ದಾರಾವಾಹಿ, ಸಿನಿಮಾ ಹಾಗೂ ಟಿವಿ ಮನರಂಜನೆಯ ಹಾವಳಿಯಲ್ಲಿ ಈ ಮಣ್ಣಿನ ಮೂಲ ಸಾಂಸ್ಕೃತಿಕ ಮನರಂಜನೆಗಳೆಲ್ಲ ಮಾಯವಾಗುತ್ತಿರುವ ಈ ಕಾಲಘಟ್ಟದಲ್ಲಿ ನಿರ್ದಿಗಂತ ಕಲಾತಂಡ ಮಹತ್ತರ ಹೆಜ್ಜೆಯನ್ನಿಡುತ್ತಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಶ್ರೀರಂಗ ದತ್ತಿನಿಧಿ ಮತ್ತು ನಾಟಕ ವಿಭಾಗದ ಸಹಯೋಗದಲ್ಲಿ ಪ್ರಕಾಶರಾಜ್ ಸಾರಥ್ಯದ ನಿರ್ದಿಗಂತ ಕಲಾ ತಂಡದವರಿಂದ “ತಿಂಡಿಗೆ ಬಂದ ತುಂಡೇರಾಯ” ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು.
ನಾಟಕ, ರಂಗ ವೇದಿಕೆಗಳು ಮನರಂಜಿಸುವ ಕಲಾವಿದರನ್ನು ಹುಟ್ಟು ಹಾಕುವುದಲ್ಲ. ಬದಲಾಗಿ ಸಮಾಜದ ಅಂಕುಡೊಂಕುಗಳನ್ನು ತಿದ್ದುವುದು, ಆಳುವವರ ದುರಾಡಳಿತದ ಬಗ್ಗೆ ಪ್ರಜೆಗಳಿಗೆ ತಿಳಿಸಿ ಅರಿವು ಮೂಡಿಸುವುದು ಜತೆ ಜತೆಗೆ ಜಾಗೃತಗೊಳಿಸಬೇಕು. ಭ್ರಷ್ಟಾಚಾರ, ಭ್ರಷ್ಟಾಚಾರಿಗಳ ಬಗ್ಗೆ ಎಚರಿಕೆ ನೀಡುತ್ತ ಈ ಧಾರ್ಮಿಕ ಹಿನ್ನೆಲೆಯಲ್ಲಿ ದೇಶವನ್ನು ಒಡೆದು ಆಳುತ್ತಿರುವ ಕೋಮು ಮುಖಂಡರನ್ನು ಖಂಡತುಂಡವಾಗಿ ವಿರೋಧಿಸಬೇಕಾಗಿದೆ. ಜನರಲ್ಲಿ ಸಾಮರಸ್ಯ, ಸೌಹಾರ್ದತೆ ಕುರಿತು ತಿಳಿಹೇಳುವ ರಂಗಕಲಾವಿದರು ಮನರಂಜನೆಯ ಮುಖಾಂತರ ಮನವರಿಕೆ ಮಾಡಬೇಕಾಗಿದೆ.
ಈ ಸುದ್ದಿ ಓದಿದ್ದೀರಾ? ಹಾಸನ | ಫೆಬ್ರವರಿಯೊಳಗೆ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ನೀಡದಿದ್ದರೆ ಮತ್ತೆ ಹೋರಾಟ; ಜಯಕರ್ನಾಟಕ ಎಚ್ಚರಿಕೆ
ನೊಂದವರ ಧ್ವನಿಯಾಗಿ, ಶೋಷಿತ ಸಮುದಾಗಳ ಬೆಳಕಾಗಿ ನಾಟಕಗಳು ರಚನೆಯಾಗಿ ಕಲಾವಿದರ ಪ್ರದರ್ಶನವಾಗುತ್ತವೆ. ಆ ನಿಟ್ಟಿನಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಇವತ್ತಿನ ಬಂಡವಾಳಶಾಹಿ, ಬಂಡವಾಳಶಾಹಿಗಳ ಪರವಾಗಿ ಸರ್ಕಾರದ ನಡೆಯನ್ನು, ಬೆಲೆ ಏರಿಕೆ, ಆಡಳಿತಗಾರರ ಸರ್ವಾಧಿಕಾರ, ದಬ್ಬಾಳಿಕೆ, ಶೋಷಣೆಗಳು, ನ್ಯಾಯಾಲಯಗಳ ದುರುಪಯೋಗ ಒಟ್ಟಾರೆ ನೀಚ ಮತ್ತು ಕೆಟ್ಟ ವ್ಯವಸ್ಥೆಯನ್ನು ಗುರಿಯಾಗಿಟ್ಟುಕೊಂಡು “ತಿಂಡಿಗೆ ಬಂದ ತುಂಡೇರಾಯ” ಹಾಸ್ಯದ ಮೂಲಕ ವಿಶಿಷ್ಟ, ವಿಶೇಷವಾದ ನಾಟಕ ಪ್ರದರ್ಶನಗೊಂಡಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.