ಕೃಷಿ ಇಲಾಖೆಯಲ್ಲಿ ನೀಡಲಾಗುತ್ತಿರುವ ಸಹಾಯಧನದ ತಾಡಪಲ್ ದರವನ್ನು ಸರಕಾರ ದುಪ್ಪಟ್ಟುಗೊಳಿಸಿದೆ. ಅದನ್ನು ಕಡಿತಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘಟನೆಯ ಹೂವಿನ ಹಡಗಲಿ ತಾಲೂಕು ಘಟಕದ ಮುಖಂಡರು ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಕಳೆದ ವರ್ಷ ಸಾಮಾನ್ಯ ರೈತರಿಗೆ ನೀಡಲಾಗುತ್ತಿದ್ದ ತಾಡಪಲ್ ದರವು ₹950 ಇತ್ತು. ಈ ವರ್ಷ ₹1670 ಆಗಿದೆ. ಎಸ್‌ಸಿ-ಎಸ್‌ಟಿ ಸಮುದಾಯದ ರೈತರಿಗೆ ₹250 ಇದ್ದ ತಾಡಪಲ್ ದರವು, ಈ ವರ್ಷ ₹570 ರೂಪಾಯಿಗೆ ಹೆಚ್ಚಿಸಿದ್ದಾರೆ. ರೈತರ ಗಾಯದ ಮೇಲೆ ಸರಕಾರ ಬರೆ ಎಳೆದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೂವಿನ ಹಡಗಲಿ ತಾಲೂಕು ಬರಪೀಡಿತಗೊಂಡಿದ್ದು, ರೈತರು ಕಷ್ಟ ಅನುಭವಿಸತ್ತಿದ್ದಾರೆ. ಸರಕಾರವೇ ಬರಪೀಡಿತ ತಾಲೂಕು ಎಂದು ಸರಕಾರ ಘೋಷಣೆ ಮಾಡಿದೆ. ಆದರೂ ಇಂತಹ ನಿರ್ಧಾರಕ್ಕೆ ಮುಂದಾಗಿರುವುದು ಅಕ್ಷಮ್ಯ. ರೈತರು ಸಮಸ್ಯೆ ಎದುರಿಸುತ್ತಿರುವಾಗ ಸರಕಾರ ಏಕಾಏಕಿ ದರ ಹೆಚ್ಚಿಸಿ ಮಣ್ಣು ಮುಕ್ಕಿಸುವ ಕೆಲಸ ಮಾಡಿದೆ ಎಂದು ರೈತರು ಪ್ರತಿಭಟಿಸಿದರು.
ಇದನ್ನು ಓದಿದ್ದೀರಾ? ಎತ್ತಿನಹೊಳೆ | ಮುಖ್ಯಮಂತ್ರಿ ಅವರಿಂದ ಬಾಗಿನ ಅರ್ಪಿಸಲು ನಿರ್ಮಿಸಲಾಗಿದ್ದ ಮಂಟಪ ದಿಢೀರ್ ಕುಸಿತ
ಹಿಂದೆ ಇದ್ದ ಬೆಲೆಗೆ ಮತ್ತು ಗುಣಮಟ್ಟದ ತಾಡಪಲ್ ವಿತರಿಸಬೇಕು ಎಂದು ರೈತರು ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು. ಈ ವೇಳೆ ತಾಲೂಕು ಅಧ್ಯಕ್ಷ ಸಿದ್ದಪ್ಪ ಹೊಸಮನಿ, ಪ್ರಧಾನ ಕಾರ್ಯದರ್ಶಿ ಶಿವರಾಜ್ ಹೊಳಗುಂದಿ, ಜಿಲ್ಲಾಧ್ಯಕ್ಷರು ಸೋಮಶೇಖರಪ್ಪ , ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಚನ್ನವೀರಮ್ಮ, ದುರ್ಗಪ್ಪ, ಶಿವನಾಗಪ್ಪ, ಗಿರೀಶ್, ಮಂಜುನಾಥ್,ಮೈಲಾರ, ಶರಣಪ್ಪ, ಶಂಕರಗೌಡ ಇನ್ನಿತರರು ಹಾಜರಿದ್ದರು.
