ರಾಯಚೂರು ನಗರದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ವಿದ್ಯಾರ್ಥಿಗಳ ಪರೀಕ್ಷೆ ಮುಗಿದು 160 ದಿನ ಕಳೆದರೂ ಫಲಿತಾಂಶ ಪ್ರಕಟವಾಗಿಲ್ಲ. ಫಲಿತಾಂಶದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳು ಪರದಾಟ ನಡೆಸುವಂತಾಗಿದೆ.
ಪದವಿಯ ಪ್ರಥಮ ಸೆಮಿಸ್ಟರ್ ಮತ್ತು ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿಗಳು ಪರೀಕ್ಷೆ ಬರೆದು ಐದು ತಿಂಗಳ ಗತಿಸಿದರೂ ಫಲಿತಾಂಶ ಪ್ರಕಟವಾಗಿಲ್ಲ ಎಂದು ಗೋಳು ತೋಡಿಕೊಳ್ಳುತ್ತಿದ್ದಾರೆ. ಅಂತಿಮ ವರ್ಷದ ವಿದ್ಯಾರ್ಥಿಗಳು ಮುಂದಿನ ವ್ಯಾಸಂಗಕ್ಕೆ ತೆರಳಲು ತೊಡಕು ಉಂಟಾಗಿದ್ದು, ವಿಶ್ವವಿದ್ಯಾಲಯ ಆಡಳಿತ ಮಂಡಳಿ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ಆದರೆ, ಯಾರೊಬ್ಬರೂ ವಿದ್ಯಾರ್ಥಿಗಳ ಗೋಳು ಕೇಳೋರಿಲ್ಲದಂತಾಗಿದೆ.
ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗುತ್ತಿರುವ ಈ ವಿಳಂಬ ನೀತಿಯನ್ನು ವಿದ್ಯಾರ್ಥಿಗಳು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಫಲಿತಾಂಶಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿರುವ ವಿದ್ಯಾರ್ಥಿಗಳಿಗೆ ವಿವಿ ನಿರಾಸೆ ಮೂಡಿಸಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚಲ್ಲಾಟವಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಫಲಿತಾಂಶ ವಿಳಂಬ ಕುರಿತು ವಿಶ್ವವಿದ್ಯಾಲಯದಿಂದ ಇಲ್ಲಿಯವರೆಗೆ ಯಾವುದೇ ಸ್ಪಷ್ಟನೆ ಬಂದಿಲ್ಲ. ಇದು ವಿವಿ ವ್ಯಾಪ್ತಿಯಲ್ಲಿನ ಕಾಲೇಜು ಆಡಳಿತ ಮಂಡಳಿಯವರ ಅಸಮಾಧಾನಕ್ಕೂ ಕಾರಣವಾಗಿದೆ.
ಈ ಬಗ್ಗೆ ಪದವಿ ವಿದ್ಯಾರ್ಥಿ ಪ್ರಶಾಂತ ಮಾತನಾಡಿ, ʼವಿದ್ಯಾರ್ಥಿಗಳು ಪ್ರಥಮ ವರ್ಷ ಮುಗಿಸಿ ದ್ವಿತೀಯ ವರ್ಷದ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದಾರೆ. ಆದರೂ ಪ್ರಥಮ ವರ್ಷದ ಮೊದಲನೇ ಸೆಮಿಸ್ಟರ್ ಫಲಿತಾಂಶವೇ ಬಂದಿಲ್ಲ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ದೊಡ್ಡ ಪರಿಣಾಮ ಬೀರುತ್ತಿದೆ. ಕೆಲ ವಿದ್ಯಾರ್ಥಿಗಳು ಹೆಚ್ಚಿನ ಅಧ್ಯಯನಕ್ಕಾಗಿ ಅರ್ಜಿ ಹಾಕಿ ಫಲಿತಾಂಶ ಬರದಿರುವುರಿಂದ ಆತಂಕಕ್ಕೆ ಒಳಗಾಗಿದ್ದಾರೆ. ಕೂಡಲೇ ವಿವಿ ಆಡಳಿತ ಮಂಡಳಿ ಮಕ್ಕಳ ಶೈಕ್ಷಣಿಕ ಹಿತದೃಷ್ಠಿಯಿಂದ ಶೀಘ್ರದಲ್ಲಿ ಫಲಿತಾಂಶ ಪ್ರಕಟಿಸಲು ಮುಂದಾಗಬೇಕುʼ ಎಂದು ಹೇಳಿದರು.
ಮೌಲ್ಯಮಾಪನದ ಪ್ರಕ್ರಿಯೆ ವಿಳಂಬವಾಗುತ್ತಿರುವುದಕ್ಕೆ ವಿಶ್ವವಿದ್ಯಾಲಯದಿಂದ ನಿಖರವಾದ ಕಾರಣ ತಿಳಿದು ಬರುತ್ತಿಲ್ಲ. ಫಲಿತಾಂಶ ವಿಳಂಬವಾಗದಂತೆ ಕುಲಸಚಿವರಿಗೆ ಮನವಿ ಸಲ್ಲಿಸಲಾಗಿದ್ದು, ಹಲವಾರು ಬಾರಿ ಗಮನಕ್ಕೆ ತಂದರೂ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ಸಿಕ್ಕಿಲ್ಲ. ಅಕಾಡೆಮಿಕ್ ಕ್ಯಾಲೆಂಡರ್ ಪ್ರಕಾರ ಫಲಿತಾಂಶ ಬಹಳ ಹಿಂದೆಯೇ ಪ್ರಕಟವಾಗಬೇಕಿತ್ತು. ಇದರ ಪರಿಣಾಮವಾಗಿ ಪಿಜಿ ಕೋರ್ಸ್‌ಗಳ ಪ್ರವೇಶದ ಅವಧಿಯ ಮುಕ್ತಾಯ ಹಂತದಲ್ಲಿದೆ. ಇದರಿಂದ ವಿದ್ಯಾರ್ಥಿಗಳು ತಮ್ಮಿಷ್ಟದ ಕೋರ್ಸ್ ಸಿಗದಕ್ಕೆ ವಂಚಿತಗೊಳ್ಳುವ ಪರಿಸ್ಥಿತಿ ಇದೆʼ ಎಂದು ಹೇಳಿದರು.
ಪರೀಕ್ಷೆ ಮುಗಿದ ಎರಡು ತಿಂಗಳಲ್ಲಿ ಫಲಿತಾಂಶ ಪ್ರಕಟಿಸಬೇಕೆಂಬ ನಿಯಮ ಇದೆ. 180 ದಿನದೊಳಗೆ ಅಂಕಪಟ್ಟಿ ಪ್ರಕಟಿಸಿ ನೀಡಬೇಕು. ಆದರೆ ಇಲ್ಲಿ ಯಾವುದೇ ನಿಯಮ ಪಾಲನೆ ಆಗುತ್ತಿಲ್ಲ. ಸಕಾಲಕ್ಕೆ ಫಲಿತಾಂಶ ಸಿಗದೇ ಇರುವ ಕಾರಣಕ್ಕೆ ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಕೂಡಲೇ ಪ್ರಥಮ ಮತ್ತು ತೃತೀಯ ಸೆಮಿಸ್ಟರ್ (ರಿಪೀಟರ್ಸ್ ಗೆ ಹೆಚ್ಚಿನ ಆದ್ಯತೆ ನೀಡಿ) ಫಲಿತಾಂಶ ಪ್ರಕಟಿಸದಿದ್ದರೆ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಳು ವಿಶ್ವವಿದ್ಯಾಲಯವೇ ನೇರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಜೀಶಾನ್ ಅಖಿಲ ಮಾತನಾಡಿ, ʼವಿಶ್ವವಿದ್ಯಾಲಯಗಳಲ್ಲಿ ಪೂರ್ಣಕಾಲಿಕ ಉದ್ಯೋಗಿಗಳ ನೇಮಕಾತಿ ಇಲ್ಲದಿರುವುದರಿಂದ ಆಡಳಿತಾತ್ಮಕ ಹಾಗೂ ಅಕಾಡೆಮಿಕ್ ಕಾರ್ಯಾಚರಣೆಗಳಲ್ಲಿ ತೊಂದರೆ ಉಂಟಾಗುತ್ತಿದೆ. ಸಿಬ್ಬಂದಿ ಕೊರತೆಯಿಂದ ಸಕಾಲಕ್ಕೆ ಫಲಿತಾಂಶ ನೀಡಲು ಆಗುತ್ತಿಲ್ಲ. ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿಯಿಂದ ಗುಣಮಟ್ಟದ ಕೆಲಸ ಆಗದೇ ಇರುವುದರಿಂದ ಈ ಸಮಸ್ಯೆ ಎದುರಾಗಿದೆ. ಇದರ ಬಗ್ಗೆ ಕುಲಪತಿ ಅವರೊಂದಿಗೆ ಚರ್ಚಿಸಲಾಗಿದೆ. ವಾರದೊಳಗೆ ಫಲಿತಾಂಶ ಪ್ರಕಟವಾಗುತ್ತದೆʼ ಎಂದು ಹೇಳಿದರು.
ಇದನ್ನೂ ಓದಿ : ಬೀದರ್ | ಡಿಜಿಟಲ್ ಗ್ರಂಥಾಲಯದಲ್ಲಿ ಓದಿ ವಿದೇಶದಲ್ಲಿ ನೌಕರಿ : ಹಳ್ಳಿ ಹುಡುಗನ ಸಾಧನೆಗೆ ಎಲ್ಲರೂ ದಿಲ್ ಖುಷ್!
ಈ ಬಗ್ಗೆ ವಿಶ್ವವಿದ್ಯಾಲಯ ಕುಲಪತಿ ದಮ್ಮ ಪ್ರಕಾಶ ಮಾತನಾಡಿ, ʼಎರಡು ಮೂರು ದಿನಗಳಲ್ಲಿ ಪದವಿ ಫಲಿತಾಂಶ ಪ್ರಕಟ ಮಾಡಲಾಗುವುದುʼ ಎಂದರು.

ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್