ಎರಡು ಸಾವಿರ ವರ್ಷಗಳಿಂದ ಅಜ್ಞಾನದಿಂದ ಕೆಲವೇ ಕೆಲವು ಬೆರಳೆಣಿಕೆ ಜನರು ತಮ್ಮ ಸ್ವಾರ್ಥ ಸಾಧನೆಗಾಗಿ ಬಹುಜನರ ಕಣ್ಣನ್ನು ಮುಚ್ಚಿಸಿದ್ದರು. ಇಂತಹ ಬಹುಜನರ ಕಣ್ಣನ್ನು ಜ್ಞಾನದ ಮೂಲಕ ತೆರೆಸಿದ ಸಂದರ್ಭವೇ ಸಂವಿಧಾನ ಭಾರತಕ್ಕೆ ಸಮರ್ಪಣೆಯಾದ ಈ ದಿನ ಎಂದು ಪ್ರೊ. ಎನ್ ಚಿನ್ನಸ್ವಾಮಿ ಸೋಸಲೆ ಹೇಳಿದರು.
ವಿಜಯನಗರ ಜಿಲ್ಲೆ ಹೊಸಪೇಟೆಯ ಬಾಬಾ ಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಸಂಘದಿಂದ ನಗರದ ಜೈ ಭೀಮ್ ವೃತ್ತದಲ್ಲಿ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
“ನಾವು ಕಣ್ಣಿಗೆ ಕಾಣದ ದೇವರನ್ನು ಕಣ್ಣು ಮುಚ್ಚಿ ಭಕ್ತಿಯಿಂದ ಪೂಜಿಸುವ ಅಜ್ಞಾನದ ಮಾದರಿಯಲ್ಲಿ ಸಂವಿಧಾನವನ್ನು ನೋಡಬಾರದು. ಬದಲಿಗೆ ತೆರೆದ ಕಣ್ಣಿನ ಸುಜ್ಞಾನದ ಮೂಲಕ ನೋಡಿ ಗ್ರಹಿಸಬೇಕಾಗಿದೆ. ಏಕೆಂದರೆ ಸಂವಿಧಾನ ಮಾತನಾಡುತ್ತದೆ. ಮಾತು ಕಲಿಸುತ್ತದೆ. ಹಾಗೆಯೇ ಮುನ್ನಡೆಸುತ್ತದೆ. ಆದರೆ ನಾವು ಮಾತ್ರ ಈ ಜನಮುಖಿ ಸಂವಿಧಾನವನ್ನು ಮಾತನಾಡಿಸಲು ಹೋಗುತ್ತಿಲ್ಲ. ಬದಲಿಗೆ ಇನ್ನೂ ಕೂಡ ನಮ್ಮ ಕಣ್ಣು ಮುಚ್ಚಿಕೊಂಡೇ ದೇವರ ಹೆಸರಿನ ಅಜ್ಞಾನದಿಂದ ಮಾತನಾಡುತ್ತಿರುವ ಪುರಾಣದ ಸಂವಿಧಾನವನ್ನೇ ಮಾತನಾಡಿಸಲು ಹಂಬಲಿಸುತ್ತಿರುವುದು ನಮ್ಮ ನಡುವಿನ ಬಹುದೊಡ್ಡ ಸಂವಿಧಾನಾತ್ಮಕ ದುರಂತ” ಎಂದರು.
“ಯಾರಿಗೆ ಇಂತಹ ಜನಮುಖಿ ಚಿಂತನೆಯ ಸಂವಿಧಾನದ ಅವಶ್ಯಕತೆ ಇರಲಿಲ್ಲವೋ ಅವರೂ ಕೂಡ ಸಂದರ್ಭಕ್ಕೆ ಹೊಂದಿಕೊಂಡೇ ಅದನ್ನು ಮಾತನಾಡಿಸುವುದು ಗೊತ್ತು. ತಮಗೆ ಸಾಂಸ್ಕೃತಿಕವಾಗಿ ಬೇಕಾದ ಎಲ್ಲವನ್ನು ಸಂವಿಧಾನಾತ್ಮಕವಾಗಿಯೇ ಪಡೆದುಕೊಳ್ಳುವುದೂ ಗೊತ್ತು” ಎಂದು ಹೇಳಿದರು.
“ಮಾತಾಡುವ ಸಂವಿಧಾನವನ್ನು ನಾವು ಮಾತನಾಡಿಸಬೇಕಾದರೆ ನಮಗೆ ಪ್ರಜ್ಞಾಪೂರ್ವಕ ಶಿಕ್ಷಣ ಬಹು ಮುಖ್ಯವಾದದ್ದು. ನಾವು ಪದವಿಗಳ ಮೇಲೆ ಪದವಿಯನ್ನು ಪಡೆದು ಶಿಕ್ಷಣವಂತರಾಗುತ್ತಿದ್ದೇವೆ ಎಂದುಕೊಂಡರೂ ಕೂಡ ಅಂತರಾಳದಲ್ಲಿ 2000 ವರ್ಷಗಳಿಂದ ನಮ್ಮ ಮನದಲ್ಲಿ ಅಡಗಿರುವ ಜ್ಞಾನದ ಪಾರಂಪರಿಕ ಶಿಕ್ಷಣವನ್ನೇ ಮೈಗೂಡಿಸಿಕೊಂಡಿರುವ ಕಾರಣಕ್ಕಾಗಿ ಏನೇ ಶಿಕ್ಷಣ ಪಡೆದರೂ ಕೂಡ ಸಂವಿಧಾನಾತ್ಮಕವಾಗಿ ಪ್ರಬುದ್ಧತೆಯ ಶಿಕ್ಷಣವಂತರಾಗುತ್ತಿಲ್ಲ. ಇದು ಇಂದಿನ ಸಂದರ್ಭದ ಬಹುಜನರ ಬಹುದೊಡ್ಡ ತೊಡಕಾಗಿದೆ” ಎಂದು ಬೇಸರ ವ್ಯಕ್ತಪಡಿಸಿದರು.
“ಶಿಕ್ಷಣವಂತರು ಸಂವಿಧಾನ ಜ್ಞಾನವಿಲ್ಲದೇ ಕಟ್ಟಿಕೊಳ್ಳುತ್ತಿರುವ ಸಂಘಟನೆಗಳು ಗಟ್ಟಿಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹೋರಾಟಗಳೂ ಫಲ ಕೊಡುತ್ತಿಲ್ಲ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ನವೆಂಬರ್ 26ರಂದು ಬಾಬಾಸಾಹೇಬ್ ಅಂಬೇಡ್ಕರ್ ಅವರು ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಪೂರಕವಾದ ಜನಮುಖಿ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಸಂವಿಧಾನವನ್ನು ಬರೆದು ಅದರ ಮೂಲ ಕರುಡನ್ನು ರಾಷ್ಟ್ರಪತಿಗೆ ಅರ್ಪಿಸಿದ ದಿನದ ಅಂಗವಾಗಿ ಇಂದು ಸಂವಿಧಾನ ದಿನವೆಂದು ಆಚರಿಸಲಾಗುತ್ತಿದೆ” ಎಂದರು.
ಹೊಸಪೇಟೆಯ ಪ್ರಗತಿಪರ ಚಿಂತಕ ಜಂಬಣ್ಣ ನಾಯಕ ಮಾತನಾಡಿ, “ಬಾಬಾ ಸಾಹೇಬರು ಭಾರತಕ್ಕಾಗಿ ಅರ್ಪಿಸಿದ ಈ ಸಂವಿಧಾನವೇ ನಮ್ಮೆಲ್ಲರ ಒಡಲು ಹಾಗೂ ಜೀವ” ಎಂದು ಹೇಳಿದರು.
“ಸಾವಿರಾರು ವರ್ಷಗಳಿಂದ ನಮ್ಮ ಮೂಲಭೂತ ಹಕ್ಕುಗಳನ್ನು ಕೆಲವೇ ಕೆಲವು ಮೂಲಭೂತವಾದಿಗಳು ಕಸಿದುಕೊಂಡಿದ್ದನ್ನು ಅಂಬೇಡ್ಕರ್ ಅವರು ರಚಿಸಿದ ನಮ್ಮ ದೇಶದ ಸಂವಿಧಾನದಿಂದ ನಮ್ಮ ಹಕ್ಕುಗಳು ನಮ್ಮ ಮನ ಹಾಗೂ ಮನೆಗೆ ತಲುಪುವಂತಾಗಿದೆ. ಇಂತಹ ಸಂವಿಧಾನವನ್ನು ಪ್ರಪಂಚವೇ ಒಪ್ಪಿಕೊಂಡು ಕೊಂಡಾಡುತ್ತಿರುವಾಗ ನಮ್ಮ ಕೆಲವೇ ಕೆಲವು ಸಂಪ್ರದಾಯವಾದಿ ದೇಶೀಯರು ಏಕೆ ವಿರೋಧಿಸುತ್ತಿದ್ದಾರೆ” ಎಂದು ವಿಷಾದ ವ್ಯಕ್ತಪಡಿಸಿದರು.
ವಿಜಯನಗರ ಜಿಲ್ಲೆ ಬಾಬಾಸಾಹೇಬ್ ಡಾ. ಬಿ ಆರ್ ಅಂಬೇಡ್ಕರ್ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಬಣ್ಣದಮನೆ ಅವರು ಪ್ರಸ್ತಾವಿಕವಾಗಿ ಮಾತನಾಡಿ ಸಂವಿಧಾನದ ಪೀಠಿಕೆಯನ್ನು ಬೋಧಿಸಿದರು. ಹೊಸಪೇಟೆ ನಗರದ ನೂರಾರು ಪ್ರಗತಿಪರ ಚಿಂತಕರು ಸೇರಿದ್ದ ಈ ಸಮಾರಂಭವು ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಒಂದೇ ಧ್ವನಿಯಲ್ಲಿ ಓದುವ ಮೂಲಕ ರಾಷ್ಟ್ರದ ಸಾರ್ವಭೌಮತ್ವವನ್ನು ಎತ್ತಿ ಹಿಡಿದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಬಾಬಾಸಾಹೇಬರನ್ನು ಹೊರತುಪಡಿಸಿ ಸಂವಿಧಾನ ನೋಡಲು ಸಾಧ್ಯವೇ ಇಲ್ಲ: ಹಿರಿಯ ಸಿವಿಲ್ ನ್ಯಾ. ಮರಿಯಪ್ಪ
ಈ ಕಾರ್ಯಕ್ರಮದಲ್ಲಿ ಜೆ ಶಿವಕುಮಾರ್, ಬಿ ಹನುಮಂತಪ್ಪ, ರಾಮಚಂದ್ರ ಬಾಬು, ಸಣ್ಣ ಮಾರೆಪ್ಪ, ಡಿ ವೆಂಕಟರಮಣ, ಬಿ ಚಂದ್ರಶೇಖರ್, ಕಾರಿಗೆನೂರ್ ರಾಮಕೃಷ್ಣ, ಸಿ ಗೊವಿಂದರಾಜ್, ರಫೀಕ್, ಕಟಿಗಿ ಇರ್ಫಾನ್, ಸಜ್ಜಾದ್ ಖಾನ್, ಸಿ ನೀಲಕಂಟ, ಜೆ ಸಿ ಈರಣ್ಣ, ಸಿ ರಾಜ, ಸಿ ರಾಮಚಂದ್ರ, ತಾಯಪ್ಪ ನಾಯಕ, ಅಂಜಲಿ ಬೆಳಗಲ್, ತಮಾನಳೆಪ್ಪ, ಸಿ ರಮೇಶ್, ಚಂದ್ರ ಮೋಹನ್ ಸೇರಿದಂತೆ ಅನೇಕ ದಲಿತ ಮತ್ತು ಪ್ರಗತಿಪರ ಮುಖಂಡರು ಇದ್ದರು.