ಜಿಲ್ಲೆಯ ಹರಪನಹಳ್ಳಿ ಸರಕಾರಿ ಸಾರಿಗೆ ಬಸ್ ತಂಗುದಾಣದಲ್ಲಿ ಸಾರ್ವಜನಿಕರು ದ್ವಿಚಕ್ರ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಿದ್ದು, ಈ ಕುರಿತು ಹೇಳುವವರಿಲ್ಲ ಕೇಳುವವರಿಲ್ಲ ಎಂಬಂತಾಗಿದೆ. ಸಾರಿಗೆ ವಾಹನಗಳ ಓಡಾಟಕ್ಕೆ ಮತ್ತು ಪ್ರಯಾಣಿಕರು ಬಸ್ ಹತ್ತುವಾಗ, ಇಳಿಯುವಾಗ ದ್ವಿಚಕ್ರವಾಹನಗಳು ಅಡ್ಡಗಾಲು ಹಾಕಿರುತ್ತವೆ. ಇದರಿಂದ ಸಾರ್ವಜನಿಕ ಪ್ರಯಾಣಿಕರು ಸಮಸ್ಯೆ ಎದುರಿಸುವಂತಾಗಿದ್ದು, ಇಲ್ಲಿ ದ್ವಿಚಕ್ರ ವಾಹನಗಳದ್ದೇ ಕಾರುಬಾರು ಎನ್ನುಂವತಾಗಿದೆ.
ಈ ಬಸ್ ನಿಲ್ದಾಣದಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಇದ್ದರೂ ಸಾರ್ವಜನಿಕರು ಅದರ ಸದುಪಯೋಗ ಪಡಿಸಿಕೊಳ್ಳಲು ಹಿಂಜರಿಕೆಯಲ್ಲಿದ್ದಾರೆ. ದ್ವಿಚಕ್ರ ವಾಹನವನ್ನು ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ. ಸಾರಿಗೆ ಬಸ್‌ಗಳು ಹಾಗೂ ಪ್ರಯಾಣಿಕರು ಪ್ರಯಾಸಪಡುವಂತಾಗಿದೆ. ಇದರಿಂದ ಮುಕ್ತಿ ಯಾವಾಗ? ಎಂದು ಪರಸ್ಥಳದ ಪ್ರಯಾಣಿಕರು ಪ್ರಶ್ನಿಸುವಂತಾಗಿದೆ. ಸಾರಿಗೆ ವ್ಯವಸ್ಥೆ ಮತ್ತು ಪಾರ್ಕಿಂಗ್ ವ್ಯವಸ್ಥೆಗೆ ಸಂಬಂಧಿಸಿದವರ ವಿರುದ್ಧ ಜನರು ಆಕ್ರೋಶಗೊಳ್ಳುತ್ತಿದ್ದಾರೆ.
ಈ ಮೊದಲು ಬಳ್ಳಾರಿ ನಂತರ ದಾವಣಗೆರೆ ಪುನಃ ಬಳ್ಳಾರಿ ಜಿಲ್ಲಾ ವ್ಯಾಪ್ತಿಯಲ್ಲಿದ್ದ ಹರಪನಹಳ್ಳಿ ತಾಲೂಕು ಪ್ರಸ್ತುತ ಹೊಸ ಜಿಲ್ಲೆಯಾದ ವಿಜಯನಗರ ಜಿಲ್ಲಾ ವ್ಯಾಪ್ತಿಗೆ ಬರುತ್ತದೆ. ಹರಪನಹಳ್ಳಿ ಪಟ್ಟಣ ಹರಿಹರ ಹಾಗೂ ದಾವಣಗೆರೆಯಿಂದ ಕೇವಲ 40 ಕಿ.ಮೀ ದೂರದಲ್ಲಿದೆ. ಈ ತಾಲೂಕಿನ ಸುತ್ತಲೂ ಐತಿಹಾಸಿಕ ಪ್ರಸಿದ್ಧ ಸ್ಥಳಗಳಿವೆ. ಸುಸಜ್ಜಿತವಾದ ರಸ್ತೆಗಳೂ ಇವೆ. ಆದರೆ ಪ್ರಯಾಣಿಕರಿಗೆ ಈ ಬಸ್ ತಂಗುದಾಣದಷ್ಟು ಕಿರಿಕಿರಿಯಾಗುವ ನಿಲ್ದಾಣ ಮತ್ತೊಂದಿಲ್ಲ ಎಂಬುವುದೂ ಸತ್ಯ. ತಂಗುದಾಣದಿಂದ ಬೇರೆಕಡೆಗೆ ವಾಹನಗಳು ಚಲಿಸಲೂ ಅವಕಾಶವಿಲ್ಲದಷ್ಟು ದ್ವಿಚಕ್ರ ವಾಹನಗಳು ಅಡ್ಡವಾಗಿ ಎಲ್ಲೆಂದರಲ್ಲಿ ನಿಲ್ಲುವ ವಾತಾವರಣ ಸೃಷ್ಟಿಯಾಗಿದೆ. ಸಾರಿಗೆ ಸಿಬ್ಬಂದಿ ಕಣ್ಣಿದ್ದು ಕುರುಡರಂತೆ ಇರುತ್ತಾರೆ ಎಂಬುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸರಕಾರಿ ಸಾರಿಗೆ ವಾಹನ ಹೊರಡುವಾಗ ಅಡ್ಡ ನಿಲ್ಲುವ ಆಟೋ ಹಾಗೂ ಬೈಕ್‌ಗಳಿಗೆ ಜೋರಾಗಿ ಕರ್ಕಶ ಶಬ್ದ ಮಾಡಿದರೂ ತಿರುಗಿಯೂ ನೋಡದೇ ತಮ್ಮ ವಾಹನದ ಮೇಲೆ ಕುಳಿತು ಹರಟೆ ಹೊಡಿಯುತ್ತಾರೆ. ಇದರಿಂದ ಗ್ರಾಮೀಣ ಪ್ರದೇಶ ಪ್ರಯಾಣಿಕರಿಗೆ ಕಿರಕಿರಿವುಂಟಾಗುತ್ತದೆ. ಆದರೆ, ಯಾರೂ ಧ್ವನಿಯೆತ್ತಿ ದುಸರಾ ಮಾತಾಡುವುದಿಲ್ಲ. ಇಂತಹ ಅವ್ಯವಸ್ಥೆ ಸೃಷ್ಟಿಸುವ ದ್ವಿಚಕ್ರ ವಾಹನ ಮಾಲಿಕರಿಗೆ ದಂಡ ವಿಧಿಸುವ ಕ್ರಮವೂ ಜಾರಿಯಲ್ಲಿದೆ. ಕೆಎಸ್‌ಆರ್‌ಟಿಸಿ ಕೌಂಟರ್‌ಲ್ಲಿ ಇರುವ ಅಧಿಕಾರಿಗಳು ಅಡ್ಡಗೊಡೆಯಂತೆ ನಿಲ್ಲುವ ವಾಹನಗಳ ಮೇಲೆ ನಿಗಾ ಇಡುವುದೂ ದೂರದಮಾತು. ಅಡ್ಡ ನಿಲ್ಲಿಸುವ ಬೈಕ್ ಮಾಲೀಕರನ್ನು ಮಾತಾಡಿಸಲು ಭಯವೇನೋ ಎಂಬಂತೆ ಇರುತ್ತಾರೆ.
ಹೂವಿನಹಡಗಲಿ ಕಡೆಗೆ ಪ್ರಯಾಣಿಸುತ್ತಿದ್ದ ಶೇಖರ್ ನಾಯ್ಕ್ ಈದಿನ.ಕಾಂ ಜೊತೆಗೆ ಮಾತನಾಡಿ, ’ಓಡೋಡಿ ಬಂದು ಬಸ್ ಹತ್ತುವುದಕ್ಕೂ ಜಾಗವಿಲ್ಲದ ವಾತಾವರಣ ಇಲ್ಲಿ ಸೃಷ್ಟಿಯಾಗಿದೆ. ಕೆಎಸ್ಆರ್‌ಟಿಸಿ ಸಿಬ್ಬಂದಿಗಳಾದರೂ ಗಾಡಿ ಇಲ್ಲಿ ನಿಲ್ಲಿಸಬೇಡಿ ಅಂತ ಯಾರಿಗೂ ಹೇಳುವುದಿಲ್ಲ. ಇತ್ತ ಜನರೂ ಹಾಗೆಯೇ ಅವರಿಗೂ ಜವಾಬ್ದಾರಿ ಇಲ್ಲದಂತಾಗಿದೆ. ದಿನವೂ ಇದೇ ಕರ್ಮವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿ ಶಂಕರ ಮಾತನಾಡಿ, “ಬಸ್ ನಿಲ್ದಾಣ ನಗರದ ಮಧ್ಯ ಭಾಗದಲ್ಲಿದ್ದು, ಇಲ್ಲಿಗೆ ಮಾರ್ಕೆಟ್ ಸಮೀಪವಾಗುತ್ತದೆ. ವ್ಯಾಪಾರಕ್ಕೆಂದು ಬಂದವರು ಬಸ್ ನಿಲ್ದಾಣದಲ್ಲೇ ಟು-ವ್ಹಿಲರ್ ನಿಲ್ಲಿಸಿ ಹೋಗುತ್ತಾರೆ. ಇನ್ನು ಕಾಲೇಜು ವಿದ್ಯಾರ್ಥಿಗಳು ಬೈಕ್ ನಿಲ್ಲಿಸಿ ಕುಳಿತಿರುತ್ತಾರೆ. ಅವರಿಗೆ ಹೇಳಿದರೂ ಕಷ್ಟ, ಹೇಳದಿದ್ದರೂ ಕಷ್ಟವೆಂಬ ವಾತವಾರಣದಲ್ಲಿ ನಾವು ಬದುಕುತ್ತಿದ್ದೇವೆ ಇದಕ್ಕೊಂದು ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಗದಗ | ಪ್ರಜಾಪ್ರಭುತ್ವ ಗಟ್ಟಿಗೊಳಿಸಿದ್ದು ಅಂಬೇಡ್ಕರ್ ಬರೆದ ಸಂವಿಧಾನ: ಸಚಿವ ಎಚ್ ಕೆ ಪಾಟೀಲ
ಈ ಕುರಿತು ಕೆಎಸ್ಆರ್‌ಟಿಸಿ ಸಿಬ್ಬಂದಿ ಹತ್ತಿರ ವಿಚಾರಿಸಿದಾಗ ನಮ್ಮ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು. ಇನ್ನಾದರೂ ಎಲ್ಲೆಂದರಲ್ಲಿ ನಿಲ್ಲುವ ದ್ವಿಚಕ್ರ ವಾಹನಗಳಿಗೆ ಕಡಿವಾಣ ಬೀಳುವುದೇ? ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವವರೇ? ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವರೇ? ಎಂಬುದು ಸಾರ್ವಜನಿಕರ ನಿರೀಕ್ಷೆ ಆಗಿದೆ.

ಕೇಶವ ಕಟ್ಟಿಮನಿ
ಕೃಷಿ, ಪುಸ್ತಕ ಓದುಗ,
ಫೀಲ್ಡ್ ಕೋರ್ಡಿನೇಟರ್,
ಕೊಪ್ಪಳ ಮತ್ತು ಬಳ್ಳಾರಿ, ಮಾಸ್ ಮೀಡಿಯಾ ಫೌಂಡೇಶನ್