ಸಾಂಸ್ಥಿಕ ಭಾಷಾಂತರರಗಳು ಭಾರತದ ಬಹು ಭಾಷಗಳಲ್ಲಿ ಸಾಮರಸ್ಯ ಮೂಡಿಸುವ ಕೆಲಸ ಮಾಡುತ್ತವೆ ಎಂದು ಹಿರಿಯ ಸಾಹಿತಿ ಅಗ್ರಹಾರ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾಂತರ ಅಧ್ಯಯನ ವಿಭಾಗದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ “ಸಾಂಸ್ಥಿಕ ಅನುವಾದಗಳ ಸವಾಲುಗಳು” ಎಂಬ ವಿಷಯದ ಕುರಿತು ಮಾತನಾಡಿದ ಅವರು, ಸಾಂಸ್ಥಿಕ ಭಾಷಾಂತರದ ವ್ಯಾಪಕತೆ ಅಪಾರವಾದದ್ದು. ಸ್ವಾಂತಂತ್ರ್ಯ ಬಂದ ನಂತರ ಆಡಳಿತಗಾರರು ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವ ಸಲುವಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ, ನ್ಯಾಷನಲ್ ಬುಕ್ ಟ್ರಸ್ಟ್ ಮುಂತಾದ ಸಂಸ್ಥೆಗಳನ್ನು ಸ್ಥಾಪಿಸಿದರು. ಅಲ್ಲದೇ ಇಂತಹ ಸಂಸ್ಥೆಗಳು ಅನುವಾದಕರ ಕೆಲಸ ನಿರರ್ಥಕವಾಗಿರುವ ಈಗಿನ ದಿನಮಾನಗಳಲ್ಲಿ ಅವರನ್ನು ಗುರುತಿಸುವ ಕೆಲಸ ಮಾಡುತ್ತಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಾಷಾಂತರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಮೋಹನ್ ಕುಂಟಾರ ಮಾತನಾಡಿ, ಭಾಷಾಂತರ ಎಂಬುದು ಸೃಜನಶೀಲ ಪ್ರಕ್ರಿಯೆ. ಸಾಂಸ್ಥಿಕ ಭಾಷಾಂತರದ ದೃಷ್ಟಿಯೇ ಭಾರತದ ಎಲ್ಲಾ ಭಾಷೆಗಳ ಸಾಹಿತ್ಯವನ್ನು ಏಕರೂಪದಲ್ಲಿ ನೋಡುವುದು. ಆ ಮೂಲಕ ಭಾವೈಕ್ಯ ಸಾಧಿಸುವುದೇ ಈ ಸಂಸ್ಥೆಗಳ ಮುಖ್ಯ ಉದ್ದೇಶ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರೆಬೆಕ್ಕಾ, ಶ್ವೇತಾ ಬಾಳಿ, ಭಾಷಾಂತರ ಅಧ್ಯಯನ ವಿಭಾಗದ ಸಂಶೋಧನಾರ್ಥಿಗಳು, ಇತರ ಅಧ್ಯಯನ ವಿಭಾಗಗಳ ಸಂಶೋಧನಾರ್ಥಿಗಳು ಹಾಗೂ ಎಂ.ಎ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸುದ್ದಿ ಓದಿದ್ದೀರಾ?:ವಿಜಯನಗರ | ಡಿ. ವಿರೇಶ್ ಗೆ ಪಿಹೆಚ್.ಡಿ ಪದವಿ ಘೋಷಣೆ
