ಪ್ರಸ್ತುತ ದಿನಗಳಲ್ಲಿ ಜೀವನಕ್ಕೆ ಎರಡು ಕೆಲಸಗಳನ್ನಾದರೂ ಮಾಡುವ ಅಗತ್ಯವಿದೆ. ಅಕ್ಷರದಿಂದ ಅನ್ನ ಹುಡುಕಿಕೊಳ್ಳುವ ಕೆಲಸವಾಗಬೇಕು ಎಂದು ವಿಜಯನಗರದ ಗುಡಗೇರಿ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಭೀಮೇಶ ಯರಡೋಣಿ ಅಭಿಪ್ರಾಯಪಟ್ಟರು.
ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ವತಿಯಿಂದ ಪಂಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 21 ದಿನಗಳ ಯುಜಿಸಿ ನೆಟ್ ಹಾಗೂ ಕೆ-ಸೆಟ್ ತರಬೇತಿ ಕಾರ್ಯಗಾರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಕೂಡ ಕೂಲಿ ಕಾರ್ಮಿಕರು ಉದ್ಯೋಗಕ್ಕೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಹಳ್ಳಿಗರು ನಗರಕ್ಕೆ ಗುಳೆ ಬರುತ್ತಿರುವುದು ನೋವಿನ ಸಂಗತಿಯಾಗಿದೆ. ಸಮತೋಲನದ ಜೀವನ ನಡೆಸಬೇಕೆಂದರೆ ಕೌಶಲ್ಯ, ಶಿಕ್ಷಣ ಎಲ್ಲದರಿಂದಲೂ ಕೆಲಸ ಮಾಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಂದ ಯಶಸ್ಸು ಕಾಣಬೇಕೆಂದು” ತಿಳಿಸಿದರು.
ಯಲ್ಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ರವಿ ಶೇಷಗಿರಿ ಮಾತನಾಡಿ, “ಅಧಿಕಾರ, ಅಂತಸ್ತುಗಳಿಂದ ವಂಚಿತರಾದರೂ ಅಕ್ಷರಗಳನ್ನು ಹುಡುಕಿಕೊಂಡು ಜೀವನದಲ್ಲಿ ಯಶಸ್ಸು ಕಂಡವರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವಕಾಶಗಳು ತುಂಬಾ ಇದ್ದು, ಬದುಕಿನ ಮಾರ್ಗಗಳನ್ನು ನಾವೇ ಗುರುತಿಸಿಕೊಂಡು ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು” ಎಂದು ಹೇಳಿದರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ ಕನ್ನಡ ವಿಶ್ವವಿದ್ಯಾಲಯದ ಅಧ್ಯಯನಾಂಗದ ನಿರ್ದೇಶಕ ಡಾ. ಅಮರೇಶ ಯತಗಲ್ ಮಾತನಾಡಿ, “ಸೋತವರು ಇತಿಹಾಸವನ್ನು ಸೃಷ್ಟಿಸಿದ್ದಾರೆ, ಸೋತು ಗೆದ್ದ ನಂತರ ಅದರಲ್ಲಿರುವ ಅನುಭವ ಯಾವ ವಿಶ್ವವಿದ್ಯಾಲಯಗಳಿಂದ ಸಿಗುವುದಿಲ್ಲ. ಆದರೆ, ಇದಕ್ಕೆ ಸತತ ಪ್ರಯತ್ನ ಯಶಸ್ಸು ಕಾಣಲು ಸಾಧ್ಯ. ಪ್ರಮುಖವಾಗಿ ಅಧಿಕಾರದಿಂದ ನಮ್ಮನ್ನು ನಾವೇ ಮರೆಯಬಾರದು, ಬಂದಿರುವ ಹಾದಿಯನ್ನು ಸದಾಕಾಲವೂ ನೆನಪಿನಲ್ಲಿಟ್ಟುಕೊಂಡು ಜೀವನ ನಡೆಸಬೇಕು. ಅಧಿಕಾರ ಯಾವುದೇ ಇರಲಿ, ಅಲ್ಲಿ ಬದಲಾವಣೆ ತರಬೇಕು ಇಂತಹ ಕೆಲಸವನ್ನು ಡಾ. ವೆಂಕಟಗಿರಿ ದಳವಾಯಿ ಅವರು ನಿರಂತರ ಮಾಡುತ್ತಿದ್ದಾರೆ. ನಮ್ಮ ಬಾಲ್ಯದಲ್ಲಿ ಇಂತಹ ಕಾರ್ಯಗಾರಗಳು ಹಾಗೂ ತರಬೇತಿಗಳು ನಮಗೆ ಇರಲಿಲ್ಲ. ನಿಮಗಿರುವ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಳ್ಳಿ” ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಇದನ್ನೂ ಓದಿ: ವಿಜಯನಗರ | ಆಡಂಬರವಿಲ್ಲದೆ ಸಂವಿಧಾನ ಸಾಕ್ಷಿಯಾಗಿ ಅಂತರ್ಜಾತಿ ವಿವಾಹವಾದ ನವದಂಪತಿ
ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥರು ಹಾಗೂ ತರಬೇತಿ ಕಾರ್ಯಾಗಾರದ ಸಂಚಾಲಕ ಡಾ. ವೆಂಕಟಗಿರಿ ದಳವಾಯಿ ಮಾತನಾಡಿ, “ಯುಜಿಸಿ ನೆಟ್ ಮತ್ತು ಕೆ-ಸೆಟ್ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಕಾರ್ಯಾಗಾರಗಳ ಸಂಪನ್ಮೂಲ ವ್ಯಕ್ತಿಗಳು ಯಾವುದೇ ಪ್ರತಿಫಲ ಬಯಸದೆ ದೂರದ ಊರುಗಳಿಂದ ಬಂದು ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಬೋಧನೆ ಮಾಡಿರುವುದು ಕನ್ನಡ ವಿಶ್ವವಿದ್ಯಾಲಯದ ಮೇಲಿಟ್ಟಿರುವ ಅಭಿಮಾನ. ಇನ್ನು ಇಂತಹ ಕಾರ್ಯಾಗಾರಗಳಿಂದ ವಿದ್ಯಾರ್ಥಿಗಳಿಗೆ ಮಾಸಿಕ ಹಾಗೂ ಭೌದ್ಧಿಕವಾಗಿ ಅತ್ಮ ತುಂಬುವ ಕಾರ್ಯವನ್ನು ಕನ್ನಡ ವಿಶ್ವವಿದ್ಯಾಲಯ ಮಾಡುತ್ತದೆ” ಎಂದು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯದ ಡೀನರಾದ ಡಾ.ಎಫ್.ಟಿ. ಹಳ್ಳಿಕೇರಿರವರು ಮಾತನಾಡಿ, “ಪ್ರಸ್ತುತ ದಿನಗಳಲ್ಲಿ ಸ್ಪರ್ಧಾತ್ಮಕ ಪೈಪೋಟಿಗಳಿಂದು, ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ, ಪರಿಶ್ರಮ ಹಾಗೂ ಶ್ರದ್ಧೆ ಸೂಕ್ತ ರೀತಿಯಲ್ಲಿ ಅಭ್ಯಾಸ ಮಾಡಬೇಕು. ಮುಖ್ಯವಾಗಿ ಕನ್ನಡ ವಿಶ್ವವಿದ್ಯಾಲಯವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ವಿಶೇಷವಾಗಿ ಇಂತಹ ತರಬೇತಿ ಕಾರ್ಯಾಗಾರಗಳನ್ನು ಏರ್ಪಡಿಸಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು” ಎಂದರು.
ಕಾರ್ಯಕ್ರಮದಲ್ಲಿ ವಿವಿಧ ನಿಕಾಯ ಡೀನರು, ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಆಡಳಿತ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಗೂ ಇತರರಿದ್ದರು.
.