ವಾಲ್ಮೀಕಿ ಅಭಿವೃದ್ದಿ ನಿಗಮದಲ್ಲಿ ನಡೆದಿದೆ ಎನ್ನಲಾಗಿರುವ 187 ಕೋಟಿ ರೂ. ಅಕ್ರಮ ವ್ಯವಹಾರ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಅಕ್ರಮದಲ್ಲಿ ಭಾಗಿಯಾಗಿರುವ ಸಚಿವರು, ನಿಗಮದ ಅಧ್ಯಕ್ಷರೂ ಸೇರಿದಂತೆ ಅಧಿಕಾರಿಗಳ ವಿರುದ್ದ ಸಮಗ್ರ ತನಿಖೆ ನಡೆಸಬೇಕು ಎಮದು ಹೈದ್ರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕ ಸಂಘದ ಮುಖಂಡ ಎನ್ ರಘುವೀರ ನಾಯಕ ಆಗ್ರಹಿಸಿದರು.
ರಾಯಚೂರಿನಲ್ಲಿ ಪ್ರತಿಕಾಗೋಷ್ಟಿ ನಡೆಸಿ ಅವರು ಮಾತನಾಡಿದರು. “ವಾಲ್ಮೀಕಿ ನಿಗಮದಲ್ಲಿ ನಿರಂತರ ಅವ್ಯವಹಾರಗಳು ನಡೆಯುತ್ತಿದು ಅಪಖ್ಯಾತಿಗೆ ಗುರಿಯಾಗಿದೆ. ಪ್ರತಿ ಆರ್ಥಿಕ ವರ್ಷಕ್ಕೆ ಬಿಡುಗಡೆಯಾದ ಅನುದಾನ ಪೂರ್ಣ ಪ್ರಮಾಣದಲ್ಲಿ ಸದ್ಭಳಕೆ ಮಾಡಿಕೊಳ್ಳದೇ ನಿಗಮದ ಬ್ಯಾಂಕಿನಲ್ಲಿಟ್ಟು ಅವ್ಯವಹಾರ ಮಾಡಲಾಗಿದೆ” ಎಂದು ದೂರಿದ್ದಾರೆ.
“ಸರ್ಕಾರ ತಾನೇ ರಚಿಸಿರುವ ಎಸ್‌ಐಟಿಯಿಂದ ಸಚಿವರು, ಶಾಸಕರ ವಿರುದ್ದ ಕ್ರಮ ಕೈಗೊಳ್ಳಲು ಆಗುವದಿಲ್ಲ. ಇಷ್ಡೊಂದು ದೊಡ್ಡ ಮಟ್ಟ ಅನುದಾನ ಬೇರೆ ಖಾತೆಗಳಿಗೆ ವರ್ಗಾಯಿಸಿರುವ ಕುರಿತು ಮುಖ್ಯಮಂತ್ರಿಗಳು, ನಿಗಮದ ಅಧ್ಯಕ್ಷರಿಗೆ ಗೊತ್ತಿಲ್ಲದೇ ನಡೆಯಲು ಸಾಧ್ಯವಿಲ್ಲ. ಎಸ್‌ಟಿ ಸಮುದಾಯ ಸಚಿವರು, ಶಾಸಕರುಗಳೇ ಅಕ್ರಮದ ಆರೋಪ ಎದುರಿಸುತ್ತಿರುವದು ನೋವಿನ ಸಂಗತಿ. ಸಮೂದಾಯ ಅಭಿವೃದ್ದಿಗೆ ಬದ್ದತೆ ತೋರಬೇಕಿದ್ದ ಸಮೂದಾಯ ಶಾಸಕರುಗಳೇ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದ್ದು, ಅದು ಸಮುದಾಯಕ್ಕೆ ಮಾಡಿದ ಅಪಮಾನ” ಎಂದಿದ್ದಾರೆ.
“ಸಿಬಿಐ ತನಿಖೆಗೆ ಒತ್ತಾಯಿಸಿ ರಾಜ್ಯ ಮಟ್ಟದಲ್ಲಿ ಹೋರಾಟ ರೂಪಿಸುವ ಕುರಿತಂತೆ ಸಮೂದಾಯ ಸ್ವಾಮೀಜಿಗಳು ಸೇರಿದಂತೆ ಮುಖಂಡರೊಂದಿಗೆ ಚರ್ಚಿಸಲಾಗುತ್ತದೆ. ನಂತರ ಹೋರಾಟ ರೂಪಿಸಲಾಗುತ್ತದೆ. ಸರ್ಕಾರವೇ ಸಿಬಿಐ ತನಿಖೆಗೆ ವಹಿಸುವ ಮೂಲಕ ಸಮೂದಾಯ ಅಭಿವೃದ್ದಿಗೆ ಬಳಕೆಯಾಗಬೇಕಿದ್ದ ಹಣವನ್ನು ದುರ್ಬಳಕೆ ಮಾಡಲು ಕಾರಣವಾಗಿರುವ ಜನಪ್ರತಿನಿಧಿಗಳು, ಆಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ರಮೇಶ ನಾಯಕ, ರಾಮಕೃಷ್ಣ ನಾಯಕ ಉಪಸ್ಥಿತರಿದ್ದರು.
ವರದಿ : ಹಫಿಜುಲ್ಲ