“ಉಪಸಭಾಪತಿ ಸ್ಥಾನ ಒಲ್ಲೆ ಸಾರ್, ನಾನು ನಿಮ್ಮ ಬಳಿ ಮಾತನಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೇಳಿದ್ದೆ. ಆದರೆ, ಪಕ್ಷದ ತೀರ್ಮಾನಕ್ಕೆ ತಲೆಬಾಗಿ ಉಪಸಭಾಪತಿ ಸ್ಥಾನವನ್ನು ಒಪ್ಪಿಕೊಂಡೆ” ಎಂದು ನೂತನ ಉಪಸಭಾಪತಿ ರುದ್ರಪ್ಪ ಲಮಾಣಿ ಹೇಳಿದರು.
ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ನಡೆದ ಬಂಜಾರ ಸಮುದಾಯದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. “ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನನಗೆ ಕರೆ ಮಾಡಿ ಉಪಸಭಾಪತಿ ಸ್ಥಾನ ಕೊಡುತ್ತೇವೆ ಎಂದು ಹೇಳಿದ್ದರು. ನಾನು ಒಲ್ಲೆ ಎಂದು ಹೇಳಿದ್ದೆ. ಅಲ್ಲದೆ ಕರ್ನಾಟಕದ ಉಸ್ತುವಾರಿ ಸುರ್ಜೆವಾಲ ನಾಲ್ಕು ಬಾರಿ ದೂರವಾಣಿ ಕರೆ ಮಾಡಿ ‘ಉಪಸಭಾಪತಿ ಸ್ನಾನ ತೆಗೆದುಕೊಳ್ಳಿ, ರಾಹುಲ್ ಗಾಂಧಿ ಹಾಗೂ ಖರ್ಗೆಯವರು ಹೇಳಿದ್ದಾರೆ’ ಎಂದು ಹೇಳಿದರು. ಪಕ್ಷದ ತೀರ್ಮಾನಕ್ಕೆ ತಲೆಬಾಗಿ ಉಪಸಭಾಪತಿ ಸ್ಥಾನವನ್ನು ಒಪ್ಪಿಕೊಂಡೆ” ಎಂದು ಹೇಳಿದ್ದಾರೆ.
“ಉಪಸಭಾಪತಿ ಸ್ಥಾನದ ಪ್ರಸ್ತಾಪ ಬರುವುದಕ್ಕೂ ಮುನ್ನ, ಲೋಕಸಭೆ ಚುನಾವಣೆ ನಂತರ ನಿನಗೆ ಉತ್ತಮ ಸ್ಥಾನ ನೀಡುತ್ತೇನೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಆದರೆ, ದಿಢೀರನೆ ಉಪಸಭಾಪತಿ ಸ್ಥಾನ ನೀಡಿದರು” ಎಂದರು.
“ತಾಂಡ, ಹಟ್ಟಿ, ಹಾಡಿಗಳನ್ನ ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ. ಆದರೆ, ಸರ್ಟಿಪಿಕೇಟ್ ಕೊಟ್ಟಿದ್ದು ಮೋದಿಯವರು. ನಮ್ಮ ಹೆಸರಲ್ಲಿ ಅವರು ಕೊಡುವ ಅಗತ್ಯತೆ ಇತ್ತೇ” ಎಂದು ಪ್ರಶ್ನಿಸಿದರು.
“ನನ್ನ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಅವರೇ ಬಂದು ಪ್ರಚಾರ ಮಾಡಿದ್ದರೂ ನಾನು ಗೆದ್ದು ಬಂದೆ. ಜನ ತೀರ್ಮಾನಿಸಿದರೆ ಎಂತಹ ವ್ಯಕ್ತಿ ಬಂದರೂ ನಮ್ಮನ್ನು ಉಪ್ಪರಿಗೆಯಲ್ಲಿ ಕೂರಿಸುತ್ತಾರೆ ಎನ್ನುವುದಕ್ಕೆ ಇದೇ ಉದಾಹರಣೆ. ಕಾಂಗ್ರೆಸ್‌ನಲ್ಲಿ ಮಾತ್ರ ತಳ ಸಮುದಾಯವರಿಗೂ ಉತ್ತಮ ಸ್ಥಾನಮಾನ ಸಿಗುತ್ತದೆ. ಆದರೆ ತಾಳ್ಮೆಯಿಂದ ಇರಬೇಕು” ಎಂದರು.
ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, “ಚುನಾವಣೆ ಸಮಯದಲ್ಲಿ ಕೆಲ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಾಗಿದೆ. ಆ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ಸಮುದಾಯ ಭವನಕ್ಕೆ ಬೇಕಾದ ಸ್ಥಳದ ಬಗ್ಗೆ ಅಧಿಕಾರಿಗಳ ಜೊತೆ ಚರ್ಚಿಸುತ್ತೇನೆ” ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ, ಡಾ. ಈಶ್ವರ್‌ನಾಯ್ಕ, ಬಿ.ಸಿದ್ದಪ್ಪ, ರಾಘವೇಂದ್ರನಾಯ್ಕ, ಉಮಾಪತಿ, ಎಚ್.ಬಿ.ಶಿವಯೋಗಿ, ಆರ್,ನಾಗಪ್ಪ ನುಚ್ಚಿನ, ವಾಗೀಶ್, ಕುಬೇರನಾಯ್ಕ, ಅಂಜುನಾಯ್ಕ, ಸೂರ್ಯ ನಾಯ್ಕ ಇತರರು ಇದ್ದರು.