ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜುಲೈ 16ರಂದು ಗುಡ್ಡ ಕುಸಿತ ಉಂಟಾದ ಸ್ಥಳದಲ್ಲಿನ ಮಣ್ಣು ತೆರವು ಮತ್ತು ಮೊಬೈಲ್ ಸ್ವಿಚ್ ಆನ್ ಆಗಿರುವ ಲಾರಿ ಚಾಲಕ ಅರ್ಜುನ ಸೇರಿದಂತೆ ಇತರರಿಗಾಗಿ ಶೋಧ ಕಾರ್ಯಾಚರಣೆಯನ್ನು 9ನೇ ದಿನವೂ ಮುಂದುವರಿಸಲಾಗಿದೆ.
ಶಿರೂರು ಭೂಕುಸಿತದಲ್ಲಿ ಸಿಲುಕಿರುವವರ ಹುಡುಕಾಟಕ್ಕೆ ಬೂಮ್ ಎಕ್ಸ್‌ಕಾವೇಟರ್ ಅಥವಾ ಬೂಮ್ ಪೊಕ್ಲೇನ್ ಯಂತ್ರವನ್ನು ಬೆಳಗಾವಿಯಿಂದ ತರಿಸಲಾಗಿದ್ದು, ಜುಲೈ 24ರ ಮಧ್ಯಾಹ್ನ 12ರ ಹೊತ್ತಿಗೆ ಶಿರೂರಿಗೆ ತಲುಪಿದೆ. ಇದಕ್ಕೂ ಮೊದಲು ಬೂಮ್ ಅಗೆಯುವ ಯಂತ್ರವನ್ನು ಸಾಗಿಸುತ್ತಿದ್ದ ವಾಹನವು ಯಾಂತ್ರಿಕ ದೋಷದಿಂದ ಅಂಕೋಲಾದಲ್ಲಿ ಸ್ಥಗಿತಗೊಂಡಿತ್ತು.
ಅಂಕೋಲಾ ದುರಂತ | ಕಾರ್ಯಾಚರಣೆಗಾಗಿ ಶಿರೂರಿಗೆ ತಲುಪಿದ ಬೂಮ್ ಪೊಕ್ಲೇನ್ ಯಂತ್ರ
ಶಿರೂರು ಭೂಕುಸಿತದಲ್ಲಿ ಸಿಲುಕಿರುವವರ ಹುಡುಕಾಟಕ್ಕೆ ಬೂಮ್ ಎಕ್ಸ್‌ಕಾವೇಟರ್ ಶಿರೂರಿಗೆ ತಲುಪಿದೆ.
60 ಅಡಿ ಆಳದವರೆಗೆ ಆಳದವರೆಗಿನ ಮಣ್ಣು ಎತ್ತಲು ನೆರವಾಗಲಿರುವ ಯಂತ್ರ
ಕಾರವಾರ-ಅಂಕೋಲಾ ಶಾಸಕ @Satish_Sail ಅವರ ನೆರವಿನಿಂದ ಬಂದ ಯಂತ್ರ @spkarwar pic.twitter.com/XL5u0XjS2c
— eedina.com ಈ ದಿನ.ಕಾಮ್ (@eedinanews) July 24, 2024
ಈಗ ಶಿರೂರಿಗೆ ತಲುಪಿರುವ ಈ ಬೂಮ್ ಪೊಕ್ಲೇನ್ ಯಂತ್ರವು, ಸುಮಾರು 60 ಅಡಿ ಆಳದವರೆಗಿನ ಮಣ್ಣು ಎತ್ತಲು ನೆರವಾಗಲಿದೆ. ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್ ಅವರ ನೆರವಿನಿಂದ ಈ ಯಂತ್ರವನ್ನು ಶಿರೂರಿಗೆ ತರಲಾಗಿದೆ.
ಈ ಬಗ್ಗೆ ಘಟನಾ ಸ್ಥಳದಲ್ಲಿ ಈ ದಿನ.ಕಾಮ್ ಜೊತೆಗೆ ಮಾತನಾಡಿದ ಶಾಸಕ ಸತೀಶ್ ಸೈಲ್, “ಈ ಯಂತ್ರವು ಸುಮಾರು 60 ಅಡಿ ಆಳದವರೆಗೆ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿದೆ. ನಿರಂತರ ಮಳೆ ಹಾಗೂ ಹವಾಮಾನ ವೈಪರೀತ್ಯದ ಪರಿಣಾಮ ಡ್ರಿಜ್ಜಿಂಗ್ ಯಂತ್ರವನ್ನು ತರಿಸಲಾಗುತ್ತಿಲ್ಲ. ಆದ್ದರಿಂದ ಈ ಯಂತ್ರವನ್ನು ತರಿಸಿದ್ದೇವೆ. ನೆಲದ ಮೇಲೆ ಇಟ್ಟುಕೊಂಡು ಇದು ಕಾರ್ಯಾಚರಿಸಲಿದೆ” ಎಂದು ತಿಳಿಸಿದರು.
“ಇದು 60 ಅಡಿ ಆಳದವರೆಗೆ ಕೆಲಸ ಮಾಡುವುದರಿಂದ ಮೃತದೇಹ ಸಿಕ್ಕರೂ ಸಿಗಬಹುದು. ಒಂದು ವೇಳೆ ಸಿಕ್ಕರೆ ನಮ್ಮ ಕಾರ್ಯಾಚರಣೆ ಇಂದಿಗೆ ಮುಗಿಯಲಿದೆ. ನನ್ನ ಪ್ರಕಾರ ಪೂರ್ವ ಈಶಾನ್ಯ ಹಾಗೂ ಪೂರ್ವ ಆಗ್ನೇಯದಲ್ಲಿ ಸಿಗುವ ವಿಶ್ವಾಸ ಇದೆ. ಆಗುತ್ತದೆಂಬ ನಿರೀಕ್ಷೆ. ಈ ಕಾರ್ಯಾಚರಣೆ ಆದಷ್ಟು ಶೀಘ್ರವಾಗಿ ಮುಗಿಯಬೇಕೆಂಬುದು ನಮ್ಮ ಬಯಕೆ. ಎಲ್ಲರ ಪ್ರಾರ್ಥನೆ ಇರಲಿ” ಎಂದು ಶಾಸಕ ಸತೀಶ್ ಸೈಲ್ ತಿಳಿಸಿದರು.
ವರದಿ: ಜಿ ಎಂ ಪವಿತ್ರಾ, ಮುಸ್ತಫಾ ಕೊಪ್ಪಳ
