ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಕುಸಿತತ ಪರಿಣಾಮ ಕ್ರೋಶಗೊಂಡ ರೈತರು ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ಭಾರೀ ಪ್ರಮಾಣದ ಟೊಮೆಟೊ, ಈರುಳ್ಳಿಯನ್ನು ರಸ್ತೆಗೆ ಸುರಿದು ಪ್ರತಿಭಟಿಸಿದ್ದು, ಸೂಕ್ತ ಪರಿಹಾರ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ಜಿ ಸಂತೋಷ ಕುಮಾರ್ ಅವರಿಗೆ ಮನವಿಪತ್ರ ಸಲ್ಲಿಸಿದರು.
ರೈತ ಗುರುಲಿಂಗಪ್ಪ ಮಾತನಾಡಿ, “ಒಂದು ಎಕರೆಯಲ್ಲಿ ಟೊಮೆಟೊ ಬೆಳೆಯಲು ₹35ರಿಂದ ₹40 ಸಾವಿರ ಖರ್ಚು ತಗುಲುತ್ತದೆ. ಸಂತೆಗಳಲ್ಲಿ ₹5ಕ್ಕೆ 2 ಕೆಜಿ ಟೊಮೆಟೊ ಮಾರಲಾಗುತ್ತದೆ. ಇದರಿಂದ ಬೆಳೆ ನಿರ್ವಹಣೆ, ಕೂಲಿ ವೆಚ್ಚವೂ ಸಿಗುತ್ತಿಲ್ಲ” ಎಂದು ಅಳಲು ತೊಡಿಕೊಂಡರು.
ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ಎನ್ ಎಂ ಸಿದ್ದೇಶ ಮಾತನಾಡಿ, “ವಿಜಯನಗರ ಜಿಲ್ಲೆ ಸೇರಿ ಉತ್ತರ ಕರ್ನಾಟಕದಲ್ಲಿ ಹಿಂಗಾರು ಋತುವಿನಲ್ಲಿ ಈರುಳ್ಳಿ ಉತ್ತಮ ಇಳುವರಿ ಬಂದಿದೆ. ಬೆಂಗಳೂರು ಮಾರುಕಟ್ಟೆಯಲ್ಲಿ ನಮ್ಮ ಭಾಗದ ಫಸಲಿಗೆ ಉತ್ತಮ ಬೆಲೆ ಸಿಗುತ್ತಿಲ್ಲ. ಪ್ರತಿ ಕ್ವಿಂಟಲ್ ಈರುಳ್ಳಿ ಉತ್ಪಾದನಾ ವೆಚ್ಚ ₹2,000ದಿಂದ ₹2,500 ಇದೆ. ಆದರೆ, ಮಾರುಕಟ್ಟೆಯಲ್ಲಿ ಕ್ವಿಂಟಲ್ ಈರುಳ್ಳಿ ದರ ₹1,000ದಿಂದ ₹1,200ಕ್ಕೆ ಕುಸಿದಿದೆ. ತಾಲೂಕು ಕೇಂದ್ರಗಳಲ್ಲಿ ಖರೀದಿ ಕೇಂದ್ರ ತೆರೆದು ಈರುಳ್ಳಿಯನ್ನು ಕ್ವಿಂಟಲ್‌ಗೆ ₹4,000ದಂತೆ ಖರೀದಿಸಬೇಕು” ಎಂದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಮದ್ರಸಾ ಪಬ್ಲಿಕ್ ಪರೀಕ್ಷೆ; ಮರು ಮೌಲ್ಯಮಾಪನದಲ್ಲಿ ಹಫ್ಸಾ ನಾಹಿದ್‌ಗೆ ಶೇ.99 ಅಂಕ
ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಯಾತದ ಪ್ರಭು, ರೈತರಾದ ಮೂಲಿಮನಿ ಶರಣಪ್ಪ, ಅಂಗಡಿ ನಾಗರಾಜ, ಮುದ್ದೇಗೌಡ್ರ ಬಸವರಾಜ, ಮಂಜುನಾಥ ಯಾಟಿ, ಮಂಜುನಾಥ, ಎಸ್ ಎಂ ಪಕ್ಕೀರಯ್ಯ ಇದ್ದರು.
