ಜಮೀನಿಗೆ ತೆರಳಿದ್ದ ರೈತನ ಮೇಲೆ ಎರಡು ಕರಡಿಗಳು ದಾಳಿ ನಡೆಸಿದ ಪರಿಣಾಮ ರೈತ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ಕೆ ಕಲ್ಲಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
“ಕೆ ಕಲ್ಲಹಳ್ಳಿ ಗ್ರಾಮದ ನಿವಾಸಿ ಆನಂದ್ (28) ಕರಡಿ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿರುವ ರೈತ. ಅರಣ್ಯದ ಅಂಚಿನಲ್ಲಿರುವ ತಮ್ಮ ಜಮೀನಿಗೆ ಕೃಷಿ ಕೆಲಸಕ್ಕೆ ತೆರಳಿದ್ದಾಗ ಎರಡು ಕರಡಿಗಳು ಏಕಾಏಕಿ ದಾಳಿ ನಡೆಸಿದ್ದು, ತಲೆ ಮತ್ತು ದೇಹದ ಮೇಲೆ ಪರಿಚಿದ್ದರಿಂದ ರೈತ ಸಂಪೂರ್ಣ ರಕ್ತಸಿಕ್ತನಾಗಿ ಬಿದ್ದಿರುವುದನ್ನು ಕಂಡು ಹರಪನಹಳ್ಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ವೈದ್ಯರ ಶಿಫಾರಸಿನ ಮೇರೆಗೆ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಅನಧಿಕೃತ ಡಿಜಿಟಲ್ ಖಾತಾ ವಿತರಣೆ: ಚಿಟ್ಟಾ ಗ್ರಾಮ ಪಂಚಾಯಿತಿ ಪಿಡಿಒ ಅಮಾನತು
“ಕೆ ಕಲ್ಲಹಳ್ಳಿ ಗ್ರಾಮ ಅರಣ್ಯದಂಚಿನಲ್ಲಿದೆ. ಗ್ರಾಮಕ್ಕೆ ಚಿರತೆಗಳು ನುಗ್ಗಿ ಜಾನುವಾರು, ನಾಯಿಗಳನ್ನು ಎಳೆದುಕೊಂಡು ಹೋಗುತ್ತಿವೆ. ಚಿರತೆ, ಕರಡಿ ದಾಳಿಗಳಿಂದ ರೈತರು ಪ್ರಾಣಭಯದಲ್ಲಿ ಕೆಲಸ ಮಾಡುವಂತಾಗಿದೆ. ಇದೀಗ ಕರಡಿ ದಾಳಿಯಿಂದ ಗಾಯಗೊಂಡು ನರಳುತ್ತಿರುವ ರೈತನ ಚಿಕಿತ್ಸೆಯ ಸಂಪೂರ್ಣ ಖರ್ಚನ್ನು ಅರಣ್ಯ ಇಲಾಖೆಯೇ ಭರಿಸಬೇಕು” ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.