ಬೆಂಗಳೂರು–ಧಾರವಾಡ ನಡುವೆ ‘ವಂದೇ ಭಾರತ್’ ಇಂಟರ್‌ಸಿಟಿ ಸೆಮಿ ಹೈಸ್ಪೀಡ್ ರೈಲು ಸೋಮವಾರ ಬೆಳಿಗ್ಗೆ ಪ್ರಾಯೋಗಿಕ ಸಂಚಾರ ಆರಂಭಿಸಿದೆ.
“ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದದಿಂದ ಬೆಳಿಗ್ಗೆ 5.45ಕ್ಕೆ ಹೊರಟಿದೆ. 9.58ಕ್ಕೆ ದಾವಣಗೆರೆ, 12.10ಕ್ಕೆ ಹುಬ್ಬಳ್ಳಿಗೆ ಬಂದು 12.40ಕ್ಕೆ ಧಾರವಾಡಕ್ಕೆ ತಲುಪಲಿದೆ. ಮಧ್ಯಾಹ್ನ 1.15ಕ್ಕೆ ಧಾರವಾಡದಿಂದ ಹೊರಡಲಿದೆ. 1.35ಕ್ಕೆ ಹುಬ್ಬಳ್ಳಿಗೆ, 3.48ಕ್ಕೆ ದಾವಣಗೆರೆಗೆ, ರಾತ್ರಿ 7.45ಕ್ಕೆ ಯಶವಂತಪುರಕ್ಕೆ ಬಂದು ರಾತ್ರಿ 8.10ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ತಲುಪಲಿದೆ” ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಜೂನ್ 26ರಂದು ರೈಲು ಸಂಚಾರಕ್ಕೆ ಚಾಲನೆ ನೀಡಿದ ಬಳಿಕ ಅಧಿಕೃತವಾಗಿ ಓಡಾಟ ಆರಂಭಿಸಲಿದೆ.
ಪೆರಂಬೂರಿನಲ್ಲಿರುವ ಚೆನ್ನೈ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಈ ರೈಲು ನಿರ್ಮಾಣಗೊಂಡಿದೆ. ಬೆಂಗಳೂರು–ಧಾರವಾಡದ ಅಂತರ 487 ಕಿಲೋಮೀಟರ್ ಇದ್ದು, ಸುಮಾರು ಏಳು ಗಂಟೆಗಳಲ್ಲಿ ಕ್ರಮಿಸಲಿದೆ. ಗಂಟೆಗೆ 160 ಕಿಲೋ ಮೀಟರ್ ವೇಗದ ಸಾಮರ್ಥ್ಯ ಇದ್ದರೂ ಈ ಮಾರ್ಗದಲ್ಲಿ ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ಚಲಿಸಲಿದೆ. ತಿರುವುಗಳು ಹೆಚ್ಚಿರುವುದು ವೇಗ ಕಡಿಮೆಯಾಗಲು ಕಾರಣ ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ ಎನ್ನುತ್ತಿದ್ದಂತೆಯೇ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಗ್ರಾಮಾಂತರ | ವಿಮಾನ ನಿಲ್ದಾಣದ ಕಂಬಕ್ಕೆ ಶಟಲ್ ಬಸ್ ಡಿಕ್ಕಿ; ಹತ್ತು ಮಂದಿಗೆ ಗಾಯ
ರಾಜ್ಯದಲ್ಲಿ ವಿಧಾನಸಭಾ ಚುನವಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭರ್ಜರಿ ರೋಡ್ ಶೋ ಮಾಡಿದರೂ ಕೂಡ ಬಿಜೆಪಿ ಪರಾಜಯ ಕಂಡಿದೆ. ಇದೀಗ ನೂತನ ಕಾಂಗ್ರೆಸ್ ಸರ್ಕಾರ ರಚನೆಯಾಗಿರುವ ಕಾರಣ ಪ್ರಧಾನಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ರೈಲು ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.