ಕನ್ನಡ ವಿಶ್ವವಿದ್ಯಾಲಯ ತಳಸಮುದಾಯಗಳ ಅಧ್ಯಯನ ಕ್ಷೇತ್ರ. ತಳ ಸಮುದಾಯಗಳಲ್ಲಿ ಒಂದಾದ ಅಲೆಮಾರಿ ಕುರಿಗಾಹಿ ಸಮುದಾಯವು ಅಪರೂಪದ ಸಮುದಾಯವಾಗಿದ್ದು, ಇಂತಹ ತಳಸಮುದಾಯಗಳ ಕುರಿತು ಅಧ್ಯಯನ ಮಾಡುವ ವಿದ್ಯಾರ್ಥಿಗಳು ಸಂಶೋಧನೆಯ ಆಕಾರವನ್ನು ತಾವೇ ಸೃಷ್ಟಿಸಬೇಕು ಎಂದು ಭಾಷಾ ನಿಕಾಯದ ಡೀನ್ ಡಾ ಎಫ್ ಟಿ ಹಳ್ಳಿಕೇರಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ಸಮಾಜಮುಖಿ ತಿಂಗಳ ಮಾತು-6 ಕಾರ್ಯಕ್ರಮದಲ್ಲಿ ʼಕುರಿಗಾಹಿಗಳ ಬದುಕು ಮತ್ತು ಬವಣೆʼ ವಿಷಯದ ಕುರಿತು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಕನ್ನಡ ವಿಶ್ವವಿದ್ಯಾಲಯವು ತಳಸಮುದಾಯಗಳ ಅಭಿವೃದ್ಧಿಗೆ ಸದಾ ಸ್ಪಂದಿಸುತ್ತದೆ. ಕನ್ನಡ ವಿಶ್ವವಿದ್ಯಾಲಯ ಈವರೆಗೂ ಹಲವಾರು ತಳಸಮುದಾಯಗಳು ಮತ್ತು ಬುಡಕಟ್ಟು ಸಮುದಾಯಗಳ ಕುರಿತು ಸಂಶೋಧನೆಗಳನ್ನು ನಡೆಸುವ ಮೂಲಕ ಆ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ಕೆಲಸದಲ್ಲಿ ತೊಡಗಿಕೊಂಡಿದೆ” ಎಂದು ತಿಳಿಸಿದರು.
ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಪಿಎಚ್‌ಡಿ ಸಂಶೋಧಕ ತಿಪ್ಪೇಸ್ವಾಮಿ ಬಿ ಅವರು ಕೊಪ್ಪಳ ಜಿಲ್ಲೆಯ ಸೀಮಿತ ಪ್ರದೇಶದಲ್ಲಿ ಕುರಿಗಾಹಿಗಳ ಬದುಕು ಮತ್ತು ಬವಣೆ ಎಂಬ ವಿಷಯದ ಕುರಿತ ಉಪನ್ಯಾಸದಲ್ಲಿ ಕುರಿಗಾಹಿಗಳ ಜೀವನ, ಧಾರ್ಮಿಕ ಆಚರಣೆ ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾತನಾಡಿದರು.
ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ಯರ‍್ರಿಸ್ವಾಮಿ ಮಾತನಾಡಿ, “ಸಂಶೋಧಕರು ಕುರಿಗಾಹಿ ಸಮುದಾಯದ ವಿಶಿಷ್ಟತೆ ಮತ್ತು ಧಾರ್ಮಿಕ ಆಚರಣೆಗಳ ಕುರಿತು ಸಂಶೋಧನೆಗೆ ಪೂರಕ ದತ್ತಾಂಶಗಳ ಸಂಗ್ರಹಣೆಯಲ್ಲಿ ತೊಡಗಿಕೊಳ್ಳಬೇಕು. ಜ್ಞಾನವನ್ನು ವೃದ್ಧಿಸಲು ತಾವೇ ಅಧ್ಯಯನ ಸೂತ್ರಗಳನ್ನು ಹುಡುಕಿಕೊಳ್ಳಬೇಕು” ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.
ಈ ಓದಿದ್ದಿರಾ? ಕೊಪ್ಪಳ | ಅತ್ಯಾಚಾರ ಅಪರಾಧಿಗೆ 20 ವರ್ಷ ಜೈಲು, 20 ಸಾವಿರ ದಂಡ
ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಸಂಶೋಧನಾರ್ಥಿ ಭೋಜರಾಜ ಆರ್ ಪ್ರಾಸ್ತಾವಿಕ ಮಾತನಾಡಿದರು. ಸಂಶೋಧನಾರ್ಥಿ ಜ್ಯೋತಿ ನಿರೂಪಿಸಿದರು. ಸಂಶೋಧನಾರ್ಥಿ ತಿಪ್ಪೇಸ್ವಾಮಿಯವರು ವಂದಿಸಿದರು. ವಿವಿಧ ವಿಭಾಗಗಳ ಅಧ್ಯಾಪಕರು ಮತ್ತು ಸಂಶೋಧನಾರ್ಥಿಗಳು ಇದ್ದರು.