ವಿಜಯನಗರ ಜಿಲ್ಲೆಗೆ ಪ್ರತ್ಯೇಕ ಮೆಗಾ ಡೇರಿ ಹಾಗೂ ಆಡಳಿತ ಕಚೇರಿ ಸ್ಥಾಪನೆಯಾಗಬೇಕೆಂದು ಆಗ್ರಹಿಸಿ ಹಾಲು ಉತ್ಪಾದಕರು, ಅಖಿಲ ಕರ್ನಾಟಕ ಕಿಸಾನ್ ಜಾಗೃತಿ ಸಂಘ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ವಿವಿಧ ಸಂಘಟನೆಗಳಿಂದ ಹೊಸಪೇಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಬಸವೇಶ್ವರ ಸರ್ಕಲ್‌ನಿಂದ ಸಾಗಿ ಅಂಬೇಡ್ಕರ್ ಸರ್ಕಲ್‌ನಲ್ಲಿ ಅಂಬೇಡ್ಕರ್ ಸರ್ಕಲ್ ಮೂಲಕ ಹಾದು ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಕಾಲ್ನಡಿಗೆಯಲ್ಲಿ ಸಾವಿರಾರು ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ವಿಜಯನಗರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಹಿತರಕ್ಷಣಾ ಸಮಿತಿಯ ಜಿಲ್ಲಾಧ್ಯಕ್ಷ ಎಂ ಬಸವರಾಜ್ ಕಕ್ಕುಪ್ಪಿ ಮಾತನಾಡಿ, “ಯಾವುದೇ ಕಾರಣಕ್ಕೂ ಬಳ್ಳಾರಿಗೆ ನಾವು ಹಾಲನ್ನು ಕಳುಹಿಸುವುದಿಲ್ಲ. ಪ್ರತ್ಯೇಕ ಒಕ್ಕೂಟ ಆಗುವವರೆಗೂ ನಾವು ಪ್ರತಿಭಟನೆ ಕೈಬಿಡುವುದಿಲ್ಲ” ಎಂದು ಹೇಳಿದರು.
“ಜಿಲ್ಲೆಯಿಂದ 1.20 ಲಕ್ಷ ಲೀಟರ್ ಹಾಲು ಸರಬರಾಜಾಗುತ್ತದೆ. ಆದರೆ, ಬಳ್ಳಾರಿಯಲ್ಲಿ ಕೇವಲ 9 ಸಾವಿರ ಲೀಟರ್ ಹಾಲು ಶೇಖರಿಸುವವರು ಅಧಿಕಾರದ ಆಸೆಗಾಗಿ ವಿಜಯನಗರ ಜಿಲ್ಲೆಗೆ ಯಾವುದೇ ಯೋಜನೆ ಕೊಡದಂತೆ ಬಳ್ಳಾರಿಯ ಕೆಲವು ಕಿಡಿಗೇಡಿಗಳು ತಡೆಯುತ್ತಿದ್ದಾರೆ. ಹೊಸದಾಗಿ ರಚನೆಯಾಗಿರುವ ಜಿಲ್ಲೆಗೆ ಬೃಹತ್ ಇಲಾಖೆಗಳು ಇಲ್ಲ. ಎಲ್ಲವೂ ಬಳ್ಳಾರಿಯಲ್ಲಯೇ ಇವೆ. ನಮ್ಮ ಜಿಲ್ಲೆಯು ಹಿಂದುಳಿಯುವಿಕೆಗೆ ಕಾರಣವಾಗುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಿಸಾನ್ ಜಾಗೃತಿ ಸಂಘದ ಉಪಾಧ್ಯಕ್ಷ ಖಾದರ್ ಸಾಹೇಬ್ ಮಾತನಾಡಿ, “ಅತಿಹೆಚ್ಚು ಹಾಲು ಉತ್ಪಾದಿಸುವ ಜಿಲ್ಲೆಗೆ ಮೇಗಾ ಡೇರಿ ಸ್ಥಾಪನೆಯಾಗಬೇಕು. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ನಾವು ಹಾಲನ್ನು ಬಳ್ಳಾರಿಗೆ ಕಳುಹಿಸುವುದಿಲ್ಲ. ವಿಜಯನಗರ ಜಿಲ್ಲೆಯಲ್ಲಿಯೂ ಆಡಳಿತ ಕಚೇರಿಯಾಗಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ : ತಾಯಿ ಮಗನ ಹತ್ಯೆ ಪ್ರಕರಣ ಓರ್ವ ಆರೋಪಿ ಆತ್ಮಹತ್ಯೆ ಇನ್ನೊಬ್ಬ ಆರೋಪಿ ಬಂಧನ
ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ಹಾಲು ಒಕ್ಕೂಟ ನಿರ್ದೇಶಕ ಹೆಚ್ ಮರುಳ ಸಿದ್ದಪ್ಪ ಮಾತನಾಡಿ, “ಹಾಲನ್ನು ಕೊಡುವವರು ನಾವು, ಅಧಿಕಾರ ಅನುಭವಿಸುವವರು ಬಳ್ಳಾರಿಯವರು. ಆಡಳಿತ ಮಂಡಳಿಗೆ ಯಾವುದೇ ರೀತಿಯ ಸಹಕಾರ ನೀಡದೆ ತುಂಬಾ ಕಿರಿಕಿರಿಯನ್ನುಂಟು ಮಾಡುವುದರ ಜತೆಗೆ ದೌರ್ಜನ್ಯ ಎಸಗುತ್ತಿದ್ದಾರೆ. ಜಿಲ್ಲೆಯಲ್ಲಿ 360 ಸಂಘಗಳಿವೆ. ಅತಿ ಹೆಚ್ಚು ಹಾಲನ್ನು ಸರಬರಾಜು ಮಾಡುತ್ತೇವೆ. ಹರಪನಹಳ್ಳಿಯಿಂದ ನೂರಾರು ಕಿಮೀ ದೂರ ಹಾಲನ್ನು ಸಾಗಿಸಲು ಒಕ್ಕೂಟ ನಷ್ಟ ಅನುಭವಿಸಲು ಇದು ಒಂದು ಮುಖ್ಯ ಕಾರಣ” ಆದ್ದರಿಂದ ವಿಜಯನಗರ ಜಿಲ್ಲೆಯಲ್ಲಿ ಒಕ್ಕೂಟ ಆರಂಭಿಸಬೇಕು” ಎಂದು ಹೇಳಿದರು.
ಶ್ರೀನಿವಾಸ್, ಕಾಳೇಶಪ್ಪ, ಗಂಗಾಧರ, ಲಕ್ಷ್ಮಣ, ರತ್ನಮ್ಮ, ಉಷಾ, ಕಂಪ್ಲಿ ಗಂಗಾಧರ ಹಾಗೂ ವಿಜಯನಗರ ಜಿಲ್ಲೆಯಿಂದ ಸಾವಿರಾರು ಹಾಲು ಉತ್ಪಾದಕರು ಇದ್ದರು.