ನೀಟ್ ಪ್ರಶ್ನೆಪತ್ರಿಕೆ ಲೀಕ್ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಡಿಎಸ್ಎಸ್ ಕಾರ್ಯಕರ್ತರು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಪ್ರತಿಭಟನೆ ನಡೆಸಿದರು. ನೀಟ್ ಅವ್ಯವಸ್ಥೆಯಿಂದ ಜೀವ ಕಳೆದುಕೊಂಡ 22 ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ ರೂ. 1 ಕೋಟಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಡಿಎಸ್ಎಸ್ ಮುಖಂಡರೊಬ್ಬರು ಮಾತನಾಡಿ, “ನೀಟ್ ಹಗರಣದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ 22 ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ ನೀಡಬೇಕು. ಜಂತರ್ ಮಂತರ್ನಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರನ್ನು ತಡೆದು ಹಲ್ಲೆ ಮಾಡಿರುವವರ ಮೇಲೆ ಪ್ರಕರಣ ದಾಖಲಿಸಬೇಕು” ಎಂದು ಆಗ್ರಹಿಸಿದರು.
ಮತ್ತೊಬ್ಬ ಡಿಎಸ್ಎಸ್ ಮುಖಂಡರು ಮಾತನಾಡಿ, “ನೀಟ್ ಪರೀಕ್ಷಾ ವ್ಯವಸ್ಥೆಯನ್ನು ರದ್ದು ಮಾಡಬೇಕು. ರಾಜ್ಯ ಸರ್ಕಾರಗಳ ವ್ಯಾಪ್ತಿಯ ಸಿಇಟಿಯನ್ನೇ ಮುಂದುವರಿಸಬೇಕು” ಎಂದು ಒತ್ತಾಯಿಸಿದರು. ಅಲ್ಲದೇ, ದೆಹಲಿಯಲ್ಲಿ ನಡೆದ ಸಿಜೆಪಿ ಹೋರಾಟದಲ್ಲಿ ಧರಣಿ ನಿರತರ ವಿರುದ್ಧ ದಾಖಲಾದ ಕೇಸುಗಳನ್ನು ರದ್ದು ಮಾಡಲಿ ಎಂದು ಹೇಳಿದರು.





