ಬೆಂಗಳೂರು – ಕೊಪ್ಪಳ ಹೆದ್ದಾರಿಯಲ್ಲಿ ಆರ್‌ಟಿಓ ಅಧಿಕಾರಿಗೆ ವಾಹನ ದಾಖಲೆ ಪತ್ರ ತೋರಿಸಿ ರಸ್ತೆ ದಾಟುವಾಗ ಕಾರು ಡಿಕ್ಕಿ ಹೊಡೆದು ಟ್ರಕ್ ಚಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಘಟನೆಯ ಬಳಿಕ ಹಲವು ಚಾಲಕರು ಸೇರಿ ಹೆದ್ದಾರಿ ತಡೆದು ಪ್ರತಿಭಟಿಸಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ಹೊರವಲಯದಲ್ಲಿ ಭಾನುವಾರ ಸಂಜೆ ನಡೆದಿದೆ.
ಆರ್‌ಟಿಒ ಅಧಿಕಾರಿಗಳಿಂದ ವಾಹನ ನಿಲ್ಲಿಸಲು ಸೂಚನೆ ಸಿಕ್ಕಿದ ತಕ್ಷಣ ಟ್ರಕ್ ಚಾಲಕ ತಮ್ಮ ಟ್ರಕ್ ನಿಲ್ಲಿಸಿ ದಾಖಲೆ ಪತ್ರ ತೋರಿಸಿ ವಾಪಸ್ ರಸ್ತೆ ದಾಟಲು ಯತ್ನಿಸಿದ್ದಾಗ ವೇಗವಾಗಿ ಬಂದ ಕಾರೊಂದು ಅವರಿಗೆ ಡಿಕ್ಕಿ ಹೊಡೆಯಿತು. ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
‘ಆರ್‌ಟಿಒ ಅಧಿಕಾರಿಗಳು ವಸೂಲಿಗೆ ಇಳಿದಿದ್ದಾರೆ, ಅವರಿಗೆ ಲಂಚ ಕೊಟ್ಟು ಬರುವಾಗಲೇ ಈ ಅಪಘಾತ ಸಂಭವಿಸಿದೆ. ಹೀಗಾಗಿ ಈ ಅಪಘಾತಕ್ಕೆ ಆರ್‌ಟಿಒ ಅಧಿಕಾರಿಗಳೇ ಹೊಣೆ’ ಎಂದು ಆರೋಪಿಸಿದ ಟ್ರಕ್ ಚಾಲಕರು, ದಿಢೀರನೆ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ತಮ್ಮ ಟ್ರಕ್‌ಗಳನ್ನು ನಿಲ್ಲಿಸಿ ರಸ್ತೆ ತಡೆ ನಡೆಸಿದರು. ಇದರಿಂದ ಚಿತ್ರದುರ್ಗ-ಕೊಪ್ಪಳ ಹೆದ್ದಾರಿಯಲ್ಲಿ ಸ್ವಲ್ಪ ಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಪ್ರತಿಭಟನಾಕಾರರ ಮನವೊಲಿಸಿ ರಸ್ತೆ ಸಂಚಾರವನ್ನು ಸುಗಮಗೊಳಿಸಲು ಪೊಲೀಸರು ಹರಸಾಹಸ ಮಾಡಬೇಕಾಯಿತು. ಆರ್‌ಟಿಓ ಅಧಿಕಾರಿಗಳು ತಪಾಸಣೆಯ ಹೆಸರಲ್ಲಿ ಮಾಮೂಲಿ ,ಲಂಚ ಕೇಳುತ್ತಾರೆ ಎಂದು ವಾಹನ ಚಾಲಕರು ಆರೋಪಿಸಿದರು.
ಮೃತಪಟ್ಟ ಚಾಲಕನ ವಿವರ ತಿಳಿದು ಬಂದಿಲ್ಲ. ಘಟನೆಯ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
“ಆರ್‌ಟಿಒ ಅಧಿಕಾರಿಗಳಿಂದ ವಾಹನ ತಪಾಸಣೆ ಸಹಜವಾಗಿ ನಡೆಯುತ್ತಿರುತ್ತದೆ. ಹೆದ್ದಾರಿ ದಾಟುವಾಗ ಎಚ್ಚರಿಕೆ ವಹಿಸಬೇಕು. ಮೃತ ಟ್ರಕ್ ಚಾಲಕನ ಗುರುತು ಪತ್ತೆಹಚ್ಚಲು ಪ್ರಯತ್ನಿಸಲಾಗುತ್ತಿದೆ. ಚಾಲಕ ತನ್ನ ದಾಖಲೆ ಪತ್ರಗಳನ್ನು ತೋರಿಸಿ ವಾಪಸ್ ಬರುವಾಗ ಈ ದುರಂತ ಸಂಭವಿಸಿದೆ. ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಎಸ್‌ಪಿ ಶ್ರೀಹರಿಬಾಬು ಬಿ.ಎಲ್. ಮಾಹಿತಿ ನೀಡಿದ್ದಾರೆ.
