ಇತ್ತೀಚೆಗೆ ಸೇಡಂನಲ್ಲಿ ನಡೆದ ಭಾರತೀಯ ಸಂಸ್ಕೃತಿ ಉತ್ಸವದ ಹೆಸರಿನ ವೈದಿಕಾಚರಣೆಯ ಮನುವಾದಿ ಮತ್ತು ವಚನ ಸಿದ್ಧಾಂತ ವಿರೋಧಿ ಕಾರ್ಯಕ್ರಮಕ್ಕೆ ತಾವು ಭಾಗವಹಿಸಿದ್ದು ತಪ್ಪೆಂಬುದನ್ನು ಒಪ್ಪಿಕೊಳ್ಳಬೇಕೆಂದು ಆಗ್ರಹಿಸಿ ಬೀದರ್‌ನ ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಗಂಗಾಂಬಿಕಾ ಪಾಟೀಲ್ ಅವರಿಗೆ ಸಾಹಿತಿಗಳ, ಲೇಖಕರ ಗುಂಪೊಂದು ಬರೆದಿರುವ ಬಹಿರಂಗ ಪತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಬಹಿರಂಗ ಪತ್ರದಲ್ಲಿ ಏನಿದೆ?
ಸಹೋದರಿ ಡಾ.ಗಂಗಾಂಬಿಕಾ ಪಾಟೀಲ ಅವರಲ್ಲಿ ಅನಂತ ಶರಣು ಶರಣಾರ್ಥಿ.
ʼತಮಗೆ ಬಹಿರಂಗ ಪತ್ರ ಬರೆಯುವ ಅನಿವಾರ್ಯತೆಯು ಸೃಷ್ಟಿಯಾಗಿದೆ. ಅನೇಕ ವರ್ಷಗಳಿಂದ ಶರಣ ತತ್ವಗಳ ಕಾರಣದಿಂದ ನಿಮ್ಮ ನಮ್ಮ ಸಂಬಂಧಗಳು ಜೊತೆಗೂಡಿ ಬಂದಿವೆ. ಅನೇಕ ಭಿನ್ನಾಭಿಪ್ರಾಯಗಳೂ ಸಹಜವಾಗಿಯೇ ಇದ್ದೇ ಇವೆ. ಆದರೆ ವಚನ ಸಿದ್ಧಾಂತದ ಕಾರಣದಿಂದ ಸಂಬಂಧದ ಕೊಂಡಿಯಿದೆ. ದಾಕ್ಷಿಣ್ಯಪರ ನಾನಲ್ಲವಯ್ಯ ಲೋಕವಿರೋಧಿ ಶರಣನಾರಿಗಂಜುವನಲ್ಲ ಎಂಬ ಬಸವಣ್ಣನವರ ವಾಣಿಯಂತೆ ಪರಸ್ಪರ ಅಭಿಪ್ರಾಯಗಳನ್ನು ಸಮಷ್ಠಿ ಪ್ರಜ್ಞೆಯ ನೆಲೆಯಲ್ಲಿ ಮಂಡಿಸುತ್ತ, ಸಂಘರ್ಷಕ್ಕೆ ಒಡ್ಡಿಕೊಳ್ಳುತ ಬಂದಿದ್ದೇವೆʼ ಎಂದು ತಿಳಿಸಿದ್ದಾರೆ.
ʼವೈದಿಕತ್ವದ ಸಿದ್ಧಾಂತಿಗಳು ವಚನ ತತ್ವ ನಾಶ ಮಾಡಲು ಬಹುದೊಡ್ಡ ಷಡ್ಯಂತ್ರ ಹೆಣೆದಿರುವುದು ತಮಗೂ ಗೊತ್ತಿದೆ. ವಚನ ದರ್ಶನ ಕೃತಿಯ ಮೂಲಕ ಅವರ ಬಸವ ವಿರೋಧಿ ಹಿಡನ್ ಅಜೆಂಡಾ ಬಯಲಿಗೆ ಬಂತು. ಜಾಗತಿಕ ಲಿಂಗಾಯತ ಮಹಾಸಭಾ, ಶರಣ ತತ್ವ ಪ್ರಣೀತರು, ವಿಚಾರವಂತರು, ಸಮಸ್ತ ಕಾಯಕ ಬಂಧುಗಳು ವಚನ ದರ್ಶನ ಕೃತಿಯನ್ನು ಮತ್ತದರ ಉದ್ಧೇಶವನ್ನು ತೀವ್ರವಾಗಿ ಖಂಡಿಸಿದರು ಮತ್ತು ತಿರಸ್ಕರಿಸಿದರುʼ ಎಂದಿದ್ದಾರೆ.
ʼಕಲ್ಯಾಣ ನೆಲದಲ್ಲಿ ಶರಣರ ಎಳೆ ಹೂಟೆ ಮಾಡಿ ವಚನ ಸಾಹಿತ್ಯ ನಾಶಗೈಯಲು ಮತ್ತು ಶರಣರನ್ನು ಹಿಮ್ಮೆಟ್ಟಿಸಲು ವೈದಿಕರು ನಡೆಸಿದ ಕ್ರೌರ್ಯದ ದಾಳಿ ಕಾರಣವಾಗಿದೆ. ವೈದಿಕರ ಭಯೋತ್ಪಾದಕ ಕ್ರೌರ್ಯಕ್ಕೂ ಹೆದರದ ನಮ್ಮ ಶರಣರು ಪ್ರಾಣವನ್ನೇ ಪಣಕ್ಕಿಟ್ಟು ಎದುರಿಸಿದರು. ಮತ್ತು ವಚನ ಸಾಹಿತ್ಯವನ್ನು ಅತ್ಯಂತ ಸಮರಧೀರತೆಯಿಂದ ಕಾಳಜಿಯಿಂದ ರಕ್ಷಿಸಿದರು. ಯಾರು ಅಂದು ಎಳೆಹೂಟೆ ಮಾಡಿರುವರೋ, ಯಾರು ಅಂದು ವಚನ ಸಾಹಿತ್ಯ ನಾಶ ಮಾಡಲು ಹವಣಿಸಿದರೋ, ಯಾರು ಅಂದು ಶರಣರ ಮೇಲೆ ಹಲ್ಲೆ ಕೊಲೆ ಮಾಡಿರುವರೋ ಇಂದು ಅದೇ ಮನುವಾದಿಗಳು, ವೈದಿಕರು ಪುನಃ ಎಲ್ಲ ತೆರನ ದಾಳಿಗೆ ಸಜ್ಜಾಗಿದ್ದಾರೆʼ ಎಂದು ಎಚ್ಚರಿಸಿದ್ದಾರೆ.
ʼವಚನ ಸಾಹಿತ್ಯದ ಮೇಲೆ ಮತ್ತು ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದಾರೆ. ಅವರೇ ಭಾರತೀಯ ಸಂಸ್ಕೃತಿಯ ಹೆಸರಿನಲ್ಲಿ ಸೇಡಂನಲ್ಲಿ ಆರ್‌ಎಸ್‌ಎಸ್ ಕಟ್ಟಾಳು ಬಸವರಾಜ ಪಾಟೀಲ ಸೇಡಂ ನೇತೃತ್ವದಲ್ಲಿ ಸಂಘೋತ್ಸವ ಮಾಡಿದ್ದಾರೆ. ಯಾರವರು? ಸಕಲ ಜೀವರಿಗೆ ಲೇಸು ಬಯಸುವ ಸಮಾನತೆಯ ತತ್ವವುಳ್ಳ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ಕೊಡಬಾರದು ಎಂದು ಘಂಟಾಘೋಷವಾಗಿ ಹೇಳಿದವರು, ಕೊಡಬಾರದೆಂದು ಶಿಫಾರಸ್ಸು ಮಾಡಿದವರು. ವಚನ ಸಾಹಿತ್ಯವು ವೈದಿಕತೆಯನ್ನು ವೇದಾಗಮಗಳನ್ನು ಮುಂದುವರೆಸಿದೆ ಎಂದು ಸುಳ್ಳನ್ನು ಬಿತ್ತುತ್ತಿರುವವರುʼ ಎಂದು ಹೇಳಿದ್ದಾರೆ.
ʼಅವೈದಿಕ ನೆಲೆಯ ವಚನ ಸಾಹಿತ್ಯ ಮತ್ತು ಚಳುವಳಿಯು ಶ್ರಮ ಸಂಸ್ಕೃತಿಯನ್ನು ಎತ್ತಿ ಹಿಡಿದು, ಭೇದ ಭಾವದ ಅಸಮಾನತೆಯ ವೈದಿಕ ವರ್ಣ ವ್ಯವಸ್ಥೆಯನ್ನು ತಿರಸ್ಕರಿಸಿದರೆ ಈ ಪುರೋಹಿತಶಾಹಿಗಳು ನಮ್ಮ ಶರಣರನ್ನು, ಅವರ ತತ್ವವನ್ನೂ ನಾಶ ಮಾಡುವ ಹುನ್ನಾರ ಹೊಂದಿದ್ದಾರೆ. ಹನ್ನೆರಡನೆಯ ಶತಮಾನದಲ್ಲಿ ಹೇಗೆ ವಿಪ್ಲವವು ನಡೆಯಿತೊ, ಈಗ ಹಾಗೆಯೇ ವಚನ ಸಾಹಿತ್ಯ ಮತ್ತು ಚಳುವಳಿಯನ್ನು ಉಳಿಸಕೊಳ್ಳಲೇಬೇಕಾದ ಸಂಘರ್ಷದ ದಿನಗಳು ನಮ್ಮ ಮುಂದಿವೆʼ ಎಂದರು.
ʼಈ ಹೊತ್ತಿನಲ್ಲಿ ಎಲ್ಲ ವೈಯಕ್ತಿಕ ಸ್ವಾರ್ಥದ ಹಂಗು ಹರಿದು ಶರಣ ಸಿದ್ಧಾಂತದ ಉಳಿವಿಗಾಗಿ ನಿಲ್ಲುವವರೆ ನಿಜವಾದ ಶರಣರು. ಈ ಎಲ್ಲ ಕಾರಣದಿಂದಲೇ ನಾಡಿನ ಬಸವವಾದಿಗಳು, ಶರಣ ಸಿದ್ಧಾಂತಿಗಳು ತಮಗೆ ವಿನಂತಿಸಿದ್ದೇನೆಂದರೆ, ತಾವು ಬಸವ ತತ್ವದ ಪರ ನಿಲ್ಲಬೇಕು ಹಾಗೂ ಬಸವ ವಿರೋಧಿಗಳೊಂದಿಗೆ ಹೋಗಬಾರದು ಎಂದು ಅತ್ಯಂತ ಕಳಕಳಿಯಿಂದ ದೃಢವಾಗಿ ಹೇಳಿದ್ದರು. ವೈದಿಕರೊಂದಿಗೆ ವೇದಿಕೆ ಹಂಚಿಕೊಳ್ಳುವಿರಿ ಅಂತಾದರೆ ಲಿಂಗ ಕಳಚಿಟ್ಟು ಹೋಗಿ ಎಂದು ಗಣಾಚಾರಿ ಮನಸುಗಳು ಆಗ್ರಹಿಸಿದ್ದು ಚರಿತ್ರೆಯಲ್ಲಿ ದಾಖಲೆಯಾಯಿತು. ಆದರೆ ತಾವು ಕೇಳಲಿಲ್ಲ. ಆಳದ ಮತ್ತು ದೂರದ ದೃಷ್ಟಿಯಿಂದ ಅದೇಕೆ ವಿಮುಖರಾದಿರಿ? ಅರಿಯದಾದೆವುʼ ಎಂದು ಪ್ರಶ್ನಿಸಿದ್ದಾರೆ.
ʼಶರಣ ಬಂಧುಗಳಾದ ತಾವು ಅದ್ಹೇಗೆ ವೈದಿಕ ಆಚರಣೆಗಳೊಂದಿಗೆ ಜೋಡಿಸಿಕೊಂಡಿರುವಿರಿ? ತಿಳಿಯದು. ಅಲ್ಲಿನ ವೇದಿಕೆಯಲ್ಲಿ ಕೇವಲ ಆರ್‌ಎಸ್‌ಎಸ್ ತತ್ವಸಿದ್ಧಾಂತಗಳ ಪುಂಗಿ ಊದಲಾಗಿದೆ. ಅವೈಜ್ಞಾನಿಕ ವಿಲಾಪ ಮಾಡಲಾಗಿದೆ. ಅದಕ್ಕಿಂತ ನಾಚಿಕೆಗೇಡಿನ ಸಂಗತಿ ಎಂದರೆ ಕೊನೆಯ ದಿನ ಹೋಮ ಹವನ ಮಾಡಿ ತುಪ್ಪ ಅಕ್ಕಿ, ಬೇಳೆ, ವಸ್ತ್ರಗಳನ್ನು ಬೆಂಕಿಗೆ ಆಹುತಿ ಮಾಡಿ ಪೂರ್ಣಾಹುತಿ ಕೊಡಲಾಗಿದೆ. ಜನಿವಾರ ಧಾರಿಗಳಿಂದ ಪೂಜೆ ಮಾಡಿಸಿದ ಅವರು ವಚನ ಮಂತ್ರ ಪಠಣ ನಿಮ್ಮಿಂದಲೆ ಮಾಡಿಸಬೇಕಿತ್ತಲ್ಲ. ನಾವುಗಳು ನಿಮ್ಮನ್ನು ಗುರುವೆಂದು ಸ್ವೀಕರಿಸಿದರೆ ನೀವು ಜನಿವಾರಧಾರಿಗಳ ಬಳಿಗೆ ಹೋಗಿ ಏನು ಸಾಧಿಸಿದೀರಿ? ಸಂಘದ ಪ್ರಚಾರಕರು ವೇದಿಕೆ ಮೇಲೆ. ಬಡ ಶೂದ್ರರು ಅವರ ಸೇವೆ ಮಾಡುತ್ತ ಬಸವಳಿದು ಹೋಗಿದ್ದಾರೆ. ನೀವು ಅಲ್ಲಿ ಹೋಗಿ ಅವರ ಆಚರಣೆಗಳನ್ನು ಖಂಡಿಸಿದ್ದೀರಾ?. ಜನಿವಾರ ಧಾರಿಗಳ ಸೇವೆ ಮಾಡಲು ನೀವೆಲ್ಲ ಹೋಗಬೇಕಿತ್ತೆ?ʼ ಎಂದು ಪ್ರಶ್ನಿಸಿದ್ದಾರೆ.
ʼಈಗ ಬೀದರನಲ್ಲಿ ವಚನ ವಿಜಯೋತ್ಸವ ಮಾಡುತ್ತಿರುವಿರಿ. ಸಂತೋಷ. ಅನೇಕ ಮೌಢ್ಯಗಳನ್ನು ವ್ಯಕ್ತಿ ಪ್ರಾಧಾನ್ಯತೆಯನ್ನು ಬಿಟ್ಟು ವಚನಗಳ ಮೆರವಣಿಗೆ ಇತ್ಯಾದಿಯನ್ನು ನಾಡಿಗರು ಸಂಭ್ರಮಿಸಿದ್ದಾರೆ. ಆದರೆ ಈ ಹೊತ್ತು ನೀವು ಬಸವ ನಿಷ್ಠೆಯನ್ನು ತೋರುವಲ್ಲಿ ಮತ್ತೆ ದ್ವಂದ್ವ ಮೆರೆದಿರುವಿರಿ. ಸರಕಾರಿ ಕಾರ್ಯಕ್ರಮಗಳಿಗೆ ಪ್ರೊಟೋಕಾಲ್ ಇರುವುದು. ನಮಗ್ಯಾವ ಪ್ರೋಟೊಕಾಲ? ಬಸವ ತತ್ವವಾದಿಗಳಿಗೆ ತತ್ವದ ಹಂಗು ಮಾತ್ರ ಇರಬೇಕಾದದ್ದು. ವ್ಯಕ್ತಿಗಳ, ರಾಜಕೀಯದ, ಅಧಿಕಾರ ಸಂಪತ್ತಿನ ಹಂಗು ಬೇಕಿಲ್ಲ. ವಚನ ತತ್ವ ವಿರೋಧಿಗಳನ್ನು ವಚನ ವಿಜಯೋತ್ಸವಕ್ಕೆ ಕರೆಯುವ ಅಗತ್ಯವಿಲ್ಲ. ಆದಾಗ್ಯೂ ತಾವು ಅಂಥ ಅನೇಕ ವ್ಯಕ್ತಿಗಳನ್ನು ಕರೆದಿರುವಿರಿ. ಈ ತೆರನ ರಾಜಿಕೋರ ನಿಲುವಿನಿಂದ ವಚನ ಸಿದ್ಧಾಂತ ಉಳಿಸಲಾಗದು. ಈ ಎಚ್ಚರ ಮತ್ತು ದೃಢತೆ ಅಗತ್ಯವಾಗಿದೆ. ವಚನ ವಿಜಯೋತ್ಸವದ ಈ ಸಮಯದಲ್ಲಿ ನಾಡಿನ ಶರಣ ಸಿದ್ಧಾಂತಿಗಳು ತಮ್ಮಲ್ಲಿ ಆಗ್ರಹವೊಂದನ್ನು ಮಂಡಿಸುತ್ತಿದ್ದೇವೆʼ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಅದೇನೆಂದರೆ;
ʼವಚನ ವಿಜಯೋತ್ಸವದ ಆರಂಭದಲ್ಲಿಯೇ; ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ವಿರೋಧಿಸಿದವರನ್ನು ವಚನ ವಿಜಯೋತ್ಸವದಲ್ಲಿ ಭಾಗವಹಿಸಲು ಬಿಡಬಾರದು. ವಚನ ದರ್ಶನ ಕೃತಿಯನ್ನು ಮತ್ತು ಅದರ ವಚನ ಸಿದ್ಧಾತ ವಿರೋಧಿ ಧೋರಣೆಯನ್ನು ತೀವ್ರವಾಗಿ ಖಂಡಿಸಬೇಕುʼ ಎಂದು ಒತ್ತಾಯಿಸಿದ್ದಾರೆ.
ʼಸೇಡಂನಲ್ಲಿ ನಡೆದ ಭಾರತೀಯ ಸಂಸ್ಕೃತಿ ಉತ್ಸವದ ಹೆಸರಿನ ವೈದಿಕಾಚರಣೆಯ ಮನುವಾದಿ ಮತ್ತು ವಚನ ಸಿದ್ಧಾಂತ ವಿರೋಧಿ ಕಾರ್ಯಕ್ರಮಕ್ಕೆ ತಾವು ಭಾಗವಹಿಸಿದ್ದು ತಪ್ಪೆಂಬುದನ್ನು ಒಪ್ಪಿಕೊಳ್ಳಬೇಕು. ಹೀಗೆ ಮಾಡಲಾಗದಿದ್ದರೆ ವಚನ ವಿಜಯೋತ್ಸವ ನಡೆಸಲು ಶರಣರ ಆಶಯಗಳ ನೈತಿಕ ಬೆಂಬಲ ಇರುವುದಿಲ್ಲ. ಮತ್ತು ಅಂತಹ ನೈತಿಕತೆಯೂ ತಮಗಿರುವುದಿಲ್ಲ. ಬಸವಣ್ಣನ ಹೆಸರಿನಲ್ಲಿ ಸ್ವಹಿತಾಸಕ್ತಿ ಪೂರೈಸಿಕೊಳ್ಳುವ ಪ್ರಕ್ರಿಯೆ ಇದೆಂದು ತಾವೇ ಪುರಾವೆಯೊದಗಿಸಿ ಮನನ ಮಾಡಿದಂತಾಗುವುದುʼ ಎಂದಿದ್ದಾರೆ.
ʼಎನಗಿಂತ ಕಿರಿಯರಿಲ್ಲ. ಶಿವಭಕ್ತರಿಗಿಂತ ಹಿರಿಯರಿಲ್ಲʼ ಎಂಬ ಬಸವಣ್ಣನವರ ವಾಣಿಯಂತೆ ನಡೆಯಬೇಕಾದದ್ದು ನಮ್ಮ ಕರ್ತವ್ಯವೇ ಆಗಿದೆ. ನಾಡಿನ ಸಮಸ್ತ ವಿಚಾರವಂತರ, ಲಿಂಗವಂತರ, ಕಾಯಕ ಜೀವಿಗಳ ಮತ್ತು ವಚನ-ಸಂವಿಧಾನ ಸಿದ್ಧಾಂತವಾದಿಗಳ ಈ ಭಿನ್ನಹವನ್ನು ತಾವು ಒಪ್ಪಿ ಮೇಲಿನ ಎರಡೂ ಆಗ್ರಹವನ್ನು ಜಾರಿ ಮಾಡುವಿರಿ ಎಂದು ನಂಬುತ್ತೇವೆʼ ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ದೆಹಲಿ ಫಲಿತಾಂಶ | 48 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ, ಎಎಪಿಯ ಪ್ರಮುಖರಿಗೆ ಹಿನ್ನಡೆ
ಆರ್.ಕೆ.ಹುಡಗಿ, ಡಾ.ಮೀನಾಕ್ಷಿ ಬಾಳಿ, ಡಾ.ಕಾಶಿನಾಥ ಅಂಬಲಗಿ,ಕೆ.ನೀಲಾ, ಡಾ.ಪ್ರಭು ಖಾನಾಪುರೆ, ಟಿ.ಧನರಾಜ, ರವೀಂದ್ರ ಶಾಬಾದಿ, ಸಿ.ಬಿ.ಪಾಟಿಲ ಓಕಳಿ, ಮಾರುತಿ ಗೋಖಲೆ, ವಿಮಲ ಕೆ.ಎಸ್, ದತ್ತಾತ್ರೇಯ ಇಕ್ಕಳಕಿ, ಶ್ರೀಶೈಲ ಘೂಳಿ, ಕೋದಂಡರಾಮಪ್ಪ
ಚಂದಮ್ಮ ಗೋಳಾ, ಲವಿತ್ರ, ಕಲ್ಕಯ್ಯ ಚಿಕ್ಕಮಗಳೂರು, ಭಾಗ್ಯ ಸಿ.ಹೆಚ್, ಬಸವರಾಜ ಸೂಳಿಭಾವಿ, ಕೆ.ಬಿ.ವೀರಲಿಂಗನಗೌಡ್ರ ಹೇಮಲತಾ ಮೂರ್ತಿ, ಗಣೇಶ ರಾಠೋಡ, ಚನ್ನಪ್ಪ ಗೂಗಳೊಟ್ಟರ್, ಮಹಾಂತಪ್ಪ ನಂದೂರ, ನಾಗಪ್ಪ ರಾಯಚೂರಕರ, ಚಂದ್ರಶೇಖರ ರೋಣದ, ಪ್ರವೇಣಿ ಸ್ಪೂರ್ತಿ, ನಂದಕುಮಾರ ಕುಂಬ್ರಿಉಬ್ಬು ಸೇರಿದಂತೆ ಮತ್ತಿತರರು ಈ ಪತ್ರಕ್ಕೆ ಸಹಮತ ಸೂಚಿಸಿದ್ದಾರೆ.