ರೈತರ ಹಿತರಕ್ಷಣೆ ಸರಕಾರದ ಹೊಣೆ. ಆ ಜವಾಬ್ದಾರಿಯನ್ನು ಸರಕಾರ ನಿಭಾಯಿಸಬೇಕು ಇಲ್ಲವೆಂದರೆ ರೈತರು ನಿರಂತರವಾಗಿ ಬೀದಿಗೆ ಬಂದು ಹೋರಾಟ ಮಾಡುವ ಅನಿವಾರ್ಯತೆ ಒದಗಿಬರುತ್ತದೆ ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗಡೆ ಹೇಳಿದರು.
ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘದ ನೇತೃತ್ವದಲ್ಲಿ ಬಳ್ಳಾರಿ, ವಿಜಯನಗರ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಒತ್ತಾಯಿಸಿ ಹಂಪಿಯ ವಿರೂಪಾಕ್ಷ ದೇವಸ್ಥಾನದಿಂದ ಹೊಸಪೇಟೆಯ ಅಂಬೇಡ್ಕರ್ ಭವನದವರೆಗೂ ಆಯೋಜಿಸಿರುವ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
“ನಾನು ರಾಜಕಾರಣ ಮಾಡಲು ಬಂದಿಲ್ಲ, ಅದರಲ್ಲಿ ಅಸಕ್ತಿಯೂ ಇಲ್ಲ. ನನಗೆ ಬೇಕಾಗಿರುವುದು ರೈತರ ಹಿತ ಮಾತ್ರ. ಜಿಲ್ಲೆಗಳಾದ್ಯಂತ ಬಹುತೇಕ ರೈತರು ಅವಲಂಬಿಸಿರುವುದು ಕಬ್ಬು ಕೃಷಿ. ಈಗ ಈ ಕಬ್ಬನ್ನು ಸಾಗಿಸಲು ನೂರಾರು ಕಿಲೋಮೀಟರ್ ಹೋಗುತ್ತಿರುವುದು ವಿಪರ್ಯಾಸ. ಸರ್ಕಾರ ರೈತರ ಬೇಕು ಬೇಡಗಳನ್ನು ಪರಿಗಣಿಸಿ ರೈತರಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ನಡೆದುಕೊಳ್ಳಬೇಕು. ಸಕ್ಕರೆ ಕಾರ್ಖಾನೆ ಸ್ಥಾಪಿಸಿದರೆ ಲಕ್ಷಾಂತರ ಜನಕ್ಕೆ ಉದ್ಯೋಗ ದೊರಕಿಸಿ ಕೊಡುವುದರ ಮೂಲಕ ಇಲ್ಲಿರುವ ರೈತರಿಗೆ ಅನುಕೂಲವಾಗಲಿದೆ. ಸಕ್ಕರೆ ಕಾರ್ಖಾನೆ ಪ್ರಾರಂಭವಾಗುವವರೆಗೂ ಹಿಂದೆ ಸರಿಯುವುದಿಲ್ಲ. ನಾನಿದ್ದೇನೆ ನಿಮ್ಮ ಬೆನ್ನ ಹಿಂದೆ ನೀವು ಹೋರಾಟಕ್ಕೆ ಯಾವಾಗ ಕರೆದರೂ ನಾನು ಸದಾ ಸಿದ್ಧ” ಎಂದು ರೈತರಿಗೆ ಭರವಸೆ ನೀಡಿದರು.
ಪ್ರಕಾಶ್ ಮಾತನಾಡಿ, “ಸರ್ಕಾರಕ್ಕೆ ಕೇಳುತ್ತಿರುವುದು ನ್ಯಾಯಯುತವಾದ ಬೇಡಿಕೆಗಳನ್ನು ಮಾತ್ರ. ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಸುಮಾರು 50-60 ವರ್ಷಗಳಿಂದ ಬಗರ್ ಹುಕುಂ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ಸಾವಿರಾರು ರೈತರಿಗೆ ಕೂಡಲೇ ಪಟ್ಟಾ ವಿತರಣೆ ಮಾಡಬೇಕು. ಕೇಂದ್ರ ಸರ್ಕಾರ ಆದೇಶಿಸಿರುವ ಪ್ರಕಾರ ಎಲ್ಲಾ ರೈತರಿಗೆ 5 ಲಕ್ಷದವರೆಗೆ ಸಹಕಾರ ಸಂಘಗಳಲ್ಲಿ ಬಡ್ಡಿ ರಹಿತ ಸಾಲವನ್ನು ಕೊಡಬೇಕು” ಎಂದು ಒತ್ತಾಯಿಸಿದರು.
ಎಂ ಬಸವರಾಜ್ ಕಕ್ಕುಪ್ಪಿ ಮಾತನಾಡಿ, “ಸ್ವಾತಂತ್ರ್ಯ ಬಂದು 80 ವರ್ಷ ಕಳೆಯುತ್ತಾ ಬಂದರೂ, ರೈತರಿಗೆ ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸುವಂತೆ ನಾವು ಬೀದಿಗಳಿದು ಹೋರಾಟ ಮಾಡುವಂತಾಗಿದೆ. ಸರ್ಕಾರಗಳು ಚುನಾವಣೆ ಬಂದಾಗ ನಾವು ರೈತರ ಪರ ಎಂದು ಹೇಳುತ್ತಾರೆ; ಅಧಿಕಾರಕ್ಕೆ ಬಂದ ಮೇಲೆ ರೈತರ ಕಷ್ಟಗಳಿಗೆ ಸ್ಪಂದಿಸದೆ ಇರುವುದು ದುರಾದೃಷ್ಟಕರ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ವಿಜಯನಗರ | ಭಾರತದ ವಿವಿಧತೆ ತಿಳಿಯಲು ಭಾಷಾಂತರ ಅಗತ್ಯ: ಬಸವರಾಜ ಟಿ ಎಚ್
ಜಾಥಾದಲ್ಲಿ ಗ್ರಾಮ ಘಟಕ, ತಾಲೂಕು ಹಾಗೂ ಜಿಲ್ಲೆಯ ಪದಾಧಿಕಾರಿಗಳು, ವಿವಿಧ ಮಠಾಧೀಶರು, ವ್ಯಾಸನಕೆರೆ ಶ್ರೀನಿವಾಸ್, ರಫೀಕ್ ರಾಜ್, ಎಂ ನಾಗಯ್ಯ ಆನೆಗುಂದಿ, ಬಸವರಾಜ್ ಡಿ ಡೆಲ್ಲಿ, ಭೀಮಪ್ಪ ಎಂ, ಉಷಾ ದೇವೇಂದ್ರಪ್ಪ, ಎನ್ ರತ್ನಮ್ಮ, ಬಿ ಗಂಗಾಧರ್, ಕಾಳೇಶಪ್ಪ, ಕರಿ ಬಸವರಾಜ್, ದ್ಯಾಮಪ್ಪ ಹಾಗೂ ಇತರರು ಉಪಸ್ಥಿತರಿದ್ದರು.
