ವಿಜಯನಗರ ಜಿಲ್ಲೆಯ ಖಾಸಗಿ, ಅನುದಾನ ಹಾಗೂ ಅನುದಾನರಹಿತ ಶಾಲೆಗಳಲ್ಲಿ ಡೊನೇಷನ್ ಹಾವಳಿ ತಡಗಟ್ಟುವಂತೆ ಹಾಗೂ ಶಾಲೆಗಳ ಸೂಚನಾ ಫಲಕದಲ್ಲಿ ಶುಲ್ಕದ ವಿವರ ಪಟ್ಟಿಯನ್ನು ಹಾಕಲು ಒತ್ತಾಯಿಸಿ ಎಸ್ಎಫ್ಐ ಹೊಸಪೇಟೆ ತಾಲೂಕು ಸಮಿತಿಯಿಂದ ಡಿಡಿಪಿಐ ಅವರಿಗೆ ಮನವಿ ಸಲ್ಲಿಸಿದರು.
“ವಿಜಯನಗರ 2025-26ರ ಖಾಸಗಿ ಶಾಲೆಗಳ ಪ್ರವೇಶವನ್ನು ಆರಂಭಿಸಿದ್ದು, ದಾಖಲಾತಿ ನಡೆಯುತ್ತಿದೆ. ಜಿಲ್ಲೆಯ ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ ಡೊನೇಷನ್ ಹಾವಳಿ ಹೆಚ್ಚಾಗುತ್ತಿದೆ ಹಾಗೂ ಆರ್‌ಟಿಐ ನಿಯಮ ಪಾಲಿಸುವಂತೆ ಸೂಕ್ತ ಕ್ರಮ ವಹಿಸಬೇಕು” ಎಂದು ಆಗ್ರಹಿಸಿದರು.
ಎಸ್‌ಎಫ್ಐನ ತಾಲೂಕು ಅಧ್ಯಕ್ಷೆ ಲಕ್ಷ್ಮಿ ಮಾತನಾಡಿ, “ಬಹುತೇಕ ಖಾಸಗಿ ಶಾಲೆಗಳಲ್ಲಿ ಡೊನೇಷನ್ ಹಾವಳಿ ಹೆಚ್ಚಾಗಿದೆ. ಮನಬಂದಂತೆ ವಸೂಲಿ ಮಾಡಲು ಖಾಸಗಿ ಶಾಲೆಗಳು ಮುಂದಾಗಿವೆ. ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಸರ್ಕಾರದ ನಿಯಮ ಮೀರಿ ಡೊನೇಷನ್ ವಸೂಲಿಗೆ ಮುಂದಾದರೂ ಜಿಲ್ಲೆ ಮತ್ತು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮಗೆ ಯಾವುದೇ ಸಂಬಂಧವಿಲ್ಲದಂತೆ ಕಣ್ಣುಮುಚ್ಚಿ ಕುಳಿತಿದ್ದಾರೆ” ಎಂದು ಆರೋಪಿಸಿದರು.
ಎಸ್‌ಎಫ್‌ಐ ಜಿಲ್ಲಾ ಕಾರ್ಯದರ್ಶಿ ಶಿವಾರೆಡ್ಡಿ ಮಾತನಾಡಿ, “2025-26ನೇ ಸಾಲಿನಲ್ಲಿ ಪ್ರವೇಶ ಶುಲ್ಕ, ಸಮವಸ್ತ್ರ ಶೂ-ಸಾಕ್ಸ್, ಟೈ, ಬೆಲ್ಟ್, ಸ್ಮಾರ್ಟ್ ಕ್ಲಾಸ್, ಭೋದನಾ ಶುಲ್ಕ, ಬುಕ್, ನೋಟ್ಸ್ ಸೇರಿದಂತೆ ವಿವಿಧ ಶುಲ್ಕವನ್ನು ಹೆಚ್ಚಳ ಮಾಡಿ ಡೊನೇಷನ್ ಸಹಿತ ಹಣ ವಸೂಲಿ ಮಾಡಲು ಖಾಸಗಿ ಶಾಲೆಗಳು ಮುಂದಾಗಿವೆ. ಸರ್ಕಾರದ 1983 ಶಿಕ್ಷಣ ಕಾಯ್ದೆಯನ್ನು ಉಲ್ಲಂಘನೆ ಮಾಡಿ ತಾಲೂಕಿನ ಬಹುತೇಕ ಶಾಲೆಗಳಲ್ಲಿ ಸಮವಸ್ತ್ರ ಹಾಗೂ ವಿವಿಧ ಪರಿಕರಗಳನ್ನು ಮಾರಾಟ ಮಾಡುತ್ತಿರುವುದು ಕಾನೂನು ಬಾಹಿರ. ಶಿಕ್ಷಣ ಇಲಾಖೆಯ ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡುತ್ತಿರುವ ಶಾಲೆಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
ಎಸ್‌ಎಫ್ಐ ಜಿಲ್ಲಾಜಂಟಿ ಕಾರ್ಯದರ್ಶಿ ಕೆ ಎ ಪವನ ಕುಮಾರ್ ಮಾತನಾಡಿ, “ಶಿಕ್ಷಣ ಕಾಯಿದೆ ಪ್ರಕಾರ ಎಲ್ಲ ಖಾಸಗಿ ಶಾಲೆಗಳು ಪ್ರವೇಶಾತಿಗೆ ಖಾಲಿ ಇರುವ ಸೀಟುಗಳನ್ನು ತಮ್ಮ ಶಾಲೆಯ ಸೂಚನಾ ಫಲಕದಲ್ಲಿ ಹಾಕಬೇಕು. ರೋಸ್ಟರ್ ನಿಯಮ ಜಾರಿ ಮಾಡಿ, ಶುಲ್ಕವನ್ನು ನಿಗದಿಗೊಳಿಸಿ ಶಾಲೆಯ ಸೂಚನಾ ಫಲಕದಲ್ಲಿ ಹಾಕಬೇಕೆಂದು ನಿಯಮವಿದ್ದರೂ ಜಿಲ್ಲೆಯ ಯಾವ ಶಾಲೆಗಳೂ ಕೂಡ ಈ ನಿಯಮವನ್ನು ಅನುಸರಿಸುತ್ತಿಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
“ಶಿಕ್ಷಣ ಇಲಾಖೆಯ ಅಧಿಕಾರಿಗಳು ಖಾಸಗಿ ಶಾಲೆಯ ಆಡಳಿತ ಮಂಡಳಿಯ ಜತೆಗೆ ಹೊಂದಾಣಿ ಮಾಡಿಕೊಂಡಿರುವ ಬಗ್ಗೆ ಗುಮಾನಿ ಇದೆ. ಆರ್‌ಟಿಇ ಅಡಿಯಲ್ಲಿ ಹಿಂದುಳಿದ ಮತ್ತು ದುರ್ಬಲ ಮಕ್ಕಳಿಗೆ ಶೇ.25ರಷ್ಟು ನಿಗದಿ ಮಾಡಿದ್ದರೂ ಖಾಸಗಿ ಶಾಲೆಗಳು ಸರಿಯಾಗಿ ಅನುಸರಿಸುತಿಲ್ಲ. ಇತ್ತೀಚಿನ ದಿನಗಳಲ್ಲಿ ಶಾಲೆಗಳಲ್ಲಿಯೇ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಶಾಲೆಗಳಲ್ಲಿ ಲೈಂಗಿಕ ದೌರ್ಜನ್ಯ ವಿರೋಧಿ ಸಮಿತಿ ರಚಿಸಿ ಸೂಚನಾ ಫಲಕದಲ್ಲಿ ಅಳವಡಿಸಬೇಕು” ಎಂದು ಆಗ್ರಹಿಸಿದರು.
ಲಕ್ಷ್ಮಿ, ಶಿವರೆಡ್ಡಿ, ಪವನ್ ಕುಮಾರ್, ರಾಜೀವ್ ಸೇರಿದಂತೆ ಇತರರು ಇದ್ದರು.