ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಸಾವಿರ ಕುಟುಂಬಗಳಿಗೆ ಕೂಲಿ ಕೆಲಸ ನೀಡಬೇಕು ಎಂದು ಒತ್ತಾಯಿಸಿ ಗ್ರಾಕೂಸ ಕಾರ್ಮಿಕ ಮಹಿಳೆಯರು ವಿಜಯನಗರ ಜಿಲ್ಲೆ ಹರಪ್ಪನಹಳ್ಳಿ ತಾಲೂಕಿನ ಕುಂಚೂರು ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
ಗ್ರಾಕೂಸ ಕಾರ್ಯಕರ್ತೆಯರು ಕುಂಚೂರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜು ನಾಯಕ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಸಂಘದ ತಾಲೂಕು ಕಾರ್ಯಕರ್ತೆ ಭಾಗ್ಯ ಮಾತನಾಡಿ, “ಸಂಘಟನೆಯ ಕಾರ್ಮಿಕ ಮಹಿಳೆಯರು ಕಳೆದ 20 ದಿನಗಳ ಹಿಂದೆ ಧರಣಿ ನಡೆಸಿದ್ದು. ರಾಷ್ಟ್ರೀಯ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೊಡುವಂತೆ 600 ಮಂದಿ ಅರ್ಜಿ ಸಲ್ಲಿಸಿದ್ದೇವೆ. ಕೂಲಿ ಕೆಲಸ ಕೊಡುವಂತೆ ಕಚೇರಿಗೆ ಪ್ರತಿದಿನ ಅಲೆದಾಡುತ್ತಿದ್ದೇವೆ. ಆದರೆ ಕಾರ್ಮಿಕರ ಅಧಿಕಾರಿಗಳು ಅಹವಾಲು ಸ್ವೀಕರಿಸದೆ, ನಿರ್ಲಕ್ಷ್ಯ ವಹಿಸಿದ್ದಾರೆ” ಎಂದು ಆರೋಪಿಸಿದರು.
“ಕುಂಚೂರು ಪಂಚಾಯಿತಿ ಮುಂದೆ ಎರಡು ದಿನದಿಂದ ಕಾರ್ಮಿಕರು ದುಡಿಯುವ ಕೈಗಳಿಗೆ ಕೆಲಸ ಕೊಡಿ ಎಂದು ಅಂಗಲಾಚುತ್ತಿದ್ದೇವೆ. ಮಳೆ, ಬೆಳೆ ಇಲ್ಲದೆ ಬಡ ಕುಟುಂಬಗಳು ವಲಸೆ ಹೋಗುತ್ತಿದ್ದಾರೆ. ಮನರೇಗಾ ಯೋಜನೆ ಅಡಿಯಲ್ಲಿ ಒಂದು ಪಂಚಾಯಿತಿ ವ್ಯಾಪ್ತಿಯ ಸಾವಿರ ಕುಟುಂಬಗಳು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಹಾಗಾಗಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಅಡುಗೆ ಸಹಾಯಕಿಗೆ ಜಾತಿ ನಿಂದನೆ; ಪ್ರಕರಣ ದಾಖಲಿಸಿದರೂ ಕ್ರಮ ಕೈಗೊಳ್ಳದ ಪೊಲೀಸ್ ಇಲಾಖೆ; ಆರೋಪ
“ಅರ್ಜಿ ಸಲ್ಲಿಸಿರುವ ಪ್ರಕಾರ ಕೆಲಸ ಹಂಚಿಕೆಯಾಗಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ನೀಲಮ್ಮ, ಮಲ್ಲವ್ವ , ಅಕ್ಕಮ್ಮ, ಗಿರಿಜಾ, ಪಾರ್ವತಿ, ನಾಗಮ್ಮ, ಸಾವಿತ್ರಿ, ಗೌರಮ್ಮ, ಸಂತಮ್ಮ ಸೇರಿದಂತೆ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ಕಾರ್ಯಕರ್ತರು ಇದ್ದರು.