ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಾರಿಗನೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಘಟನೆ ಸಂಬಂಧ ಮೂವರು ಅಧಿಕಾರಿಗಳನ್ನು ಅಮಾನತು ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಸೂಚನೆ ನೀಡಿದ್ದಾರೆ.
ಕಾರಿಗನೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 30ಕ್ಕೂ ಅಧಿಕ ಮಂದಿ ವಾಂತಿ, ಭೇದಿಯಿಂದ ಅಸ್ವಸ್ಥರಾಗಿದ್ದರು. ಕಾರಿಗನೂರಿನ ಆರ್‌ಬಿಎಸ್‌ಎಸ್‌ಎನ್ ಕ್ಯಾಂಪ್ ನಿವಾಸಿ 66 ವರ್ಷದ ಸೀತಮ್ಮ ಮೃತ ವೃದ್ದೆ. ಶನಿವಾರ (ಜ. 6) ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ 30ಕ್ಕೂ ಹೆಚ್ಚು ಮಂದಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಪ್ರಕರಣ ಸಂಬಂಧ ನಗರಸಭೆ ಆಯುಕ್ತರಾದ ಬಂಡಿ ವಡ್ಡರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಸತೀಶ್ ಹಾಗೂ ಕಿರಿಯ ಅಭಿಯಂತರ ಖಾಜಿ ಅವರನ್ನು ಅಮಾನತುಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಸೂಚನೆ ನೀಡಿದ್ದಾರೆ.
ಮೂವರು ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಿ ಇಲಾಖಾ ವಿಚಾರಣೆ ನಡೆಸಲು ನಿರ್ದೇಶನ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ದಿವಾಕರ್ ಅವರ ಜತೆ ನಿರಂತರ ಸಂಪರ್ಕದಲ್ಲಿದ್ದು, ಮಾಹಿತಿ ಪಡೆದು ಪ್ರಕರಣ ಮರುಕಳಿಸದಂತೆ ಎಲ್ಲ ರೀತಿಯ ಮುನ್ನಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಕುಡಿಯುವ ನೀರು ಪೊರೈಕೆ ಹಾಗೂ ಒಳಚರಂಡಿ ವ್ಯವಸ್ಥೆ, ಸ್ವಚ್ಛತೆ ಬಗ್ಗೆ ನಿಗಾ ವಹಿಸುವಂತೆಯೂ ಸಚಿವ ಜಮೀರ್ ಅಹಮದ್ ಖಾನ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬಳಿಕ ಮಾತನಾಡಿದ ಅವರು, ಶುದ್ಧ ಕುಡಿಯುವ ನೀರು ಘಟಕದಿಂದ ಉಚಿತ ಕುಡಿಯುವ ನೀರನ್ನು ಗ್ರಾಮಸ್ಥರಿಗೆ ನೀಡುವಂತೆ ಸೂಚನೆ ನೀಡಲಾಗಿದೆ. ಪ್ರಕರಣ ಕುರಿತಂತೆ ಕಾರಿಗನೂರು, ಶಿಕಾರಿ ಕ್ಯಾಂಪ್‍ಗೆ ಕಲುಷಿತ ನೀರು ಸರಬರಾಜಾಗಿದೆ. ಕಲುಷಿತ ನೀರು ಪೂರೈಕೆಯಿಂದ ಘಟನೆ ನಡೆದಿದ್ದರೆ, ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡುತ್ತೇವೆ ಎಂದಿದ್ದಾರೆ.
ಅಲ್ಲದೆ, 27 ಜನರು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಅಗಿದ್ದಾರೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾದ್ಯಮಗಳಿಗೆ ಡಾ. ಶಂಕರ್ ನಾಯಕ್ ಮಾಹಿತಿ ನೀಡಿದ್ದಾರೆ.