ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕಾಂಗ್ರೆಸ್ ಪಕ್ಷದಲ್ಲಿ ಸಂಘಟನಾ ಚತುರ ಎಂದು ಖ್ಯಾತಿ ಹೊಂದಿರುವ ಮಾಜಿ ಸಚಿವ ಹಾಗೂ ಮಾಜಿ ಶಾಸಕ ವಿ.ಮುನಿಯಪ್ಪ ಅವರಿಗೆ 78ರ ಹುಟ್ಟು ಹಬ್ಬದ ಸಂಭ್ರಮದ ಹಿನ್ನೆಲೆ ಬೆಳಗ್ಗೆಯಿಂದಲೇ ಅವರ ನಿವಾಸ ಸ್ಥಳ ಹಂಡಿಗ್ನಾಳ ಗ್ರಾಮಕ್ಕೆ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಮತ್ತು ಅಭಿಮಾನಿಗಳು ಮೈಸೂರು ಪೇಟ ತೊಡಿಸಿ ಹೂಮಾಲೆ ಹಾಕಿ, ಕೇಕ್ ಕತ್ತರಿಸುವ ಮೂಲಕ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಕರ್ನಾಟಕ ರಾಜ್ಯದ ರೇಷ್ಮೆ, ಇಂಧನ ಮತ್ತು ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವರಾಗಿ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದ ಮಾಜಿ ಸಚಿವ ವಿ ಮುನಿಯಪ್ಪ ಅವರು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಈಗಲೂ ಶಾಶ್ವತವಾಗಿ ನಿಂತಿವೆ.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತ ಕೇಂದ್ರ ತಾಲೂಕ ಕಚೇರಿ, ಸಾಮರ್ಥ್ಯ ಸೌಧ, ಡಾಕ್ಟರ್ ಬಿ ಆರ್ ಅಂಬೇಡ್ಕರ್ ಜೋಡಿ ರಸ್ತೆ, ಪ್ರವಾಸಿ ಮಂದಿರ ನವೀಕರಣ, ಶಿಡ್ಲಘಟ್ಟ ನಗರ ಸಭೆಗೆ ಆದಾಯವನ್ನು ಹೆಚ್ಚಿಸಲು ವಾಣಿಜ್ಯ ಮಳಿಗೆಗಳ ನಿರ್ಮಾಣ ಮತ್ತು ಕ್ರೀಡಾಪಟುಗಳಿಗೆ ಅನುಕೂಲ ಕಲ್ಪಿಸಲು ನೆಹರು ಕ್ರೀಡಾಂಗಣವನ್ನು ನಿರ್ಮಿಸಿ, ಸರ್ಕಾರಿ ಶಾಲೆಗಳ ಮತ್ತು ಅಂಗನವಾಡಿ ಕೇಂದ್ರಗಳ ನಿರ್ಮಾಣದ ಜೊತೆಗೆ ಆರೋಗ್ಯ ಕ್ಷೇತ್ರದ ಸುಧಾರಣೆಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೊಸದಾಗಿ ನಿರ್ಮಾಣ ಮಾಡಿ ಅಭಿವೃದ್ಧಿಯ ಹರಿಕಾರ ಎಂದು ಹೆಸರು ಮಾಡಿದ್ದ ಮಾಜಿ ಸಚಿವರ ಕಾರ್ಯವೈಖರಿಯನ್ನು ಈಗಲೂ ಸಹ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗುತ್ತದೆ.
ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳಿಂದ ಹುಟ್ಟುಹಬ್ಬ ಆಚರಿಸಿದಕ್ಕಾಗಿ ಸಂತಸ ವ್ಯಕ್ತಪಡಿಸಿದ ಮಾಜಿ ಸಚಿವರು, ತಮ್ಮ ಅಭಿಮಾನ ಪ್ರೀತಿಗೆ ನಾನು ಸದಾ ಚಿರಋಣಿಯಾಗಿರುತ್ತೇನೆ ತಮ್ಮೆಲ್ಲರ ಸಹಕಾರ ಮತ್ತು ಬೆಂಬಲದಿಂದ ಕ್ಷೇತ್ರದ ಶಾಸಕನಾಗಿ ಮತ್ತು ಮಂತ್ರಿಯಾಗಿ ಕೈಲಾದಷ್ಟು ಸೇವೆ ಮಾಡಿದ್ದೇನೆ ಈ ಕ್ಷೇತ್ರ ಇಡೀ ಕರ್ನಾಟಕದಲ್ಲಿ ಮಾದರಿಯಾಗಿ ಅಭಿವೃದ್ಧಿ ಹೊಂದಬೇಕು ಅದೇ ನನ್ನ ಕನಸು ಅದನ್ನು ನನಸು ಮಾಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್. ಮುನಿಯಪ್ಪ,ಕೋಲಾರ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವಿ.ಸುಬ್ರಮಣಿ, ಕಾಂಗ್ರೆಸ್ ಮುಖಂಡ ಆಂಜಿನಪ್ಪ ಪುಟ್ಟು, ತಿಮ್ಮನಾಯಕನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ. ಆನಂದ್, ಕೆಎಂಎಫ್ ನಿರ್ದೇಶಕ ಶ್ರೀನಿವಾಸ್ ರಾಮಯ್ಯ, ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ಮುತ್ತೂರು ಚಂದ್ರೇಗೌಡ, ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಭೀಮೇಶ್, ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ಸುಗಟೂರು ನಾಗೇಶ್, ದಾಮೋದರ್, ಮುರಳಿ, ಮತ್ತಿತರರು ಉಪಸ್ಥಿತರಿದ್ದರು.