ಫೆಬ್ರವರಿ 28ರಂದು ನಡೆಯುತ್ತಿರುವ ಹಂಪಿ ಉತ್ಸವದ ಜಾಗೃತಿ ಮೂಡಿಸುವ ಸಲುವಾಗಿ ವಿಜಯನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಹಂಪಿ ವಿರೂಪಾಕ್ಷ ದೇವಾಲಯದವರೆಗೆ ಬೈಕ್ ರ‍್ಯಾಲಿ ನಡೆಸಲಾಯಿತು. ಜಿಲ್ಲಾಧಿಕಾರಿ ಎಂ ಎಸ್ ದಿವಾಕರ್ ಸ್ವತಃ ರಾಯಲ್ ಎನ್‌ಫೀಲ್ಡ್ ಬೈಕ್ ಏರಿ ರ‍್ಯಾಲಿಯ ನೇತೃತ್ವ ವಹಿಸಿದ್ದರು.
ಫೆಬ್ರವರಿ 28ರಂದು ಹಂಪಿ ಉತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ದೊರೆಯಲಿದೆ. ಈಗಾಗಲೇ ಹೊಸಪೇಟೆ ನಗರ, ಕಮಲಾಪುರ ರಸ್ತೆಗಳು ಹಾಗೂ ಹಂಪಿ ಮದುವಣಗಿತ್ತಿಯಂತೆ ಸಿಂಗರಿಸಿಕೊಂಡಿವೆ. ಹೊಸಪೇಟೆ ನಗರದಿಂದ ಹಂಪಿ ಉತ್ಸವ ನಡೆಯುವ ಸ್ಥಳಗಳವರೆಗೆ ಬೆಳಕಿನ ತೋರಣ ಕಟ್ಟಲಾಗಿದೆ. ಹಂಪಿ ಸ್ಮಾರಕಗಳು ವಿಶೇಷ ಬೆಳಕಿನಲ್ಲಿ ಕಂಗೊಳಿಸುತ್ತಿವೆ.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಅಂಬೇಡ್ಕರ್ ಹಣಕಾಸು ಅಭಿವೃದ್ಧಿ ನಿಗಮ ಸ್ಥಾಪನೆಗೆ ದಸಂಸ ಆಗ್ರಹ
ಸಹಾಯಕ ಆಯುಕ್ತ ವಿವೇಕ್, ತಹಶೀಲ್ದಾರ್ ಶೃತಿ ಮಾಳಪ್ಪಗೌಡ ಕೂಡಾ ಬೈಕ್ ಚಲಾಯಿಸಿ ಜಿಲ್ಲಾಧಿಕಾರಿಗಳಿಗೆ ಸಾಥ್ ನೀಡಿದರು. ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭವಾದ ಬೈಕ್ ರ‍್ಯಾಲಿ ಸಾಯಿಬಾಬಾ ರಸ್ತೆ, ಎಪಿಎಂಸಿ, ನೀಲಕಂಠೇಶ್ವರ ದೇವಸ್ಥಾನ, 100 ಹಾಸಿಗೆಗಳ ಆಸ್ಪತ್ರೆ, ವಿಎನ್‌ಸಿ ಕಾಲೇಜು ರಸ್ತೆ, ಅಂಬೇಡ್ಕರ್ ಸರ್ಕಲ್, ಪುನಿತ್ ರಾಜ್‌ಕುಮಾರ್ ವೃತ್ತ, ಉಡುಪಿ ಹೊಟೆಲ್, ಹಂಪಿ ರಸ್ತೆ ಮೂಲಕ ಅನಂತಶಯನಗುಡಿ, ಕೊಂಡನಾಯಕನಹಳ್ಳಿ, ಕಡ್ಡಿರಾಂಪುರ ಮಾರ್ಗವಾಗಿ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ಬಳಿ ಮುಕ್ತಾಯಗೊಂಡಿತು.
ರ‍್ಯಾಲಿಯಲ್ಲಿ ಜಿಲ್ಲಾಮಟ್ಟದ ಅಧಿಕಾರಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.