- ಮಠಗಳಿಗೆ ದುಡ್ಡು ಕೊಟ್ಟು ಜನರ ದಿಕ್ಕು ತಪ್ಪಿಸಿದರು
- ಕೆಲವರು ಮನಸ್ಸು ಬಿಚ್ಚಿ ಮುಕ್ತವಾಗಿ ಕೆಲಸ ಮಾಡಲಿಲ್ಲ
ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಬಳಿಕ ಚಾಮರಾಜನಗರಕ್ಕೆ ಭೇಟಿ ನೀಡಿರುವ ಮಾಜಿ ಸಚಿವ ವಿ ಸೋಮಣ್ಣ, ಕಾರ್ಯಕರ್ತರಿಗೆ ಕೃತಜ್ಞತಾ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಅವರು, “ತಮ್ಮ ಸೋಲಿಗೆ ಬಿಜೆಪಿಯ ಕೆಲ ಮುಖಂಡರೇ ಕಾರಣ. ನನಗೆ ಮಾಡಿದ ಪಾಪದ ಕೆಲಸ ಬೇರೆ ಯಾರಿಗೂ ಮಾಡುವುದು ಬೇಡ. ಪಕ್ಷಕ್ಕೆ ದ್ರೋಹ ಮಾಡಿದವರಿಗೆ ಚಪ್ಪಲಿಯಲ್ಲಿ ಹೊಡೀರಿ” ಎಂದು ಕಿಡಿಕಾರಿದ್ದಾರೆ.
“ಕೆಲ ಲೋಫರ್ ನನ್ ಮಕ್ಕಳು ಈ ಪಾಪದ ಕೆಲಸ ಮಾಡಿದ್ದಾರೆ. 7 ರಿಂದ 8 ಮಂದಿಯಿಂದ ಈ ಸೋಲುಂಟಾಯಿತು. ನನ್ನ ಸಮಾಜದವರೇ ನನಗೆ ಕೈ ಕೊಟ್ಟರು. ಯಾರ್ಯಾರೋ ಬೋರ್ಡ್ ಅಧ್ಯಕ್ಷರು ಮಠಗಳಿಗೆ ದುಡ್ಡು ಕೊಟ್ಟು ಜನರ ದಿಕ್ಕು ತಪ್ಪಿಸಿದರು” ಎಂದು ಬಿಜೆಪಿ ಮುಖಂಡರ ವಿರುದ್ಧ ಆರೋಪ ಮಾಡಿದರು.
“ಈಗ ಅವರು ಒಳೇಟು ಕೊಟ್ಟರು, ಇವರು ಒಳೇಟು ಕೊಟ್ಟರು, ಕ್ರಮ ಕೈಗೊಳ್ಳಿ ಎನ್ನುತ್ತಿದ್ದೀರಿ, ಈ ಕೆಲಸವನ್ನು ಆರು ತಿಂಗಳ ಹಿಂದೆ ಮಾಡಬೇಕಿತ್ತು. ಆಗ ಮಾಡಲಿಲ್ಲ- ಈಗ ಮಾಡಿ ಎನ್ನುತ್ತಿದ್ದೀರಿ, ನಾನು ನಿಮ್ಮನ್ನು ನಂಬಿಕೊಂಡಿದ್ದೆ ತಪ್ಪಾಯಿತು. ಮಾದೇಶ್ವರನ ಅಣೆ, ನನ್ನ ಮಕ್ಕಳಾಣೆ ನಾನಾಗಿ ಇಲ್ಲಿಗೆ ಬರಲಿಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಸಿದ್ದರಾಮಯ್ಯ ಸಿಎಂ, ಶಿವಕುಮಾರ್ ಡಿಸಿಎಂ: ಘೋಷಣೆಯೊಂದೇ ಬಾಕಿ
“ಹೈಕಮಾಂಡ್ ಹೇಳಿದ್ದರಿಂದ ಚಿನ್ನದಂತಹ ಗೋವಿಂದರಾಜ ನಗರ ಕ್ಷೇತ್ರ ಬಿಟ್ಟು ಇಲ್ಲಿಗೆ ಬಂದೆ. ಪಕ್ಷ ತಾಯಿಗೆ ಸಮಾನ ಪಕ್ಷ ದೊಳಗಿದ್ದು, ದ್ರೋಹ ಬಗೆಯುವುದು ಎಷ್ಟರಮಟ್ಟಿಗೆ ಸರಿ? ಬಿಜೆಪಿ ಜಿಲ್ಲಾಧ್ಯಕ್ಷ ನಾರಾಯಣಪ್ರಸಾದ್ ಅವರಿಗೆ ನೈತಿಕತೆ ಇದ್ದರೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರನ್ನು ಒದ್ದು ಓಡಿಸಲಿ” ಎಂದು ಆಗ್ರಹಿಸಿದರು.
“ಕೆಲವರು ಮನಸ್ಸು ಬಿಚ್ಚಿ ಮುಕ್ತ ಮನಸ್ಸಿನಿಂದ ಕೆಲಸ ಮಾಡಲಿಲ್ಲ. ದೊಡ್ಡ ಸ್ಥಾನಕ್ಕೆ ಸೋಮಣ್ಣ ಹೋಗುತ್ತಾರೆ ಎಂದಿದ್ದೆ ಮುಳುವಾಯಿತು” ಎಂದು ಪಕ್ಷದ ಕೆಲ ಮುಖಂಡರ ವಿರುದ್ಧ ಬೇಸರ ವ್ಯಕ್ತಪಡಿಸಿದರು.