ಎರಡು ಪ್ರತ್ಯೇಕ ಘಟನೆಗಳಲ್ಲಿ ಹಾವು ಕಚ್ಚಿ, ತುರ್ತು ಚಿಕಿತ್ಸೆ ದೊರೆಯದೆ ಇಬ್ಬರು ಮಹಿಳೆಯರು ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನಲ್ಲಿ ನಡೆದಿವೆ. ವೀಣಾ(26) ಮತ್ತು ಹುಲಿಗೆಮ್ಮ(49) ಮೃತ ಮಹಿಳೆಯರು.
ವೀಣಾ ಅವರು ಹಡಗಲಿ ತಾಲೂಕಿನ ಹಿರೇಬನ್ನಿಮಲ್ಲು ಗ್ರಾಮದವರಾಗಿದ್ದು, ಹುಲಿಗೆಮ್ಮ ಅಂಗೂರು ಗ್ರಾಮದವರು. ವೀಣಾ ಮೆಕ್ಕೆಜೋಳ ಕೊಯ್ಯಲೆಂದು ಹೊಲಕ್ಕೆ ಹೋಗಿದ್ದಾಗ ಹಾವು ಕಚ್ಚಿದೆ. ಹುಲಿಗೆಮ್ಮ ಚಿಂಚಲಿಯಲ್ಲಿ ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿದೆ. ಈ ಇಬ್ಬರೂ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಸರಿಯಾದ ಚಿಕಿತ್ಸೆ ದೊರೆಯದೆ ಇಬ್ಬರೂ ಮೃತಪಟ್ಟಿದ್ದಾರೆ.
ವೀಣಾ ಮತ್ತು ಹುಲಿಗೆಮ್ಮ ಇಬ್ಬರ ಸಾವಿಗೂ ಆಸ್ಪತ್ರೆಗಳ ಅವ್ಯವಸ್ಥೆ ಕಾರಣವೆಂದು ಕಂಡುಬಂದಿದೆ. ಹಾವು ಕಡಿತದಿಂದ ಅಸ್ವಸ್ಥರಾಗಿದ್ದ ವೀಣಾರನ್ನು ಕೂಡಲೇ ಹೊಳಲು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅಲ್ಲಿ ವೈದ್ಯರೇ ಇರಲಿಲ್ಲ. ಹೀಗಾಗಿ ವೀಣಾಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ, ವಿಷ ಮೈತುಂಬ ಹರಡಿ ಮೃತಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ರಸ್ತೆ ಕಾಮಗಾರಿ ಸ್ಥಗಿತ; ಓಡಾಡಲು ಪರದಾಟ
ಹುಲಿಗೆಮ್ಮ ಸಾವಿನಲ್ಲೂ ಇದೇ ರೀತಿ ಅಂಶವೇ ಕಂಡುಬಂದಿದ್ದು, ಹುಲಿಗೆಮ್ಮ ಅವರನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅಲ್ಲೂ ವೈದ್ಯರಿಲ್ಲದೆ ಚಿಕಿತ್ಸೆ ವಿಳಂಬವಾಗಿದ್ದು,.ಮೃತಪಟ್ಟಿದ್ದಾರೆ. ಈ ಬಗ್ಗೆ ಎರಡೂ ಕುಟುಂಬದವರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಬ್ಬರೂ ಮಹಿಳೆಯರ ಸಾವಿನ ಪ್ರಕರಣ ಹಡಗಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.