ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ಗಳ ಕಿರುಕುಳ ಪ್ರಕರಣ ದಿನೇ ದಿನೆ ಬೆಳಕಿಗೆ ಬರುತ್ತಿವೆ. ಮೀಟರ್ ಬಡ್ಡಿ ದಂಧೆ ನಡೆಸುತ್ತ, ಜನರನ್ನು ಬೆದರಿಸುತ್ತಿದ್ದ ಆರೋಪದ ಮೇಲೆ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ, ದಾಂಡೇಲಿ ಹಾಗೂ ಹೊಸಪೇಟೆಯಲ್ಲಿ ಒಂದೇ ದಿನ 20 ಜನರನ್ನು ಪೊಲೀಸರು ಬಂದಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡನಲ್ಲಿ ಮೀಟರ್ ಬಡ್ಡಿ ದಂಧೆಯ ಕಾಟಕ್ಕೆ ಬಹಳಷ್ಟು ಜನರು ಊರು ಬಿಟ್ಟಿದ್ದರು. ಈಚೆಗಷ್ಟೆ ಅಪಹರಣಕ್ಕೊಳಗಾಗಿದ್ದ ಜಮೀರ್ ಅಹಮದ್ ದರ್ಗಾವಾಲೆ ಸೇರಿ ಏಳು ಜನರ ವಿರುದ್ಧ ವ್ಯಾಪಾರಿಯೊಬ್ಬರು ನೀಡಿದ ದೂರು ಆಧರಿಸಿ ಪೊಲೀಸರು ನಿಯಮ ಬಾಹಿರ ಮೀಟರ್ ದಂಧೆಗೆ ಕಡಿವಾಣ ಹಾಕಲು ಪ್ಲ್ಯಾನ್ ಮಾಡಿದ್ದರು.
ಉತ್ತರ ಕನ್ನಡ ಎಸ್ಪಿ (ಜಿಲ್ಲಾ ವರಿಷ್ಠಾಧಿಕಾರಿ) ಎಂ. ನಾರಾಯಣ್ ಅವರು ಜಿಲ್ಲೆಯ ಪ್ರತಿ ಮುಖ್ಯ ರಸ್ತೆಗೂ ಸುಮಾರು 100 ಕ್ಕೂ ಹೆಚ್ಚು ತಂಡಗಳ ಮೂಲಕ ಚೆಕ್ ಪೊಸ್ಟ್ ಹಾಕಿದ್ದರು. ಇತ್ತ ಮುಂಡಗೋಡ ತಾಲೂಕಿಗೆ ಪ್ರತ್ಯೇಕ 21 ತಂಡಗಳ ಮೂಲಕ, ಮೀಟರ್ ಬಡ್ಡಿ ದಂಧೆಕೋರರ ಮನೆ ಹಾಗೂ ಹೊಟೇಲ್ ಮೇಲೆ ದಾಳಿ ಮಾಡಿ, ಎಣ್ಣೆ ಮತ್ತಿನಲ್ಲಿ ಮಲಗಿದ್ದ 17 ಜನರನ್ನ ಬಂಧಿಸಿದ್ದಾರೆ.
ಮುಂಡಗೋಡ: ಬಂಧಿತ ಆರೋಪಿಗಳು
ಫೈರೋಜಖಾನ ಖಾನಜಾದ, ಮಹ್ಮದ ಶಫಿ ಮುಗಳಕಟ್ಟಿ, ಸಾಹೀದ್ ಮಿಲವಾಲೆ, ಮಂಜುನಾಥ ಕಾಜಗಾರ, ಕರಿಂಖಾನ್ ಖಾನಹಾದೆ, ಸಂಜು ಹರಿಜನ, ಕಿರಣ ಚವ್ಹಾಣ, ವಿಶಾಲ ಫೈಟ್, ವಸಂತ ಕೊರವರ, ಮಹ್ಮದಜಾಫರ್ ಚವಡಿ, ಅಮೀರಖಾನ್ ಪಠಾಣ, ಸುನೀಲ ಶೆಟ್ಟಿ, ಮಹಮ್ಮದ ಸಾದೀಕ್ ಗಾಜೀಪೂರ, ವಾಸಿಂಖಾನ್ ಬೆಂಡಿಗೇರಿ, ಮಕ್ಯುಲ್ ಅಹಮದ ಯಳ್ಳೂರು, ಮದುಸಿಂಗ್ ರಜಪೂತ, ವಿದೇಶ ಹುಲಗೂರು, ಮಂಜುನಾಥ ಶೇರಕಾನಿ ಬಂಧಿತರು.
ಓರ್ವ ವ್ಯಕ್ತಿ ಕಳೆದ ಮೂರು ವರ್ಷಗಳಿಂದ ಸುಮಾರು 3 ಕೋಟಿ ರೂ. ಸಾಲ ಕೊಟ್ಟಿದ್ದ. ಈತ ಒಮ್ಮೆ ಸಾಲ ಕೊಟ್ಟರೆ ಮೂರು ಪಟ್ಟು ಹಣ ಕಿತ್ಕೊಳ್ತಿದ್ದ ಎಂದು ತಿಳಿದುಬಂದಿದೆ. ಪ್ರಮುಖ ಕಿಂಗ್ ಪಿನ್ ಆಗಿದ್ದ ಜಮೀರ್ ದರ್ಗಾವಾಲೆ ರಾತ್ರೋ ರಾತ್ರಿ ಮನೆ ಬಿಟ್ಟು ಪರಾರಿ ಆಗಿದ್ದ. ಮುಂಡಗೋಡ, ಯಲ್ಲಾಪುರ, ಹಳಿಯಾಳ ತಾಲೂಕಿನಲ್ಲಿ ಸೈಲೆಂಟ್ ಆಗಿ ಗಸ್ತು ಹಾಕಿ ಪೊಲೀಸರ ಕಾರ್ಯವೈಖರಿಯನ್ನ ಗಮನಿಸಿದರು. ಪೊಲೀಸರ ಕಾರ್ಯಾಚರಣೆಯಿಂದ ಕಂಗೆಟ್ಟ ಜಮೀರ್ ಸ್ವತಃ ಮುಂಡಗೋಡ ಕೊರ್ಟ್ ಮುಂದೆ ಬಂದು ಹಾಜರಾಗಿದ್ದಾನೆ.
“ಬಡ್ಡಿ ವ್ಯವಹಾರದಲ್ಲಿ ತೊಡಗಿದ್ದರ ಕುರಿತು ಆರೋಪಿಗಳ ಮನೆಯಲ್ಲಿ ದಾಖಲೆಗಳು ಸಿಕ್ಕಿವೆ. ನೀಡಿದ ಸಾಲಕ್ಕೆ ದುಪ್ಪಟ್ಟು ಮೊತ್ತ ಮರಳಿಸುವಂತೆ ಪೀಡಿಸುತ್ತಿದ್ದ ಕುರಿತು ದೂರು ಬಂದಿದ್ದರಿಂದ ಕಾರ್ಯಾಚರಣೆ ನಡೆಸಲಾಗಿತ್ತು” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕುಂಭಮೇಳದ ಕಾಲ್ತುಳಿತದಲ್ಲಿ ಗತಿಸಿದವರ ಮನೆಗಳಿಗೇಕೆ ಧಾವಿಸಲಿಲ್ಲ ಬಿಜೆಪಿ ಹಿಂಡು?
ದಾಂಡೇಲಿ ಪ್ರಕರಣ
ಅನಧಿಕೃತ ಮೀಟರ್ ಬಡ್ಡಿ ದಂಧೆ ಬಗ್ಗೆ ವ್ಯಾಪಕ ದೂರು ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಹಾಗೂ ಡಿವೈಎಸ್ಪಿಶಿವಾನಂದ ಮದರಖಂಡಿ ಅವರ ಮಾರ್ಗದರ್ಶನದಲ್ಲಿ ನಗರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಮೀಟರ್ ಬಡ್ಡಿ ದಂಧೆ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ. ದಾಂಡೇಲಿಯ ಗಾಂಧಿನಗರದ ಕಂಜರಬಾಟನಲ್ಲಿ ಪರವಾನಿಗೆ ಇಲ್ಲದೆ ಬಡ್ಡಿ ವ್ಯವಹಾರ ನಡೆಸುತ್ತಿದ್ದ ವಿನೋದ ಮೀನೇಕರ ಹಾಗೂ ಕಿಶನ್ ಸುಭಾಷ ಕಂಜರಬಾಟ ಬಂಧಿತ ಆರೋಪಿಗಳು.
ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎಸ್ ಬಿ ಸಜ್ಜನ್ ಅವರು ನೀಡಿದ ದೂರಿನನ್ವಯ, ಪಿಎಸ್ಐ ಗಳಾದ ಅಮೀನ್ ಅತ್ತಾರ, ಕಿರಣ್ ಪಾಟೀಲ್ ಮತ್ತು ಜಗದೀಶ ಅವರ ನೇತೃತ್ವದಲ್ಲಿ ದೂರುದಾರರು ಹಾಗೂ ಪೊಲೀಸ್ ಸಿಬ್ಬಂದಿಯವರೊಂದಿಗೆ ಆರೋಪಿಗಳ ಮನೆಯನ್ನು ಶೋಧನೆ ಮಾಡಲಾಗಿದೆ.
ವಿನೋದ ಸುರೇಶ ಕಂಜರಬಾಟ್ ಈತನ ಮನೆಗೆ ದಾಳಿ ನಡೆಸಿದ ಸಂದರ್ಭದಲ್ಲಿ ಈತನ ವಶದಲ್ಲಿದ್ದ 5 ಖಾಲಿ ಚೆಕ್ ಗಳು, ಸಹಿ ಇರುವ 5 ಖಾಲಿ ಬಾಂಡ್ ಪೇಪರ್ ಗಳು, 04 ಆರ್.ಸಿ ಕಾರ್ಡ್ ಗಳನ್ನು ಜಪ್ಪು ಮಾಡಿ, ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನೋರ್ವ ಆರೋಪಿ ಕಂಜರಬಾಟ್ ನಿವಾಸಿ ಕಿಶನ್ ಸುಭಾಷ ಕಂಜರಬಾಟ್ ಈತನ ಮನೆಗೆ ದಾಳಿ ಮಾಡಿದ ಸಂದರ್ಭದಲ್ಲಿ ಈತನ ಮನೆಯಲ್ಲಿಯೂ ಅಕ್ರಮ ಬಡ್ಡಿ ವ್ಯವಹಾರಕ್ಕೆ ಸಂಬಂಧಿಸಿದ 2 ಖಾಲಿ ಸ್ಟ್ಯಾಂಪ್ ಪೇಪರ್ ದೊರೆತಿದ್ದು ಅದನ್ನು ಜಪ್ಪು ಮಾಡಿ, ಆತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ದಾಂಡೇಲಿ ನಗರ ಠಾಣೆಯ ಪಿಎಸ್ಐ ಅಮೀನ್ ಅತ್ತಾರ ಅವರು ಪ್ರಕರಣ ದಾಖಲಿಸಿ, ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಹೊಸಪೇಟೆ : ಕೊಟ್ಟೂರಲ್ಲಿ ಇಬ್ಬರ ಬಂಧನ
ಹೂಡಿಕೆ ಮಾಡಿದರೆ ಅಧಿಕ ಬಡ್ಡಿಯೊಂದಿಗೆ ಹಣ ಹಿಂದಿರುಗಿಸುವ ಭರವಸೆ ನೀಡಿದ ನಾಲ್ವರು ಮಹಿಳೆಯರ ಸಹಿತ ಒಟ್ಟು ಎಂಟು ಮಂದಿ ಹಲವರಿಗೆ ವಂಚಿಸಿರುವ ಕುರಿತಂತೆ ಹೊಸಪೇಟೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
“ಬಂಧಿತ ಇಬ್ಬರ ಸಹಿತ ಇತರ ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಇತರ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್.ತಿಳಿಸಿದ್ದಾರೆ.
“ಮುಲ್ತಾಜ್ ಬೇಗಂ ಹಾಗೂ ಇತರ ಏಳು ಮಂದಿ ಸುಮಾರು ಒಂದು ವರ್ಷದಿಂದ ಈ ದಂಧೆ ನಡೆಸುತ್ತಿದ್ದಾರೆ. ‘ತನಗೆ ₹1.20 ಕೋಟಿ, ತನ್ನ ಸ್ನೇಹಿತ ರಾಘವೇಂದ್ರ ಎಂಬುವವರಿಗೆ ₹30 ಲಕ್ಷ ವಂಚಿಸಲಾಗಿದೆ. ಇನ್ನೂ ಅನೇಕ ಮಂದಿ ವಂಚನೆಗೆ ಒಳಗಾಗಿರುವ ಸಾಧ್ಯತೆ ಇದೆ” ಎಂದು ಎಂ.ಅನೀಷ ಎಂಬುವವರು ನೀಡಿದ ದೂರಿನ ಮೇರೆಗೆ ಮುಲ್ತಾಜ್ ಬೇಗಂ, ನಸೀನ್, ಅರೀಫಾ ಬೇಗಂ, ಎಂ.ಜಾವೀದ್, ಆರ್.ನಭಿರಸೂಲ್, ಬೆಂಗಳೂರಿನ ತಸೀಂ ಬಾನು, ಸೈಯದ್ ಜುಬೇರ ಮತ್ತು ಕೇರಳ ಕೋಯಿಕ್ಕೋಡ್ನ ಜಬೀರ್ ಜೇನಶೇರಿ ವಿರುದ್ಧ ದೂರು ನೀಡಲಾಗಿದೆ.