ಈ ದೇಶದ ಇತಿಹಾಸ ಮತ್ತು ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ತಿಳಿಸುವಲ್ಲಿ ರಕ್ಕಸ ಕಲ್ಲುಗಳು ಅತ್ಯಂತ ಪ್ರಮುಖ ಪಾತ್ರ ವಹಿಸಲಿದ್ದು, ಅವುಗಳನ್ನು ರಕ್ಷಿಸಲು ವಿಜಯನಗರದ ಅಂಚೆ ಕೊಟ್ರೇಶ್ ಪತ್ರ ಚಳವಳಿಯನ್ನು ಆರಂಭಿಸಿದ್ದಾರೆ.
ಪ್ರಾಗೈತಿಹಾಸಿಕ ಕಾಲದ ಶಿಲಾಯುಗ ಸಂಸ್ಕೃತಿಯ ತುಣುಕಿನ ಭಾಗದಂತಿರುವ ರಕ್ಕಸ ಅಥವಾ ರಾಕ್ಷಸ ಕಲ್ಲುಗಳು ಕೂಡ್ಲಿಗಿ ತಾಲೂಕಿನ ವಲಸೆ ಹಾಗೂ ಕುಮತಿ ಹಳ್ಳಿಗಳ ನಡುವೆ ಚಂದ್ರಶೇಖರ ಎಂಬುವವರ ಹೊಲದಲ್ಲಿವೆ. ಈ ರಕ್ಕಸ ಕಲ್ಲುಗಳು ಇನ್ನೇನು ಕೆಲವೇ ದಿನಗಳಲ್ಲಿ ಇತಿಹಾಸದಿಂದ ಮರೆಯಾಗುವ ಹಂತ ತಲುಪಿವೆ.ಇವುಗಳನ್ನು ರಕ್ಷಿಸುವ ಉದ್ದೇಶದಿಂದ ರಾಜ್ಯದ ಮುಖ್ಯಮಂತ್ರಿ ಹಾಗೂ ಪುರಾತತ್ವ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆಯುತ್ತಿದ್ದೇನೆ ಎನ್ನುವುದು ಕೊಟ್ರೇಶ್ ಅವರ ಮಾತು.
ರಾಜ್ಯದಲ್ಲಿ ಏಳೆಂಟು ಕಲ್ಲುಗಳು ಇರುವಂತಹ ಪ್ರದೇಶದಲ್ಲಿ ಈಗ ಬರೀ ಎರಡು ರಕ್ಕಸ ಕಲ್ಲುಗಳು ಉಳಿದಿವೆ. ಮನುಷ್ಯನ ಮೂಢನಂಬಿಕೆ ಮತ್ತು ಸ್ವಾರ್ಥದಿಂದ, ಧನ ಕನಕ ಸಿಗಬಹುದೆಂಬುವ ಆಸೆಯಲ್ಲಿ ಈ ರಕ್ಕಸ ಕಲ್ಲುಗಳನ್ನು ಹಾಳು ಮಾಡಲಾಗಿದೆ. ರಾಜ್ಯ ಪುರಾತತ್ವ ಇಲಾಖೆ ಇದುವರೆಗೂ ಇದನ್ನು ಗಮನಿಸಿಲ್ಲ. ಸುಮಾರು 15 ಅಡಿ ಎತ್ತರವಿರುವ ಈ ಕಲ್ಲುಗಳು ಅರ್ಧ ಅಡಿ ದಪ್ಪವಿರುವ ಮನುಷ್ಯನ ಆಕೃತಿಯಲ್ಲಿವೆ. ಕಲ್ಲುಗಳು ಬಯಲು ಸೀಮೆಯ ಈ ಪ್ರದೇಶಕ್ಕೆ ಬಂದದ್ದಾದರೂ ಹೇಗೆ ಎನ್ನುವ ಕುತೂಹಲ ಹಲವರಿಗೆ ಇದೆ, ಇದಕ್ಕೊಂದು ಪುರಾಣದ ಕಥೆಯೂ ಇದೆ.

“ಶಿಲಾಯುಗ ಕಾಲದಲ್ಲಿ ಈ ಪ್ರದೇಶದಲ್ಲಿ ರಾಕ್ಷಸರ ಹಾವಳಿ ಹೆಚ್ಚಾಗಿದ್ದು, ನುಂಕೇ ಮಲ್ಲೇ ಸಿದ್ದೇಶ್ವರ ಈ ರಾಕ್ಷಸರನ್ನು ಬಾಣ ಬಿಟ್ಟು ಸಂಹಾರ ಮಾಡಿ ಕಲ್ಲು ಮಾಡಿ ನಿಲ್ಲಿಸಿದ್ದಾರೆ ಎನ್ನುವ ಪ್ರತೀತಿ ಇದೆ. ಆಗಿನ ಕಾಲದ ಪ್ರಮುಖ ವ್ಯಕ್ತಿಗಳು ಸತ್ತಲ್ಲಿ ಅವರ ನೆನಪಿಗಾಗಿ ಈ ಸ್ಮಾರಕಗಳನ್ನು ನಿರ್ಮಿಸಲಾಗಿದೆ ಎಂದು ಊಹಿಸಲಾಗುತ್ತದೆ. ಇಂಥ ಸ್ಮಾರಕಗಳು ಇಲ್ಲಿ ಬಿಟ್ಟರೆ ಭಾರತದಾದ್ಯಂತ ಎಲ್ಲೂ ಸಿಗುವುದಿಲ್ಲ. ಈಗ ಈ ರಾಕ್ಷಸ ಕಲ್ಲುಗಳು ಹಲವು ಜನರಿಗೆ ದೇವರುಗಳಾಗಿವೆ. ಹಬ್ಬಗಳಲ್ಲಿ ಜಾತ್ರೆಗಳಲ್ಲಿ ಈ ಕಲ್ಲುಗಳಿಗೆ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಹೊಲದಲ್ಲಿ ಬಿತ್ತಲು ಬಂದಿರುವ ಜನರು ಬಿತ್ತುವುದಕ್ಕಿಂತ ಮುಂಚೆ ಈ ಕಲ್ಲುಗಳಿಗೆ ಪೂಜೆ ಮಾಡಿ ಬಿತ್ತುತ್ತಾರೆ. ಜನರೊಂದಿಗೆ ಜನಪದದೊಂದಿಗೆ ಬೆಸೆದುಕೊಂಡಿರುವ ಈ ರಕ್ಕಸ ಕಲ್ಲುಗಳು ಮುಂದಿನ ಜನಾಂಗದ ತಿಳಿವಳಿಕೆಗಾಗಿ ಉಳಿಯುವುದು ತುಂಬಾ ಅಗತ್ಯವಾಗಿದೆ. ಈ ರಕ್ಕಸ ಕಲ್ಲುಗಳಿಗೆ ಒಂದಿಷ್ಟು ಸೂರು ಮಾಡುವುದು ಸುತ್ತಲೂ ಬಿಗಿ ಭದ್ರತೆ ಮಾಡುವುದು ಪುರಾತತ್ವ ಇಲಾಖೆ ಕೆಲಸವಾಗಿದ್ದರೂ, ಇದುವರೆಗೂ ಯಾವ ಕಾರ್ಯವನ್ನು ಮಾಡಿರುವುದಿಲ್ಲ, ಈ ರಕ್ಕಸ ಕಲ್ಲುಗಳು ಇರುವ ಹೊಲದ ಒಡೆಯ ತನ್ನ ಹೊಲ ಸ್ವಲ್ಪ ಹೋದರು ಚಿಂತೆ ಇಲ್ಲ ಈ ಕಲ್ಲಿನ ಉಳಿವಿಗಾಗಿ ಶ್ರಮಿಸಬೇಕು ಎಂದಿದ್ದಾರೆ” ಎಂದು ಪತ್ರದಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ವಿಜಯಪುರ | ಚಿತ್ರಕಲಾ ಶಿಕ್ಷಕರ ನೇಮಕದಲ್ಲಿ ಸರ್ಕಾರ ತಾತ್ಸಾರ; ಪೊನ್ನಪ್ಪ ಕಡೇಮನಿ ಆಕ್ರೋಶ
ಈ ರಕ್ಕಸ ಕಲ್ಲುಗಳ ರಕ್ಷಣೆಯೇ ತಮ್ಮ ಗುರಿ ಎಂದು ತಿಳಿದುಕೊಂಡಿರುವ ಅಂಚೆ ಕೊಟ್ರೇಶ್ ಅವರು ಸರ್ಕಾರಕ್ಕೆ ಪತ್ರದ ಮೂಲಕ ರಕ್ಷಣೆಗಾಗಿ ವಿನಂತಿ ಮಾಡಿಕೊಂಡಿದ್ದಾರೆ. ಸರ್ಕಾರಕ್ಕೆ ಈ ಕೆಲಸ ಆಗದಿದ್ದರೆ ಸ್ಥಳೀಯರಿಗೆ ಅವಕಾಶ ಕೊಟ್ಟಲ್ಲಿ ಇದರ ರಕ್ಷಣೆಯ ಹೊಣೆಯನ್ನು ಹೊರುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ ಎಂದು ಪತ್ರ ಮೂಲಕ ಹೇಳಿದ್ದಾರೆ.
