ಹರಪನಹಳ್ಳಿ ತಾಲೂಕಿನಲ್ಲಿರುವ ತಹಸೀಲ್ದಾರ್ ಭ್ರಷ್ಟಚಾರದ ಆಡಳಿತ ನಡೆಸುತ್ತಿದ್ದಾರೆ. ಅವರನ್ನು ಕೂಡಲೇ ತಾಲೂಕಿನಿಂದ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ತಾಲೂಕಿನ ವಿವಿಧ ಸಂಘಟನೆಗಳ ಮುಖಂಡರು ಮಂಗಳವಾರ ಶಾಸಕರು ಮತ್ತು ತಾಲೂಕು ಉಪವಿಭಾಗಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ.
ಈ ವೇಳೆ ಹೋರಾಟಗಾರ ಇದ್ಲಿ ರಾಮಪ್ಪ ಮಾತನಾಡಿ, “ತಹಸೀಲ್ದಾರ್‌ರವರು ಸಾರ್ವಜನಿಕ ಸಮಸ್ಯೆಗಳನ್ನು ಕೇಳುವುದೇ ಇಲ್ಲ. ಸಮಸ್ಯೆಗಳನ್ನು ಕಾನೂನಾತ್ಮಕವಾಗಿ ಬಗೆಹರಿಸಿದೆ ದಲ್ಲಾಳಿ ಜನರನ್ನು ಇಟ್ಟುಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಹರಪನಹಳ್ಳಿ ತಾಲೂಕಿನಲ್ಲಿ ಹಿರೇಕೆರೆ ಮತ್ತು ಅಯ್ಯನಕೇರಿ ವ್ಯಾಪ್ತಿಯ ಕೋಟೆ ಕಾಳಮ್ಮ ಮತ್ತು ಕೋಟೆ ಆಂಜನೇಯ ದೇವಸ್ಥಾನಗಳ ಒತ್ತುವರಿಯನ್ನು ತೆರವುಗೊಳಿಸಲು ತುಂಬಾ ಪಕ್ಷಪಾತ ದೋರಣೆ ಅನುಸರಿಸಿದ್ದು, ಸರಿಯಾಗಿ ದಾಖಲಾತಿಗಳಿದ್ದರೂ ಸಹ ಒತ್ತುವರಿಯನ್ನು ತೆರವುಗೊಳಸದೇ ಒತ್ತುವರಿದಾರರ ಪರವಾಗಿ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ವಿನಾಕಾರಣ ಸಬೂಬ್ ಹೇಳಿ ಒತ್ತುವರಿಯನ್ನು ತೆರವುಗೊಳಿಸದೇ ಬಂದಿದ್ದಾರೆ.
ಇದೇ ರೀತಿ ತಾಲೂಕಿನಲ್ಲಿ ಅಕ್ರಮ ಕಲ್ಲುಗಣಿ ಗಾರಿಕೆ ಮತ್ತು ಮಣ್ಣು, ಮರಳು ಗಣಿಗಾರಿಕೆ ನಡೆಯುತ್ತಿದ್ದರೂ ಸಹ ಕಾನೂನು ಪ್ರಕಾರ ಕ್ರಮ ಜರುಗಿಸದೇ ಇದ್ದು, ಇವೆಲ್ಲವೂ ಭಷ್ಟಚಾರಕ್ಕೆ ಕುಮ್ಮಕ್ಕು ಕೊಟ್ಟಂತಾಗುತ್ತದೆ. ಆದ್ದರಿಂದ ಸದರಿ ತಹಸೀಲ್ದಾರ್‌ರವರನ್ನು ಕೂಡಲೇ ತಾಲೂಕಿನಿಂದ ವರ್ಗಾವಣೆ ಮಾಡ ಬೇಕೆಂದು ಮನವಿ ಮಾಡಿದ್ದಾರೆ.
ಕರ್ನಾಟಕ ರೈತ ಮಿತ್ರ ಸಂಘದ ರಾಜ್ಯಾಧ್ಯಕ್ಷ ಎಚ್. ವೆಂಕಟೇಶ್ ಮಾತನಾಡಿ, ತಾಲೂಕಿನಲ್ಲಿ ಮರಳು ದಂಧೆ, ಗಣಿಗಾರಿಕೆ ದಂದೆ, ಮಣ್ಣಿನ ಮಾರಾಟ ದಂದೆ ಎಗ್ಗಿಲ್ಲದೆ ನಡೆಯುತ್ತಿದ್ದು, ತಹಸೀಲ್ದಾರರ ಗಮನಕ್ಕೆ ಅನೇಕ ಬಾರಿ ತಂದರೂ ಸಹ ಇವುಗಳ ಮೇಲೆ ಒಂದು ಪ್ರಕರಣವನ್ನು ದಾಖಲಿಸಲು ಮೀನಮೇಷ ಎಣಿಸುತ್ತಿದ್ದಾರೆ. ಈ ವ್ಯವಹಾರಗಳನ್ನು ಮಾಡುವವರ ಪರವಾಗಿ ವಕಾಲತ್ತು ವಹಿಸುತ್ತಾ ಹೋರಾಟಗಾರರನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ ಇದಕ್ಕೆ ನೇರವಾಗಿ ತಾಹಸೀಲ್ದಾರರು ಕಾರಣ ಆಗಿರುತ್ತಾರೆ.
ತಾಲೂಕಿಗೆ ಇವರು ಬಂದಾಗಿನಿಂದ ಕಲ್ಲುಗಾಣಿಗಾರಿಕೆ, ಮರಳು ಗಣಿಗಾರಿಕೆ ವಿಪರೀತವಾಗಿಬಿಟ್ಟಿದೆ. ತಹಸೀಲ್ದಾರರು ಸಾಕಷ್ಟು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬುದು ಇದರಿಂದ ಗೊತ್ತಾಗುತ್ತದೆ ಹಾಗಾಗಿ ಶಾಸಕರು ಈ ಕೂಡಲೇ ಇವರನ್ನು ವರ್ಗಾವಣೆ ಅಥವಾ ಅಮಾನತುಗೊಳಿಸಬೇಕು ಎಂದು ಕೇಳಿಕೊಳ್ಳುತ್ತೇವೆ. ಒಂದು ವೇಳೆ ಇವರನ್ನು ತಾಲೂಕಿನಲ್ಲಿಯೇ ಮುಂದುವರಿಸಿದ್ದೆ ಆದಲ್ಲಿ ಶಾಸಕರ ಕಚೇರಿ ಮುಂದೆ ಅನಿರ್ದಿಷ್ಟ ಅವಧಿ ಧರಣಿಯನ್ನು ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಗುಡಿಯಳ್ಳಿ ಹಾಲೇಶ್ ಮಾತನಾಡಿ, ತಾಲೂಕಿಗೆ ಮಹಿಳಾ ಶಾಸಕರಾಗಿದ್ದಕ್ಕೆ ಆರಂಭದಲ್ಲಿ ನಾವೆಲ್ಲರೂ ಸಂತೋಷಪಟ್ಟೆವು. ಆದರೆ, ಇವರು ಜನಪರವಾಗಿ ಆಡಳಿತವನ್ನು ನಡೆಸದೆ ಭ್ರಷ್ಟ ಅಧಿಕಾರಿಗಳನ್ನು ತಾಲೂಕಿನಲ್ಲಿ ಇಟ್ಟುಕೊಂಡಿದ್ದಾರೆ . ತಹಸೀಲ್ದಾರರ ಗಮನಕ್ಕೆ ಅಕ್ರಮ ಮರಳು ಶೇಖರಣೆ, ಕಲ್ಲು ಗಣಿಗಾರಿಕೆ ಈ ರೀತಿಯಾದಂತಹ ಅನೇಕ ಅಪರಾಧ ಕೃತ್ಯಗಳನ್ನು ತಹಸೀಲ್ದಾರರು ರಕ್ಷಿಸುತ್ತಿದ್ದಾರೆ.
ಅಲ್ಲದೆ, ನದಿ ಪಾತ್ರದ ಗ್ರಾಮವಾದ ನಿಟ್ಟೂರಿನಲ್ಲಿ ಅಕ್ರಮವಾಗಿ ಮರಳನ್ನು ಸಂಗ್ರಹಿಸಿದವರ ವಿರುದ್ಧ ಕ್ರಮ ಕೈಗೊಂಡು ಮರಳನ್ನು ಸೀಸ್ ಮಾಡುವಂತೆ ಹೋರಾಟಗಾರರು ಮತ್ತು ನಾನು ಕೂಡ ತಹಸೀಲ್ದಾರರ ಗಮನಕ್ಕೆ ತಂದರು ಸಹ ಯಾವುದೇ ಪ್ರಯೋಜನವಾಗಲಿಲ್ಲ. ಹೋರಾಟಗಾರರಿಗೆ ಬೆದರಿಕೆಯನ್ನು ಒಡ್ಡುತ್ತಿದ್ದಾರೆ. ಇಂಥ ಬೆದರಿಕೆಗಳಿಗೆ ನಮ್ಮ ತಾಲೂಕಿನಲ್ಲಿ ಬೆದರುವವರು ಯಾರು ಇಲ್ಲ. ಇಲ್ಲಿ ಪ್ರಜ್ಞಾವಂತ ಹೋರಾಟಗಾರರು ಇದ್ದಾರೆ. ಇವರನ್ನು ಆಡಳಿತದಲ್ಲಿ ಶಾಸಕರು ಹೀಗೆ ಮುಂದುವರಿಸಿದ್ದೆ ಆದಲ್ಲಿ, ನಾವು ಧರಣಿ ಸತ್ಯಾಗ್ರಹವನ್ನು ನಡೆಸಬೇಕಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಎಸ್. ಪರಶುರಾಮ್, ಮೈಲಪ್ಪ, ರೈತ ಸಂಘದ ತಾಲೂಕು ಅಧ್ಯಕ್ಷ ದ್ಯಾಮಜ್ಜಿ ಹನುಮಂತಪ್ಪ ಗಿಡ್ಡಳ್ಳಿ, ಕೊಟ್ರೇಶ್ ವಿದ್ಯಾರ್ಥಿ ಮುಖಂಡ ವೆಂಕಟೇಶ್ ನಾಯ್ಕ್, ನಾಗರಾಜ್ , ಗಿಡ್ಡಳ್ಳಿ ನಾಗರಾಜ್ , ಇಮಾಮ್ ಸಾಬ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.