ಸಮಾಜದಲ್ಲಿ ಆರ್ಥಿಕ ಸಮಾನತೆ ಹಾಗೂ ಮಹಿಳಾ ಸಶಕ್ತೀಕರಣ ಇದ್ದಲ್ಲಿ ಅಭಿವೃದ್ಧಿ ಸಾಧ್ಯವಾಗುತ್ತದೆ. ಸಮಾನತೆ ಜತೆಗೆ ಯುವ ಸಬಲೀಕರಣಗಳೇ ಗ್ಯಾರಂಟಿ ಯೋಜನೆಗಳ ಮುಖ್ಯ ಉದ್ದೇಶವಾಗಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್ ಆರ್ ಮೆಹರೋಜ್ ಖಾನ್ ತಿಳಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗ ಆಯೋಜಿಸಿದ್ದ ʼಗ್ಯಾರಂಟಿ ಯೋಜನೆಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದʼ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಸರ್ಕಾರವು ದಕ್ಷತೆಯಿಂದ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಶ್ರಮಿಸುತ್ತಿದೆ. ಯುವಕರು ಉದ್ಯೋಗಸ್ಥರಾಗುವವರೆಗೆ ಆರ್ಥಿಕವಾಗಿ ನೆರವಾಗಲು ಹಾಗೂ ಮಹಿಳೆಯರು ಸಬಲರಾಗಲು ಅನುಷ್ಟಾನಗೊಳಿಸಿರುವ ಗ್ಯಾರಂಟಿಗಳು ಸಮಾಜದ ಅರ್ಹ ಫಲಾನುಭವಿಗಳನ್ನು ತಲುಪುತ್ತಿವೆ. ಗ್ಯಾರಂಟಿಗಳ ಬಡ ಹಾಗೂ ಕೆಳ ಮಧ್ಯಮವರ್ಗಕ್ಕೆ ಆರ್ಥಿಕ ಬಲ ನೀಡುವಲ್ಲಿ ಯಶಶ್ವಿಯಾಗಿವೆ” ಎಂದರು.
ರಾಜ್ಯದ ಅಭಿವೃದ್ಧಿಗಾಗಿ ಶುಲ್ಕ, ತೆರಿಗೆ ಹೆಚ್ಚಾಗುತ್ತಿದೆ. ಶೇ. 4. 1/2 ಇದ್ದ ನಿರುದ್ಯೋಗ ಪ್ರಮಾಣವು ಗ್ಯಾರಂಟಿ ಯೋಜನೆಯ ಅನುಷ್ಟಾನದ ನಂತರ ಶೇ. 2.20ಕ್ಕೆ ಇಳಿದಿದೆ. ಅನೇಕ ಮಹಿಳೆಯರು ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಗ್ರಾಮಾಂತರ ಮಹಿಳೆಯರು, ಯುವಕರು ಮತ್ತು ನಾಗರೀಕರೊಂದಿಗೆ ಸಂವಾದಿಸಿ ನೈಜತೆಯನ್ನು ತಿಳಿದು ಸಲಹೆಗಳನ್ನು ಪಡೆದಿದ್ದೇನೆ. ನಿಮ್ಮ ಸಂವಾದದಲ್ಲಿ ನನ್ನ ವ್ಯಾಪ್ತಿಗೆ ಬರದ ಸಮಸ್ಯೆಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆದು ಗಮನಕ್ಕೆ ತರುತ್ತೇನೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಹೋಗುವ ಅಭ್ಯರ್ಥಿಗಳಿಗೆ ಉಚಿತ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿಸಲು ಪ್ರಯತ್ನಿಸುತ್ತೇನೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸಂವಾದದಲ್ಲಿ ತೊಡಗಿಕೊಂಡ ವಿವಿಯ ಹಲವು ಸಂಶೋಧನಾ ವಿದ್ಯಾರ್ಥಿಗಳು, ಯುವನಿಧಿಯ ಹಣ ಪಡೆಯಲು ಅನೇಕ ತಾಂತ್ರಿಕ ತೊಂದರೆಗಳು ಇವೆ. ಯೋಜನೆಯ ಸಂಪೂರ್ಣ ಪ್ರಯೋಜನ ಪಡೆಯಲು ಆಗುತ್ತಿಲ್ಲ. ಶಕ್ತಿಯೋಜನೆ ಮಹಿಳೆಯರಿಗೆ ಸೀಮಿತವಾಗಿವೆ. ಪುರುಷರಿಗೆ ಯಾವುದೇ ಪ್ರಯೋಜನಗಳಿಲ್ಲ. ಬಸ್‌ಗಳಲ್ಲಿ ಟಿಕೆಟ್ ಇಲ್ಲದೇ ಹೋಗುವಾಗ ಅವಮಾನಕರವಾಗಿ ಮಾತನಾಡುತ್ತಾರೆ. ಬಸ್‌ಗಳ ಕೊರತೆ ಇದೆ. ಸಮಯಕ್ಕೆ ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸರ್ಕಾರ ಗಮನಹರಿಸಿ ಯೋಜನೆಗಳನ್ನು ಅರ್ಹ ಫಲಾನುಭವಿಗಳು ಪಡೆಯಲು ಕ್ರಮವಹಿಸಬೇಕು ಎಂದು ಅವಲತ್ತುಕೊಂಡರು.
ಎಸ್‌ಇಪಿ, ಟಿಎಸ್‌ಪಿ ಹಣವನ್ನು ಗ್ಯಾರಂಟಿ ಯೋಜನೆಗೆ ಬಳಸಲಾಗುತ್ತಿದೆಯೇ? ಗ್ಯಾರಂಟಿ ಯೋಜನೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರವನ್ನು ಯಾಕೆ ಪರಿಗಣಿಸಿಲ್ಲ. ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ತಿಂಗಳಿಗೆ ರೂ.30,000/- ಸ್ಟೈಪೆಂಡ್ ನೀಡುತ್ತಿದ್ದು, ಕನ್ನಡ ವಿವಿ ಸೇರಿ ಕೆಲವು ವಿಶ್ವವಿದ್ಯಾಲಯಗಳಲ್ಲಿ ರೂ.
10,000/- ನೀಡಲಾಗುತ್ತಿದೆ. ಸರ್ಕಾರವು ಇದಕ್ಕೆ ಏಕರೂಪ ನೀತಿಯನ್ನು ಜಾರಿಗೊಳಿಸಬೇಕು ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು.
ಮಂಜುನಾಥ ಮತ್ತು ಮಣಿಕಂಠ ಮಾತನಾಡಿ, “ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆದು ಅದರ ವಿರುದ್ಧವೇ ಮಾತನಾಡುವವರು ಇದ್ದಾರೆ. ಆದ್ದರಿಂದ ಗ್ಯಾರಂಟಿ ಯೋಜನೆಗಳ ಕುರಿತು ಸರ್ಕಾರ ಮತ್ತು ಅಧಿಕಾರಿಗಳು ರಾಜ್ಯಾದ್ಯಂತ ಜಾಗೃತಗೊಳಿಸುವ ಕಾರ್ಯಕ್ರಮಗಳನ್ನು ಮಾಡುವ ಅಗತ್ಯವಿದೆ” ಎಂದು ಉಪಾಧ್ಯಕ್ಷರಿಗೆ ಬೇಡಿಕೆಯಿಟ್ಟರು.
ಪ್ರಾಧ್ಯಾಪಕರಾದ ಡಾ.ಎಚ್ ಡಿ ಪ್ರಶಾಂತ್ ಮಾತನಾಡಿ, ಯುನಿವರ್ಸಲ್ ಬೇಸಿಕ್ ಇನ್‌ಕಮ್ ಭಾಗವಾಗಿ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ತಂದಿದೆ. ಗ್ಯಾರಂಟಿ ಯೋಜನೆಯು ನಾಗರಿಕರು ಘನತೆಯ ಬದುಕನ್ನು ಕಟ್ಟಿಕೊಳ್ಳಲು ನೆರವಾಗುತ್ತದೆ ಎಂದರು.
ಈ ಸುದ್ದಿ ಓದಿದ್ದೀರಾ?: ವಿಜಯನಗರ | ಶರಣ ತತ್ವ, ವೈಚಾರಿಕ ಪರಂಪರೆಯ ರೂವಾರಿ ಶಾಂತರಸರು; ರಹಮತ್ ತರೀಕೆರೆ
ಕಾರ್ಯಕ್ರಮದಲ್ಲಿ ವಿಭಾಗದ ಮುಖ್ಯಸ್ಥೆ ಡಾ. ಗೀತಮ್ಮ, ಪ್ರಾಧ್ಯಾಪಕ ಡಾ. ಜನಾರ್ದನ, ಕುಲಸಚಿವ ಡಾ. ವಿಜಯ್ ಪೂಣಚ್ಚ, ಅಧ್ಯಾಪಕ ಗೋವರ್ಧನ, ಉಪನಿರ್ದೇಶಕಿ ಡಾ. ಡಿ ಮೀನಾಕ್ಷಿ ಉಪಸ್ಥಿತರಿದ್ದರು.
