ಹಂಪಿಯಲ್ಲಿ ಮಹಾರಾಷ್ಟ್ರದ ಪ್ರವಾಸಿ ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ ಅನಧಿಕೃತ ಪ್ರವಾಸಿ ಮಾರ್ಗದರ್ಶಿಯೊಬ್ಬನನ್ನು ಹಂಪಿ ಪ್ರವಾಸೋದ್ಯಮ ಪೊಲೀಸರು ಬಂಧಿಸಿದ್ದಾರೆ. ಮಾರುತಿ ಅಂಜನಿ ಬಂಧಿತ ಆರೋಪಿ.
ಮಹಾರಾಷ್ಟ್ರದ ಮೀರಾನಗರದಿಂದ ಮಹಿಳಾ ಪ್ರವಾಸಿ ಮಾರುತಿ ಎಂಬುವವರ ವಿರುದ್ಧ ದೂರು ನೀಡಿದ್ದಾರೆ. ಆತನೊಂದಿಗೆ ಪ್ರವಾಸೋದ್ಯಮ ಇಲಾಖೆಯ ಕಚೇರಿಗೆ ಬಂದಾಗ, ಅಲ್ಲಿದ್ದ ಸಿಬ್ಬಂದಿ ತಮಗೆ ಬೆಂಬಲ ನೀಡದೆ, ಆರೋಪಿಗೇ ನೆರವಾಗುವ ರೀತಿಯಲ್ಲಿ ವರ್ತಿಸಿದರು. ಹೀಗಾಗಿ ಇಲಾಖೆಯ ಸಿಬ್ಬಂದಿ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಮಹಿಳೆ ದೂರಿದ್ದಾರೆ.
ಮಹಿಳೆ ದೂರು ನೀಡಲು ಬಂದಾಗ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ ಅವರು ಕಚೇರಿಯಲ್ಲಿ ಇರಲಿಲ್ಲ. ಕರ್ನಾಟಕ–50 ವೈಭವ ಕುರಿತಂತೆ ಜಿಲ್ಲಾಧಿಕಾರಿ ಅವರು ಕರೆದಿದ್ದ ಸಿದ್ಧತಾ ಸಭೆಯಲ್ಲಿ ಪಾಲ್ಗೊಳ್ಳಲು ಹೊಸಪೇಟೆಗೆ ಹೋಗಿದ್ದರು. ಅವರು ವಾಪಸ್ ಬಂದಾಗ ವಿಷಯ ಗೊತ್ತಾಗಿದ್ದು, ಬಳಿಕ ಹಂಪಿ ಠಾಣೆಗೆ ದೂರು ನೀಡಿದ್ದಾರೆ.
ಮಹಿಳೆಯ ಹೇಳಿಕೆ ಆಧರಿಸಿ ಅನಧಿಕೃತ ಪ್ರವಾಸಿ ಮಾರ್ಗದರ್ಶಿ ಮಾರುತಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಾರುತಿ ತನ್ನನ್ನು ಪ್ರವಾಸಿ ಮಾರ್ಗದರ್ಶನೆಂದು ಪರಿಚಯಿಸಿಕೊಂಡಿದ್ದ. ಹೀಗಾಗಿ ಅವರ ಸೇವೆಯನ್ನು ಮಹಿಳೆ ಒಪ್ಪಿಕೊಂಡಿದ್ದರು. ಪ್ರವಾಸಿಗರು ಅನಧಿಕೃತ ಪ್ರವಾಸಿ ಮಾರ್ಗದರ್ಶಕರ ಬಗ್ಗೆ ಎಚ್ಚರದಿಂದ ಇರಬೇಕು. ಪ್ರವಾಸಿಗರಿಗೆ ಮಾರ್ಗದರ್ಶಕರ ಸೇವೆಯ ಅಗತ್ಯವಿದ್ದಲ್ಲಿ, ಅವರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಭುಲಿಂಗ ತಳಕೇರಿ ಹೇಳಿದ್ದಾರೆ.
ವ್ಯಕ್ತಿಯ ವಿರುದ್ಧ ವಿರುದ್ಧ ಐಪಿಸಿ ಸೆಕ್ಷನ್ 509ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ. ಅಸಡ್ಡೆಯಿಂದ ವರ್ತಿಸಿದ ಮೂವರು ಸಿಬ್ಬಂದಿಗಳಿಗೂ ನೋಟಿಸ್ ಜಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.