ಅನೈತಿಕ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಹಾಡಹಗಲೇ ಪತ್ನಿಯ ಪ್ರಿಯಕರನನ್ನು ಪತಿ ಕೊಲೆ ಮಾಡಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ತಾಲೂಕಿನಲ್ಲಿ ನಡೆದಿದೆ.
ಹಗರಿ ಬೊಮ್ಮನಹಳ್ಳಿ ತಾಲೂಕಿನ ಚೀಲಗೋಡು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೊಲೆಯಾದ ಯುವಕನನ್ನು ಬಸವರಾಜ್ ಎಂದು ಗುರುತಿಸಲಾಗಿದೆ. ಚಿಲುಗೋಡು ಗ್ರಾಮದ ಬಸರಕೋಡು ಫಕೀರಸ್ವಾಮಿ ಕೊಲೆಗೈದ ಆರೋಪಿ.
ತನ್ನ ಪತ್ನಿಯೊಂದಿಗೆ ಬಸವರಾಜ್ ಅನೈತಿಕ ಸಂಬಂಧ ಹೊಂದಿದ್ದ ಎನ್ನುವ ಕಾರಣಕ್ಕೆ ಕೊಡಲಿಯಿಂದ ಕುತ್ತಿಗೆಯ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕೊಲೆಗೀಡಾದ ಬಸವರಾಜ್ ಮನೆಯೊಂದರಲ್ಲಿ ಟ್ರ್ಯಾಕ್ಟರ್ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಫಕೀರಸ್ವಾಮಿಯ ಪತ್ನಿಯ ಪರಿಚಯವಾಗಿದೆ. ಈ ಪರಿಚಯವೇ ಪ್ರೀತಿಗೆ ತಿರುಗಿತ್ತು.ಇವರಿಬ್ಬರ ಪ್ರೀತಿಯ ವಿಚಾರ ಕುಟುಂಬದವರಿಗೆ ತಿಳಿದ ಬಳಿಕ, ಇಬ್ಬರನ್ನೂ ಕರೆದು ಬುದ್ಧಿವಾದ ಹೇಳಿದ್ದರು ಎಂದು ತಿಳಿದುಬಂದಿದೆ.
ಇದನ್ನು ಓದಿದ್ದೀರಾ? ಬೀದರ್ | ʼವಚನ ದರ್ಶನ’ ಕೃತಿಯಿಂದ ಬಸವಣ್ಣನವರಿಗೆ ಅಪಚಾರ : ಸಾಣೇಹಳ್ಳಿ ಶ್ರೀ
ಈ ನಡುವೆ ಕೆಲವು ದಿನಗಳ ಹಿಂದೆ, ಬಸವರಾಜ್ ಹಾಗೂ ಫಕೀರಸ್ವಾಮಿಯ ಪತ್ನಿ ನಾಪತ್ತೆಯಾಗಿದ್ದರು. ಬಳಿಕ ಅವರನ್ನು ಪತ್ತೆ ಹಚ್ಚಿ, ಊರಿನ ಹಿರಿಯ ಮುಖಂಡರು ಸೇರಿ ಕರೆಸಿ ಸಂಧಾನ ಮಾಡಿದ್ದರು ಎನ್ನಲಾಗಿದೆ. ಆದರೂ ಇವರಿಬ್ಬರೂ ಮತ್ತೆ ಸಂಪರ್ಕವಿಟ್ಟುಕೊಂಡಿದ್ದರಿಂದ ಆಕ್ರೋಶಗೊಂಡ ಮಹಿಳೆಯ ಪತಿ ಫಕೀರಸ್ವಾಮಿ, ಬಸವರಾಜ್‌ನನ್ನು ಕೊಲೆ ಮಾಡಿದ್ದಾನೆ. ಆ ಬಳಿಕ ತಾನೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಹಗರಿ ಬೊಮ್ಮನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಕೊಲೆಗೈದಿರುವ ಆರೋಪಿಯನ್ನು ಬಂಧಿಸಿದ್ದು, ಮುಂದಿನ ಕ್ರಮ ಕೈಗೊಂಡಿರುವುದಾಗಿ ತಿಳಿದುಬಂದಿದೆ.
