ಸ್ಯಾಂಡಲ್ ವುಟ್ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ವಿದೇಶ ಪ್ರವಾಸಕ್ಕೆ ತೆರಳಿದ್ದ ವೇಳೆ ದುರಂತ ಸಂಭವಿಸಿದೆ. ಬ್ಯಾಂಕಾಕ್‌ನಲ್ಲಿ ಅವರಿಗೆ ಹೃದಯಾಘಾತವಾಗಿದ್ದು, ಸಾವನ್ನಪ್ಪಿದ್ದಾರೆ. ಮಂಗಳವಾರ ಅವರ ಮೃತದೇಹ ಬೆಂಗಳೂರಿಗೆ ಬರಲಿದೆ ಎಂದು ತಿಳಿದುಬಂದಿದೆ.
ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ ಶಿವರಾಂ ಅವರ ಪುತ್ರಿ ಸ್ಪಂದನಾ ಅವರು ವಿಜಯ ರಾಘವೇಂದ್ರ ಅವರನ್ನು 2007ರ ಆಗಸ್ಟ್ 26 ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು.
ನಟ ರವಿಚಂದ್ರನ್ ಅವರ ‘ಅಪೂರ್ವ’ ಸಿನಿಮಾದಲ್ಲಿ ಸ್ಪಂದನಾ ನಟನೆಯನ್ನೂ ಕೂಡ ಮಾಡಿದ್ದರು. ಅಲ್ಲದೆ, ವಿಜಯ ರಾಘವೇಂದ್ರ ಅಭಿನಯದ ‘ಕಿಸ್ಮತ್’ ಸಿನಿಮಾಗೆ ಬಂಡವಾಳವನ್ನೂ ಹಾಕಿದ್ದರು.
ಸ್ಪಂದನಾ ಅವರ ಸಾವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. “ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಅಕಾಲಿಕ ನಿಧನದ ವಾರ್ತೆ ಆಘಾತವನ್ನುಂಟುಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಸ್ಪಂದನಾ ಅವರ ಅಗಲಿಕೆಯಿಂದ ನೊಂದಿರುವ ವಿಜಯ ರಾಘವೇಂದ್ರ ಹಾಗೂ ಬಿ.ಕೆ ಶಿವರಾಂ ಅವರ ಕುಟುಂಬಕ್ಕೆ ನನ್ನ ಸಂತಾಪಗಳು” ಎಂದು ಟ್ವೀಟ್ ಮಾಡಿದ್ದಾರೆ.
“ಕನ್ನಡದ ಖ್ಯಾತ ನಟ ವಿಜಯ ರಾಘವೇಂದ್ರ ಅವರ ಧರ್ಮಪತ್ನಿ ಸ್ಪಂದನಾ ರಾಘವೇಂದ್ರ ಅವರು ಬ್ಯಾಂಕಾಕ್ ನಲ್ಲಿ ದಿಢೀರ್ ಸಾವಿಗೀಡಾಗಿರುವ ಸಂಗತಿ ತಿಳಿದು ಅಪಾರ ನೋವುಂಟಾಯಿತು. ಇತ್ತೀಚೆಗಷ್ಟೇ ಅವರು ನನ್ನನ್ನು ಭೇಟಿಯಾಗಿ ಶುಭ ಹಾರೈಸಿದ್ದರು. ಸ್ಪಂದನಾ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಕುಟುಂಬ ವರ್ಗದವರು ಹಾಗೂ ಸ್ನೇಹಿತ ವರ್ಗಕ್ಕೆ ನನ್ನ ಸಾಂತ್ವನಗಳು” ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.