ʼಕಿತ್ತಳೆ ನಾಡುʼ ಕನ್ನಡ ವಾರಪತ್ರಿಕೆ ಪ್ರಧಾನ ಸಂಪಾದಕ ಹಾಗೂ ಹಿರಿಯ ಪತ್ರಕರ್ತ, ಕೊಡವ ಮುಸ್ಲಿಂ ಅಸೋಸಿಯೇಷನ್ ಸ್ಥಾಪಕ ಅಧ್ಯಕ್ಷ ಕುವೇಂಡ ವೈ ಹಂಝತುಲ್ಲಾ ಅವರು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕುವೇಂಡ ವೈ ಹಂಝತುಲ್ಲಾ ಬ್ಯಾರಿ ಟೈಮ್ಸ್ ಮತ್ತು ಕಿತ್ತಳೆ ನಾಡು ಕನ್ನಡ ವಾರಪತ್ರಿಕೆ ಪ್ರಧಾನ ಸಂಪಾದಕರಾಗಿ ಕನ್ನಡ ಪತ್ರಿಕೋದ್ಯಮಕ್ಕೆ ಮತ್ತು ಬ್ಯಾರಿ ಸಾಹಿತ್ಯಕ್ಕೆ ಕಳೆದ ನಾಲ್ಕು ದಶಕಗಳಿಂದ ನೀಡಿದ ಕೊಡುಗೆಯನ್ನು ಪರಿಗಣಿಸಿ ಬ್ಯಾರಿ ಅಕಾಡೆಮಿ ಗೌರವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
“ಚಿಂತನಾಶೀಲಾ ವ್ಯಕ್ತಿತ್ವ, ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ರಚನಾತ್ಮಕ, ಸಮಾಜಮುಖಿ ಕಾರ್ಯ ಚಟುವಟಿಕೆಗಳು, ಕನ್ನಡಪರ ಕಾಳಜಿ ಮೊದಲಾದವುಗಳನ್ನು ಆಯ್ಕೆ ಸಮಿತಿ ಗಮನಿಸಿ ಅಂಗೀಕರಿಸಿದೆ. ಪ್ರಶಸ್ತಿ ಸ್ಮರಣಿಕೆಯಲ್ಲಿ 50 ಸಾವಿರ ನಗದು ಬಹುಮಾನವನ್ನು ಒಳಗೊಂಡಿದೆ” ಎಂದು ಬ್ಯಾರಿ ಆಕಾಡೆಮಿ ಅಧ್ಯಕ್ಷ ಉಮರ್ ಯು ಹೆಚ್ ಮಾಹಿತಿ ನೀಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಾರ್ಕಳ ಯುವತಿಯ ಅತ್ಯಾಚಾರ | 3ನೇ ಆರೋಪಿ ಬಿಜೆಪಿ ಕಾರ್ಯಕರ್ತ : ಕಾಂಗ್ರೆಸ್‌ನಿಂದ ಫೋಟೋ ಬಿಡುಗಡೆ
1988ರಲ್ಲಿ ಪತ್ರಿಕೋದ್ಯಮಕ್ಕೆ ಕಾಲಿರಿಸಿದ ಕುವೇಂಡ ವೈ ಹಂಝತುಲ್ಲಾ ಮೊದಲಿಗೆ ಬೆಂಗಳೂರಿನಲ್ಲಿ ಬ್ಯಾರಿ ಟೈಮ್ಸ್ ಭಾಷಾ ಪತ್ರಿಕೆ ಆರಂಭಿಸಿ, ಅದರ ಸ್ಥಾಪಕ, ಸಂಪಾದಕರಾಗಿ ಆರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ. ಬೆಂಗಳೂರಿನಿಂದಲೇ ಕಿತ್ತಳೆ ನಾಡು ಎಂಬ ಕನ್ನಡ ವಾರಪತ್ರಿಕೆ ಆರಂಭಿಸಿ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬ್ಯಾರಿ ಮತ್ತು ಕನ್ನಡ ಭಾಷೆಯಲ್ಲಿ ವಿವಿಧ ಕೃತಿಗಳನ್ನು ಹೊರ ತಂದಿರುವ ಇವರು ಮೂಲತಃ ವಿರಾಜಪೇಟೆ ಸಮೀಪದ ಕೊಟ್ಟೋಳಿ(ಗುಂಡಿಕೆರೆ) ನಿವಾಸಿಯಾಗಿದ್ದು, ದಿ ಕುವೇಂಡ ಯೂಸುಫ್ ಹಾಜಿ ಮತ್ತು ದಿ ನಫೀಸಾ ದಂಪತಿಯ ಪುತ್ರರಾಗಿದ್ದಾರೆ.