ಉತ್ಪನ್ನದಲ್ಲಿ ಮಾದಕ ಅಂಶ ಇರುವುದಾಗಿ ಪ್ರಾಥಮಿಕವಾಗಿ ದೃಢಪಟ್ಟಿದೆ. ಬಳಿಕ ಪಂಚರ ಸಮಕ್ಷಮ ಒಟ್ಟು 1 ಕೆ.ಜಿ. 986 ಗ್ರಾಂ ತೂಕದ 10 ಬಾಕ್ಸ್‌ಗಳನ್ನು ಕಾನೂನುಬದ್ಧವಾಗಿ ಜಪ್ತಿ ಮಾಡಲಾಗಿದೆ.
ಈ ಸಂಬಂಧ ನಿರ್ಮಲನಗರ ನಿವಾಸಿ ಹಾಗೂ ಎಸ್ ಕೆ ಏಜೆನ್ಸಿ ಅಂಗಡಿ ಮಾಲೀಕ ಸಂಜಯ ಮುರಳೀಧರ ಮಹೇಶ್ವರಿ(62) ವಿರುದ್ಧ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗಿದೆ.
ಖಚಿತ ಮಾಹಿತಿ ಆಧರಿಸಿ ತ್ವರಿತವಾಗಿ ಕಾರ್ಯಾಚರಣೆ ನಡೆಸಿದ ಪಿಎಸ್‌ಐ ಕಿರಣ ಪಾಟೀಲ ಅವರ ನೇತೃತ್ವದ ಈ ದಾಳಿಯಿಂದ ಸಾರ್ವಜನಿಕರಿಗೆ ಮಾರಾಟವಾಗುತ್ತಿದ್ದ ಮಾದಕ ಅಂಶದ ವಸ್ತುಗಳು ಪೊಲೀಸರ ವಶಕ್ಕೆ ಬಂದಿವೆ. ಇದರೊಂದಿಗೆ ಮಾದಕ ವಸ್ತುಗಳ ಅಕ್ರಮ ಮಾರಾಟ ಜಾಲಕ್ಕೆ ಮತ್ತೊಂದು ದೊಡ್ಡ ಹೊಡೆತ ಬಿದ್ದಂತಾಗಿದೆ.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಬಲ್ಡೋಟ ಕಂಪೆನಿ ತೊಲಗಿಸಿ ಆಂದೋಲನ: 261ನೇ ದಿನ ಪೂರ್ಣ
ಇತ್ತೀಚಿನ ದಿನಗಳಲ್ಲಿ ದಾಂಡೇಲಿ ನಗರದಲ್ಲಿ ಮಾದಕ ವಸ್ತುಗಳ ವಿರುದ್ಧ ಪಿಎಸ್‌ಐ ಕಿರಣ ಪಾಟೀಲ ಅವರು ನಿರಂತರವಾಗಿ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸುತ್ತಿದ್ದು, ಅಕ್ರಮ ಚಟುವಟಿಕೆಗಳ ವಿರುದ್ಧ ಕಠಿಣ ನಿಲುವು ತಾಳಿರುವುದು ಗಮನಾರ್ಹವಾಗಿದೆ.
ಪ್ರಕರಣದ ಮುಂದಿನ ತನಿಖೆಯನ್ನು ಪಿಎಸ್‌ಐ ಅಮೀನಸಾಬ ಅತ್ತಾರ್ ಕೈಗೊಂಡಿದ್ದು, ಮಾದಕ ವಸ್ತುಗಳ ಸರಬರಾಜು ಜಾಲ, ಮೂಲ ಪೂರೈಕೆದಾರರು ಹಾಗೂ ಇತರರ ಪಾತ್ರದ ಕುರಿತು ತನಿಖೆ ಮುಂದುವರಿದಿದೆ.





