ವಿದ್ಯಾರ್ಥಿಗಳಿಗೆ ನಾವೆಲ್ಲ ಒಂದೇಯೆಂಬ ಭಾವನೆಯಿರಬೇಕು. ಯಾವುದೇ ಪ್ರತ್ಯೇಕತೆಯ ಭಾವ ನಿಮ್ಮಲ್ಲಿರಬಾರದು ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ ವಿ ಪರಮಶಿವಮೂರ್ತಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯವನ್ನು ಉದ್ಘಾಟಿಸಿ ಮಾತನಾಡಿದರು.
“ವಿದ್ಯಾ ಸಂಸ್ಥೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳೆಲ್ಲ ಒಂದೇ. ಆದರೆ ದೇಶದಲ್ಲಿ ಅಲ್ಪಸಂಖ್ಯಾತರಿಗೆ ಗಾಬರಿ, ಬೆದರಿಕೆಯ ವಿಷಮ ಪರಿಸ್ಥಿತಿಗಳು ಸೃಷ್ಟಿಯಾಗುತ್ತಿವೆ. ಇದಕ್ಕೆ ಹಲವು ಕಾರಣಗಳಿವೆ. ಇದರಲ್ಲಿ, ನಿಜ ಎಷ್ಟೋ, ಸುಳ್ಳು ಎಷ್ಟೋ, ಗೊಂದಲವೆಷ್ಟೋ ಗೊತ್ತಿಲ್ಲ. ಇವುಗಳಿಗೆ ಕನ್ನಡ ವಿಶ್ವವಿದ್ಯಾಲಯದ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಗಮನ ಕೊಡದೆ, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸರ್ಕಾರ ಸಂವಿಧಾನದ ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ತತ್ವದ ಅಡಿಯಲ್ಲಿ ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಅನುದಾನದ ಅಡಿಯಲ್ಲಿ ಹಾಸ್ಟೆಲ್ ವ್ಯವಸ್ಥೆ ಮಾಡುತ್ತದೆ” ಎಂದು ಹೇಳಿದರು.

“ಅಲ್ಪಸಂಖ್ಯಾತ ಮೆಟ್ರಿಕ್ ನಂತರದ ಬಾಲಕರ ಹಾಸ್ಟೆಲ್‌ಗೆ ಬೇಕಾದ ಮೂಲ ಸೌಕರ್ಯಗಳನ್ನು ಈಗಾಗಲೇ ವಿಶ್ವವಿದ್ಯಾಲಯವು ತನ್ನ ಆರ್ಥಿಕ ಇತಿಮಿತಿಯಲ್ಲಿ ಕಲ್ಪಿಸಿದೆ. ಕಾಲಕಾಲಕ್ಕೆ ಸರ್ಕಾರದಿಂದ ಇನ್ನೂ ಬೇಕಾದ ಸೌಲಭ್ಯಗಳನ್ನು ಹಾಸ್ಟೆಲ್‌ಗೆ ಒದಗಿಸಲು ವಿಶ್ವವಿದ್ಯಾಲಯವು ಕೆಲಸ ಮಾಡಲು ಬದ್ಧವಾಗಿದೆ. ಇದಕ್ಕೆಲ್ಲ ಸರ್ಕಾರದ ಎಲ್ಲ ಅಧಿಕಾರಿಗಳು, ವಿಶ್ವವಿದ್ಯಾಲಯದ ಸಿಬ್ಬಂದಿಗಳು ಹಾಗೂ ಹಾಸ್ಟೆಲಿನ ವಿದ್ಯಾರ್ಥಿಗಳು ಕಾರಣ” ಎಂದು ನುಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಶಾಲೆಗೆ ವಿದ್ಯುತ್ ಸಂಪರ್ಕವಿಲ್ಲ; ವಿದ್ಯಾರ್ಥಿಗಳು ಡಿಜಿಟಲ್ ತರಗತಿಗಳಿಂದ ವಂಚಿತ
ಕನ್ನಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಕ್ಷೇಮಪಾಲನಾಧಿಕಾರಿ ಡಾ. ವೆಂಕಟಗಿರಿ ದಳವಾಯಿ ಮಾತನಾಡಿ, “ಅಲ್ಪಸಂಖ್ಯಾತ ಸಮುದಾಯಗಳು ಉನ್ನತ ಶಿಕ್ಷಣದಲ್ಲಿ ಬಹಳ ಹಿಂದೆ ಉಳಿದಿವೆ. ಒಬ್ಬ ಅಲ್ಪಸಂಖ್ಯಾತ ವಿದ್ಯಾರ್ಥಿ ಪರಿಶ್ರಮ ನಿಷ್ಠೆಯಿಂದ ಶಿಕ್ಷಣ ಪಡೆದು ಯಶಸ್ವಿಯಾದರೇ ಅವನಿಂದ ಇಡೀ ಅವನ ಮನೆತನ ಅಲ್ಲದೆ ಅವನ ಮುಂದಿನ ಪೀಳಿಗೆಯೂ ಉನ್ನತವಾದ ಬದುಕು ಪಡೆಯುತ್ತದೆ. ಈ ಕುರಿತು ವಿದ್ಯಾರ್ಥಿಗಳಿಗೆ ಸದಾ ಎಚ್ಚರಿಕೆ ಇರಬೇಕು” ಎಂದು ತಿಳಿಸಿದರು.