ಯಾವುದೇ ರೀತಿಯ ರಾಜಾಶ್ರಯ ಇಲ್ಲದೇ ರಚಿತಗೊಂಡ ವಚನ ಸಾಹಿತ್ಯಕ್ಕೆ ಭಾರತೀಯ ಸಾಹಿತ್ಯ ಪರಂಪರೆಯಲ್ಲಿಯೇ ಹೆಚ್ಚಿನ ಮೌಲ್ಯವಿದೆ ಎಂದು ಸಾಹಿತಿ ಶಿವಕುಮಾರ ಕಟ್ಟೆ ಹೇಳಿದರು.
ವಚನಾಮೃತ ಕನ್ನಡ ಸಂಘದಿಂದ ಜ್ಞಾನನಿಧಿ ಚೆನ್ನಬಸವಣ್ಣನವರ ಕುರಿತು ನಗರದಲ್ಲಿ ಏರ್ಪಡಿಸಿದ್ದ ಉಪನ್ಯಾಸ ಹಾಗೂ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ʼಲೋಕಸಭೆ, ವಿಧಾನಸಭೆಯಲ್ಲಿ ಸಂಸದೀಯ ವ್ಯವಾಹಾರಗಳ ಸಚಿವರು ಹೇಗೆ ಕಾರ್ಯಕಲಾಪಗಳನ್ನು ನಡೆಸಿಕೊಂಡು ಹೋಗುತ್ತಾರೋ ಹಾಗೆಯೇ 12ನೇ ಶತಮಾನದಲ್ಲಿ ಕಲ್ಯಾಣದ ಅನುಭವ ಮಂಟಪದ ಚರ್ಚೆ, ಸಂವಾದ ಎಲ್ಲವುಗಳು ಚೆನ್ನಬಸವಣ್ಣನವರು ಬರಹ ರೂಪದಲ್ಲಿ ದಾಖಲಿಸಿದ್ದರುʼ ಎಂದು ಹೇಳಿದರು.
ಶಿಕ್ಷಕ ಶಿವಲಿಂಗ ಹೇಡೆ ವಿಶೇಷ ಉಪನ್ಯಾಸ ನೀಡಿ, ʼಚೆನ್ನಬಸವಣ್ಣ ಅವಿರಳ ಜ್ಞಾನಿ, ಷಟಸ್ಥಲ ಸಿದ್ಧಾಂತದ ರೂವಾರಿ. ಬಾಲ್ಯದಲ್ಲಿಯೇ ಒಳ್ಳೆಯ ಜ್ಞಾನ ಸಂಪಾದಿಸುವ ಪರಿಸರ ಸಿಕ್ಕಿತು. ಬಸವಣ್ಣನವರು ಗುರುಗಳ ಹತ್ತಿರ ಪಾಠ ಕಲಿಯುವಾಗ ದೂರದಿಂದಲೇ ಮಾತುಗಳನ್ನು ಕಿವಿಗೊಟ್ಟು ಕೇಳಿ ಅಪಾರವಾದ ಜ್ಞಾನ ಸಂಪಾದಿಸಿದ್ದರು. ನಮ್ಮ ಬದುಕು ಹಸನಾಗಿಸಲು ನಾವು ಹೇಗೆ ಸಂವಿಧಾನ ರಚಿಸಿಕೊಂಡಿದ್ದೆವೊ ಹಾಗೆಯೇ ಅಂದಿನ ಬದುಕಿಗೆ ಅಷ್ಟಾವರಣ, ಪಂಚಾಚಾರ, ಷಟಸ್ಥಲದ ಚೌಕಟ್ಟು ಹಾಕಿಕೊಂಡು ಸಾಧನೆಗೆ ಮೆಟ್ಟಿಲುಗಳನ್ನು ಹಾಕಿಕೊಟ್ಟವರು ಚೆನ್ನಬಸವಣ್ಣʼ ಎಂದು ಪ್ರತಿಪಾದಿಸಿದರು.
ವಚನಾಮೃತ ಕನ್ನಡ ಸಂಘದ ಅಧ್ಯಕ್ಷ ಪ್ರೊ.ಸಿದ್ರಾಮಪ್ಪಾ ಮಾಸಿಮಾಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸಂಜೀವಕುಮಾರ ಅತಿವಾಳೆ, ಜಾನಪದ ಅಕಾಡೆಮಿ ಸಹ ಸದಸ್ಯ ವಿಜಯಕುಮಾರ ಸೋನಾರೆ, ಪರಮೇಶ್ವರ ಭೂಶೆಟ್ಟಿ ದಂಪತಿಯನ್ನು ಗೌರವಿಸಲಾಯಿತು.

ಸಾಹಿತಿಗಳಾದ ಎಸ್.ಎಸ್. ಹೊಡಮನಿ, ರಮೇಶ ಬಿರಾದಾರ, ನಿಜಲಿಂಗ ರಗಟೆ, ಎಂ.ಎ.ಪಾಟೀಲ, ಬಸವಾ ಮಳ್ಳಿ, ಉಮಾದೇವಿ ಬಾಪೂರೆ, ರೇಣುಕಾ ಮಳ್ಳಿ, ಸ್ವರೂಪರಾಣಿ ನಾಗೂರೆ, ಅಂಬಿಕಾ ಬಿರಾದಾರ, ಗೀತಾಂಜಲಿ ಪಾಟೀಲ ಚೆನ್ನಬಸವಣ್ಣನವರ ಕುರಿತು ಕವಿತೆ ವಾಚಿಸಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಆಸ್ತಿಗಾಗಿ ತಂದೆ, ತಾಯಿಯನ್ನು ಕೊಂದ ಮಗ; ಬೆಚ್ಚಿಬಿದ್ದ ಜನ
ಜಿಜಾಮಾತಾ ಕನ್ಯಾ ಪ್ರೌಢ ಶಾಲೆಯ ಮಕ್ಕಳು ನಾಡಗೀತೆ ನಡೆಸಿಕೊಟ್ಟರು. ಸಂತೋಷ ಮಂಗಳೂರೆ ನಿರೂಪಿಸಿದರು. ಪರಮೇಶ್ವರ ಬಿರಾದಾರ ಸ್ವಾಗತಿಸಿದರು, ಬಸವರಾಜ ಬಿರಾದಾರ ವಂದಿಸಿದರು.