ಸೌಜನ್ಯ ಪ್ರಕರಣದ ಸಿಬಿಐ ತೀರ್ಪು ಬಂದು ಸರಿಯಾಗಿ ಮೂರು ವರ್ಷವಾಯ್ತು. ಈ ಮಧ್ಯೆ ಸಂತೋಷ್ ತಂದೆ ಸುಧಾಕರ ರಾವ್ ಮತ್ತು ಸೌಜನ್ಯಳ ತಂದೆ ಚಂದಪ್ಪ ಗೌಡ ಮೃತಪಟ್ಟಿದ್ದಾರೆ. ಸಂತೋಷ್ ತಂದೆಗೆ ಮಗ ದೋಷಮುಕ್ತನಾದ ಎಂಬ ನಿರಾಳತೆ ಇತ್ತು. ಆದರೆ, ಸೌಜನ್ಯ ತಂದೆಗೆ ಮಗಳ ಕೊಲೆಗಾರ ಇನ್ನೂ ಪತ್ತೆಯಾಗಿಲ್ಲವಲ್ಲಾ ಎಂಬ ಕೊರಗಿತ್ತು. ಆ ಕೊರಗಿನಲ್ಲೇ ಕೊನೆಯುಸಿರೆಳೆದಿದ್ದಾರೆ. ತಾಯಿ ಕುಸುಮಾವತಿ ಅವರದ್ದು ಮಾತ್ರ ಬತ್ತದ ಹೋರಾಟ.
ಹಾಗಾದರೆ ಸೌಜನ್ಯಳನ್ನು ಕೊಂದವರು ಯಾರು? ಈ ಪ್ರಶ್ನೆಗೆ ಉತ್ತರ ಹುಡುಕುವ ಸಮಯ ಮತ್ತೆ ಬಂದಿದೆಯೇ? ಹೌದು, ಸೌಜನ್ಯ ಪ್ರಕರಣದ ಮರು ತನಿಖೆ ಕೋರಿ ಸೌಜನ್ಯಳ ತಾಯಿ ಕುಸುಮಾವತಿ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಪೀಠ ನೀಡಿದ ಹೇಳಿಕೆ ಆ ಭರವಸೆ ಮೂಡಿಸಿದೆ. “ಈ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿ ಮೂಲಕ ತನಿಖೆ ನಡೆಸುವುದು ಸೂಕ್ತ. ಸಿಬಿಐ, ತಾನು ತನಿಖಾ ಸಂಸ್ಥೆ ಎಂಬುದನ್ನು ಮರೆತು ನ್ಯಾಯಾಧೀಶರಂತೆ ವರ್ತಿಸಿದೆ. ಸಿಐಡಿ ಕಲೆ ಹಾಕಿದ ಸಾಕ್ಷ್ಯಗಳನ್ನು ಇಟ್ಟುಕೊಂಡು ಸಂತೋಷ್ ರಾವ್ ಸುತ್ತಲೇ ತನಿಖೆ ನಡೆಸಿದೆ. ಸ್ಥಳ ಮಹಜರು ನಡೆಸಿಲ್ಲ, ಆಕೆಯ ಕುಟುಂಬದವರ ಹೇಳಿಕೆ ಪಡೆದಿಲ್ಲ, ಸಾಕ್ಷ್ಯ ಸಂಗ್ರಹ ಮಾಡಿಲ್ಲ” ಎಂದು ಸುಪ್ರೀಂ ಕೋರ್ಟ್ ಅಸಮಾಧಾನ ಹೊರಹಾಕಿದೆ.
2012ರಲ್ಲಿ ನಡೆದ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ಕೋರ್ಟ್ 2023ರಲ್ಲಿ ತೀರ್ಪು ನೀಡಿತ್ತು. “ಪ್ರಕರಣದ ಆರೋಪಿ ಸಂತೋಷ್ ರಾವ್ ನಿರಪರಾಧಿ” ಎಂಬುದಷ್ಟೇ ತೀರ್ಪಿನ ಸಾರವಾಗಿತ್ತು. ಹಾಗಿದ್ದರೆ ಕೊಂದವರು ಯಾರು ಎಂಬ ಪ್ರಶ್ನೆ ಹಾಗೆಯೇ ಉಳಿದಿತ್ತು. ಮತ್ತು ಈ ಪ್ರಶ್ನೆ ರಾಜ್ಯದೆಲ್ಲೆಡೆ ಮಾರ್ದನಿಸಿತ್ತು. ನಿರಂತರವಾಗಿ ಒಂದು ವರ್ಷಗಳ ಕಾಲ ರಾಜ್ಯದಾದ್ಯಂತ ಸೌಜನ್ಯ ಪ್ರಕರಣದ ಮರುತನಿಖೆ ನಡೆಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆಗಳು ನಡೆದಿತ್ತು. ಧರ್ಮಸ್ಥಳದ ಹೆಸರು ಕೆಡಿಸಲು ಷಡ್ಯಂತ್ರ ಎಂದು ಆರೋಪಿಸಿದ ಕೆಲವು ಸಂಘಟನೆಗಳು ಸೌಜನ್ಯ ಪರ ಹೋರಾಟವನ್ನು ಧಮನಿಸುವ ಪ್ರಯತ್ನಗಳು ನಡೆಸಿದುವು. ರಾಜ್ಯ ಸರ್ಕಾರಕ್ಕೆ ಮನವಿ ಕೊಟ್ಟರೂ ಮರು ತನಿಖೆಗೆ ಆಸಕ್ತಿ ತೋರಿರಲಿಲ್ಲ. ಸೌಜನ್ಯ ತಾಯಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಲಿಲ್ಲ.

ಆ ನಂತರ ಅಕ್ರಮವಾಗಿ ಶವ ಹೂತು ಹಾಕಿದ ಪ್ರಕರಣದ ಸಾಕ್ಷಿ ಎಂದು ಹೇಳಿಕೊಂಡು ಬಂದ ಚಿನ್ನಯ್ಯ, ಆತನ ದೂರು ಆಧರಿಸಿ ನಡೆದ ಎಸ್‌ಐಟಿ ತನಿಖೆ ಇದೆಲ್ಲ ಎಲ್ಲರಿಗೂ ಗೊತ್ತೇ ಇದೆ. ಈ ಮಧ್ಯೆ ಛಲ ಬಿಡದ ಸೌಜನ್ಯ ತಾಯಿ ಕುಸುಮಾವತಿ ಅವರು ಮರು ತನಿಖೆಗೆ ಆದೇಶಿಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದೆ. ಸೌಜನ್ಯಳ ಅತ್ಯಾಚಾರ ಪ್ರಕರಣದ ಸಿಬಿಐ ತನಿಖೆಯ ಬಗ್ಗೆ ಅಸಮಾಧಾನ ಹೊರ ಹಾಕಿರುವ ನ್ಯಾಯಮೂರ್ತಿಗಳು ಈ ಪ್ರಕರಣ ರಾಜ್ಯ ಸರ್ಕಾರದಿಂದ ಮರು ತನಿಖೆ ನಡೆಸುವುದು ಸೂಕ್ತವಾಗಿದೆ ಎಂದು ಹೇಳಿದ್ದಾರೆ.
ಹನ್ನೊಂದು ವರ್ಷಗಳ ಸುದೀರ್ಘ ಕಾಲ ನಡೆದ ಸಿಬಿಐ ತನಿಖೆಯ ಲೋಪದ ಬಗ್ಗೆ 2023ರಲ್ಲಿ ಸಿಬಿಐ ಕೋರ್ಟ್ ನೀಡಿದ ತೀರ್ಪಿನಲ್ಲಿಯೇ ಉಲ್ಲೇಖಿಸಲಾಗಿತ್ತು. ಪ್ರಕರಣದ ತನಿಖೆಯ ಆರಂಭದಿಂದಲೂ ಲೋಪ ಎಸಗಲಾಗಿದೆ. ಶವ ಸಿಕ್ಕ ಸ್ಥಳ ಮಹಜರು, ಪೂರಕ ಸಾಕ್ಷ್ಯ ಸಂಗ್ರಹ ಮಾಡಿಲ್ಲ. ಪೋಸ್ಟ್ ಮಾರ್ಟಂ ಮಾಡಿದ ನಂತರ ದೇಹದ ಸ್ಯಾಂಪಲ್ ಅನ್ನು ಹೈದರಾಬಾದ್ ಲ್ಯಾಬ್‌ಗೆ ಕಳಿಸುವಾಗ ವಿಳಂಬ ಮಾಡಿದ ಕಾರಣ ಫಂಗಸ್ ಬಂದಿತ್ತು. ಈ ಕಾರಣದಿಂದ ಎಫ್‌ಎಸ್‌ಎಲ್ ಪರೀಕ್ಷೆಯಲ್ಲಿ ಯಾವುದೇ ಸಾಕ್ಷ್ಯ ಉಳಿದಿರಲಿಲ್ಲ. ಅಷ್ಟೇ ಅಲ್ಲ ಕಾಣೆಯಾದ ಸೌಜನ್ಯಳ ಒಳ ಉಡುಪು, ಚಪ್ಪಲಿ ಕೂಡ ಸಂಗ್ರಹಿಸಿರಲಿಲ್ಲ.
ಆರಂಭದಲ್ಲಿ ಸಿಒಡಿ ತನಿಖೆ ಶುರು ಮಾಡಿತ್ತು. ನಂತರ ಸಿಐಡಿ ಸಂಗ್ರಹಿಸಿದ ಸಾಕ್ಷ್ಯಗಳ ಆಧರಿಸಿ ಆರೋಪಿ ಸಂತೋಷ್ ರಾವ್ ಅಪರಾಧಿ ಹೌದೋ ಅಲ್ವೋ ಎಂಬ ಒಂದು ಎಳೆಯ ತನಿಖೆಯನ್ನು ಸಿಬಿಐ ಹನ್ನೊಂದು ವರ್ಷಗಳ ಕಾಲ ನಡೆಸಿತ್ತು. ಸಿಬಿಐ ಹೊಸದಾಗಿ ಯಾವುದೇ ಸಾಕ್ಷ್ಯ ಸಂಗ್ರಹಿಸುವ ಕೆಲಸ ಮಾಡಿರಲಿಲ್ಲ. ಇದನ್ನು ಕೋರ್ಟ್ ಕೂಡ ಗಮನಿಸಿತ್ತು. ಸಿಬಿಐ ಅಂತಿಮ ತೀರ್ಪಿನಲ್ಲಿ “ಗೋಲ್ಡನ್ ಅವರ್ ನಲ್ಲಿ ಸಂಪೂರ್ಣ ಸಾಕ್ಷ್ಯ ನಾಶ ಮಾಡಲಾಗಿದೆ” ಎಂಬ ಗಂಭೀರ ಆರೋಪ ಮಾಡಲಾಗಿತ್ತು. ಆ ನಂತರ ಹೈಕೋರ್ಟ್‌ಗೆ ಮರು ತನಿಖೆ ಕೋರಿ ಸೌಜನ್ಯ ಕುಟುಂಬದವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಕೂಡ ಇದು ಸಂಪೂರ್ಣ ನಿರ್ಲಕ್ಷ್ಯದಿಂದ ನಡೆದ ತನಿಖೆ ಎಂದು ಹೇಳಿತ್ತು. ಆದರೆ, ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಲು ಪೂರಕ ಸಾಕ್ಷ್ಯಗಳನ್ನು ಪೊಲೀಸರು ಸಂಗ್ರಹಿಸದೇ ಲೋಪ ಎಸಗಿದ್ದಾರೆ ಎಂದು ವಿಚಾರಣೆಯ ಸಮಯದಲ್ಲಿ ನ್ಯಾಯಾಧೀಶರೇ ಕಳವಳ ವ್ಯಕ್ತಪಡಿಸಿದ್ದರು. ಹೀಗಾಗಿ ಮರು ತನಿಖೆಯಿಂದ ಯಾವುದೇ ಪ್ರಯೋಜನ ಇಲ್ಲ ಎಂಬ ನಿರ್ಧಾರಕ್ಕೆ ಹೈಕೋರ್ಟ್ ಬಂದಿತ್ತು. ಅರ್ಜಿಯನ್ನು ವಜಾ ಮಾಡಿತ್ತು. ಧೃತಿಗೆಡದ ಕುಸುಮಾವತಿ ಅವರು ಕೊನೆಯ ಪ್ರಯತ್ನವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮರು ತನಿಖೆ ಕೋರಿ ಅರ್ಜಿ ಸಲ್ಲಿಸಿದ್ದರು.
2023ರಲ್ಲಿ ಸಿಬಿಐ ತೀರ್ಪು ಬಂದ ನಂತರ ಈ ಪ್ರಕರಣದ ಗ್ರೌಂಡ್ ರಿಪೋರ್ಟ್ ಮಾಡಲು ಸೌಜನ್ಯ ಮನೆಗೆ ಭೇಟಿ ನೀಡಿದ ಮೊದಲ ಕನ್ನಡದ ಮಾಧ್ಯಮ ಈ ದಿನ.ಕಾಮ್. ತೀರ್ಪು ಬಂದ ಒಂದು ವಾರದ ನಂತರ ಸೌಜನ್ಯಳ ಕುಟುಂಬದವರನ್ನು ಭೇಟಿ ಮಾಡಿ, ಆಕೆಯ ಮನೆ, ಮೃತದೇಹ ಸಿಕ್ಕ ಸ್ಥಳ, ಆಕೆ ಬಸ್‌ನಿಂದ ಇಳಿದು ಹೋದ ರಸ್ತೆ, ತುಂಬಿ ಹರಿಯುತ್ತಿದ್ದ ನೇತ್ರಾವತಿ ನದಿಯ ದಡದಲ್ಲೆಲ್ಲ ಓಡಾಡಿ ಆ ಪಾಪದ ಹೆಣ್ಣುಮಗಳು ಭೀಕರವಾಗಿ ಅತ್ಯಾಚಾರಗೊಂಡು ಕೊಲೆಯಾದ ನಂತರ ಆ ಕುಟುಂಬ ಅನುಭವಿಸಿದ ಯಾತನೆ, ಹೋರಾಟ, ಕುಟುಂಬದ ಅಹವಾಲುಗಳೇನಿತ್ತು ಎಂಬುದನ್ನು ಜನರ ಮುಂದಿಟ್ಟಿದ್ದೆವು. ಆಕೆಯ ಅಕ್ಕ, ತಂಗಿ, ಅಜ್ಜ, ಅಜ್ಜಿ, ತಂದೆ , ತಾಯಿ ಎಲ್ಲರಲ್ಲೂ ಸೌಜನ್ಯಳದೇ ನೆನಪು ತುಂಬಿಕೊಂಡಿತ್ತು. ದೇವರ ಫೋಟೋದ ಪಕ್ಕದಲ್ಲಿ ಮಗಳ ಫೋಟೋ ಇಟ್ಟು ದೀಪ ಹಚ್ಚಿ ಕೈ ಮುಗಿಯುತ್ತಿದೆ ಆ ಕುಟುಂಬ. ಸೌಜನ್ಯ ಮೃತಪಟ್ಟ ನಂತರ ನಡೆದ ಆಕೆಯ ತಂಗಿಯ ಮದುವೆಯ ಗ್ರೂಪ್ ಫೋಟೋಗೆ ಸೌಜನ್ಯಳ ಫೋಟೋವನ್ನು ಕೊಲಾಜ್ ಮಾಡಿ ಗೋಡೆಯ ಮೇಲೆ ತೂಗು ಹಾಕಿದ್ದಾರೆ. ಮನೆ ಮಂದಿ ಆಕೆಯ ನೆನಪನ್ನು ತಮ್ಮ ಬದುಕಿನ ಜಂಜಾಟದ ನಡುವೆಯೂ ಜೋಪಾನವಾಗಿ ಕಾಪಿಟ್ಟುಕೊಂಡಿದೆ.

ವರ್ಷಗಳ ಕಾಲ ಹೋರಾಟವನ್ನು ಜೀವಂತವಾಗಿಟ್ಟಿದ್ದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಪ್ರಕರಣದಲ್ಲಿ ಆರೋಪಿ ಎಂಬ ಅವಮಾನದ ಪಟ್ಟ ಹೊತ್ತಿದ್ದ ಸಂತೋಷ್ ರಾವ್ ಅವರ ಮನೆಗೆ ಭೇಟಿ ನೀಡಿ ಸಂತೋಷ್ ತಂದೆ ಸುಧಾಕರ ರಾವ್ ಮತ್ತು ಸಹೋದರ ಸಂಜಯ್ ಅವರ ಇಂಗಲಾರದ ನೋವಿಗೆ ನಾವು ಕಿವಿಯಾಗಿದ್ದೆವು. ಯಾರದ್ದೋ ಷಡ್ಯಂತ್ರಕ್ಕೆ ಆ ಕುಟುಂಬ ಛಿದ್ರವಾಗಿತ್ತು. ಸಂತೋಷ್ ತಾಯಿ ಮಗ ಜೈಲುಪಾಲಾದ ನೋವಿನಲ್ಲೇ ಮೃತರಾಗಿದ್ದರು. ತಂದೆ ನಿವೃತ್ತ ಶಿಕ್ಷಕ ಸುಧಾಕರ್ ರಾವ್ ಅವರದ್ದು ನಿತ್ಯ ನರಕಯಾತನೆಯ ಬದುಕು. ಹನ್ನೆರಡು ವರ್ಷಗಳಲ್ಲಿ ಯಾವ ಮಾಧ್ಯಮಗಳಾಗಲಿ, ಸಂಘ ಸಂಸ್ಥೆಗಳಾಗಲಿ ಆ ಅಮಾಯಕ ಕುಟುಂಬದ ನೋವನ್ನು ಆಲಿಸಿರಲಿಲ್ಲ. ಸಿಬಿಐ ತೀರ್ಪು ಬಂದ ನಂತರ ಮೊದಲ ಬಾರಿಗೆ ಸಂತೋಷ್ ರಾವ್ ಮನೆಯವರನ್ನು ಸಂದರ್ಶಿಸಿದೆವು. ಆತ ನಿರ್ದೋಷಿ ಎಂಬ ತೀರ್ಪು ಬಂದಿದ್ದರೂ ಮಾಧ್ಯಮಗಳು ಆ ಕುಟುಂದ ಕಡೆ ಮುಖ ಮಾಡಿರಲಿಲ್ಲ. ಹನ್ನೊಂದು ವರ್ಷಗಳಾಗಿದ್ದರೂ ಪರಿಸ್ಪರ ಭೇಟಿಯಾಗದ ಕುಟುಂಬಗಳ ಮೊದಲ ಬಾರಿಗೆ ಮುಖಾಮುಖಿಯಾದವು. ಸಂತೋಷ್ ತಂದೆ ಮತ್ತು ಸೌಜನ್ಯ ತಾಯಿಯ ಮೊದಲ ಭೇಟಿಯನ್ನೂ ಮಾಡಿಸಿದ್ದೆವು.

ಇಬ್ಬರೂ ಪರಸ್ಪರ ಸಂತೈಸಿಕೊಂಡ ಆ ಕ್ಷಣ ಮರೆಯಲಾಗದ್ದು. ಆ ನಂತರ ರಾಜ್ಯದೆಲ್ಲೆಡೆ ನಡೆದ ಭಾರೀ ಪ್ರತಿಭಟನೆ ರಾಜ್ಯ ಮಾತ್ರವಲ್ಲ ಅಕ್ಕ ಪಕ್ಕದ ರಾಜ್ಯಗಳಲ್ಲೂ ಸದ್ದು ಮಾಡಿತ್ತು. ಸೌಜನ್ಯ ಪರ ಹೋರಾಟಗಾರರು ಧರ್ಮಸ್ಥಳದ ಪ್ರಭಾವಿ ಮನೆತನದ ವಿರುದ್ಧ ಆರೋಪ ಮಾಡಿದ್ದರು. ಅತ್ಯಾಚಾರಿಗಳನ್ನು ರಕ್ಷಿಸಿದ, ಸಾಕ್ಷ್ಯ ನಾಶ ಮಾಡಿದ ಆರೋಪ ಮಾತ್ರವಲ್ಲ, ಸೌಜನ್ಯಳ ಕೊಲೆಗೂ ಮುನ್ನ ನಡೆದ ಹಲವು ಹೆಣ್ಣುಮಕ್ಕಳ ನಿಗೂಢ ಸಾವುಗಳಿಗೆ ಮರುಜೀವ ಬಂದಿತ್ತು. ಕೊಲೆಗಾರರು ಯಾರು ಎಂಬ ಪ್ರಶ್ನೆಗೆ ಉತ್ತರ ಬೇಕು ಎಂಬ ಕೂಗು ಜೋರಾಗಿತ್ತು.
ಪತ್ತೆಯಾಗದ ಅಪರಾಧಿಗಳು; ನಿಲ್ಲದ ಒಂದೂವರೆ ದಶಕದ ಹೋರಾಟ
ಕರ್ನಾಟಕದ ಪ್ರಸಿದ್ಧ ತೀರ್ಥಕ್ಷೇತ್ರ ಧರ್ಮಸ್ಥಳದ ಜನರ ಜೀವನದಿ ನೇತ್ರಾವತಿಯ ದಡ, 2012ರ ಅಕ್ಟೋಬರ್ 10ರಂದು ಭೀಕರ ಕ್ರೌರ್ಯವೊಂದಕ್ಕೆ ಸಾಕ್ಷಿಯಾಗಿತ್ತು. ಕಾಲೇಜು ವಿದ್ಯಾರ್ಥಿನಿ ಸೌಜನ್ಯಳ ಜರ್ಜರಿತಗೊಂಡ ಮೃತದೇಹ ನೇತ್ರಾವತಿಯ ಸ್ನಾನಘಟ್ಟ ಸಮೀಪದ ಪೊದೆಯಲ್ಲಿ ಪತ್ತೆಯಾಗಿತ್ತು. 17 ವರ್ಷದ ಸೌಜನ್ಯಳನ್ನು ಅತ್ಯಾಚಾರಗೈದು ಕೊಲೆ ಮಾಡಲಾಗಿತ್ತು. ಈ ಘಟನೆಯಿಂದ ಇಡೀ ಧರ್ಮಸ್ಥಳವೇ ಬೆಚ್ಚಿ ಬಿದ್ದಿತ್ತು. ಮಾರನೇ ದಿನ ಧರ್ಮಸ್ಥಳ ಬೃಹತ್ ಪ್ರತಿಭಟನೆಗೆ ಸಾಕ್ಷಿಯಾಯಿತು.

2012 ಅಕ್ಟೋಬರ್ 9ರಂದು ಎಡೆಬಿಡದೇ ಮಳೆ ಸುರಿಯುತ್ತಿತ್ತು. ಧರ್ಮಸ್ಥಳದ ಮಂಜುನಾಥೇಶ್ವರ ಕಾಲೇಜಿಗೆ ಹೋಗಿದ್ದ ಸೌಜನ್ಯ ಸಂಜೆ 4 ಗಂಟೆಗೆ ಸ್ನಾನಘಟ್ಟದ ಬಳಿ ಬಸ್ಸಿನಿಂದ ಇಳಿದು ಮನೆ ಕಡೆಗೆ ಹೆಜ್ಜೆ ಹಾಕಿದ್ದಳು. ಅದೇ ಸಮಯದಲ್ಲಿ ಎದುರಿನಿಂದ ಸೌಜನ್ಯಳ ಮಾವ ವಿಠಲ ಗೌಡ ಜೀಪಿನಲ್ಲಿ ಸಾಗುತ್ತಿದ್ದವರು ಸೌಜನ್ಯಳನ್ನು ನೋಡಿದ್ದೇ ಕೊನೆ, ನಂತರ ಆಕೆ ನಾಪತ್ತೆಯಾಗಿದ್ದಾಳೆ.
ಸಂಜೆ ಆರು ಗಂಟೆಯಾದರೂ ಮಗಳು ಕಾಲೇಜಿನಿಂದ ಮನೆಗೆ ಬಂದಿಲ್ಲ, ತಾಯಿ ಸಹಜವಾಗಿಯೇ ಆತಂಕಗೊಂಡಿದ್ದಾರೆ. ನೇತ್ರಾವತಿ ಸ್ನಾನಘಟ್ಟದ ಬಳಿಯೇ ಹೋಟೆಲು ನಡೆಸುತ್ತಿರುವ ತಮ್ಮನಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ. ಸಂಜೆ ನಾಲ್ಕೂವರೆಯ ವೇಳೆಗೆ ಆಕೆ ಬಸ್ ಇಳಿದು ಮನೆ ಕಡೆ ಹೋಗುತ್ತಿದ್ದುದನ್ನು ನೋಡಿರುವುದಾಗಿ ಸೌಜನ್ಯ ಮಾವ ವಿಠಲ ಹೇಳಿದಾಗ ಆತಂಕ ಹೆಚ್ಚಾಗುತ್ತದೆ. ಆಕೆಯನ್ನು ಕೊನೆಯ ಬಾರಿಗೆ ನೋಡಿ ಆ ಮಣ್ಣಸಂಕ ಎಂಬ ಜಾಗದಲ್ಲಿ ಹುಡುಕಾಟ ನಡೆಸಿದ್ದಾರೆ. ಇಡೀ ರಾತ್ರಿ ಊರಿನ ಜನರೆಲ್ಲ ಸೇರಿ ಹುಡುಕಿದ್ದಾರೆ, ಪೊಲೀಸರಿಗೂ ದೂರು ನೀಡಿದ್ದಾರೆ. ಯಾವ ಸುಳಿವೂ ಸಿಕ್ಕಿರಲಿಲ್ಲ. ಆದರೆ, ಮರುದಿನ ಬೆಳಿಗ್ಗೆ ಮಣ್ಣಸಂಕದಲ್ಲಿ ಹರಿಯುವ ಸಣ್ಣ ತೊರೆಯಿಂದಾಚೆಗೆ ಪೊದೆಯಲ್ಲಿ ಸೌಜನ್ಯಳ ಅರೆನಗ್ನ ದೇಹ ಪತ್ತೆಯಾಗಿತ್ತು.

ಸೌಜನ್ಯಳನ್ನು ಅಪಹರಿಸಿ ಬೇರೆ ಕಡೆ ಅತ್ಯಾಚಾರ ಮಾಡಿ ಕೊಂದು ಮೃತದೇಹವನ್ನು ಇಲ್ಲಿ ತಂದು ಹಾಕಾಲಾಗಿದೆ ಎಂದು ಮೃತದೇಹವನ್ನು ನೋಡಿದ ತಕ್ಷಣ ಕುಟುಂಬದವರು ಅನುಮಾನ ವ್ಯಕ್ತಪಡಿಸಿದ್ದರು.
ಧರ್ಮಸ್ಥಳ ಈ ಆಘಾತದಲ್ಲಿರುವಾಗಲೇ ಪ್ರಸಿದ್ಧ ಬಾಹುಬಲಿ ಬೆಟ್ಟದ ಮೆಟ್ಟಿಲ ಮೇಲೆ ಕುಳಿತಿದ್ದ ಸಂತೋಷ್ ರಾವ್ ಎಂಬ ಪ್ರವಾಸಿಯೊಬ್ಬನನ್ನು ಹಿಡಿದು ಪೊಲೀಸರ ವಶಕ್ಕೆ ಕೊಡಲಾಯ್ತು. ಆದರೆ ಧರ್ಮಸ್ಥಳದ ಬಹುತೇಕ ನಿವಾಸಿಗಳು, ಹೀಗೆ ಅಮಾಯಕನನ್ನು ಹಿಡಿದುಕೊಟ್ಟ ಮಲ್ಲಿಕ್ ಜೈನ್, ಧೀರಜ್ ಜೈನ್ ಮತ್ತು ಉದಯ್ ಜೈನ್ ಅವರುಗಳ ಮೇಲೆಯೇ ಅನುಮಾನಪಡುತ್ತಿದ್ದರು.
ಇದನ್ನು ಓದಿ ಸೌಜನ್ಯ ಪ್ರಕರಣ | ʼಗೋಲ್ಡನ್ ಅವರ್ʼ ನಲ್ಲಿ ಸಂಪೂರ್ಣ ಸಾಕ್ಷ್ಯ ನಾಶ ಮಾಡಲಾಗಿದೆ; ಸಿಬಿಐ ವರದಿ
ಇದನ್ನೂ ಓದಿ ಸೌಜನ್ಯ ಪ್ರಕರಣ | ಅಲ್ಲಿ ಎಲ್ಲೆಲ್ಲೂ ಸೌಜನ್ಯಳೇ ಕಾಣಸಿಗುತ್ತಾಳೆ…
ಸಂತೋಷ್ ಈ ಕೆಲಸ ಮಾಡಿರಲು ಸಾಧ್ಯವೇ ಇಲ್ಲ ಎಂದು ಸೌಜನ್ಯ ಕುಟುಂಬದವರು ಅಂದಿನಿಂದಲೂ ಹೇಳುತ್ತಲೇ ಬಂದಿದ್ದರು.
ಅಕ್ಟೋಬರ್ 11ನೇ ತಾರೀಕು ಈ ತ್ರಿವಳಿ ಜೈನ್‌ಗಳ ಜೊತೆ ಇನ್ನೂ ಕೆಲವು ಸ್ಥಳೀಯರು ಕೂಡಿಕೊಂಡು ಮೆಟ್ಟಲ ಮೇಲೆ ಕುಳಿತಿದ್ದ ಸಂತೋಷ್ ರಾವ್‌ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ, ನಂತರ ಪೊಲೀಸರಿಗೆ ಒಪ್ಪಿಸಿದ್ದರು. ಸಂತೋಷ್ ದೇಹದ ಮೇಲೆ 17 ಗಾಯದ ಗುರುತುಗಳಿದ್ದವು. ಈ ಗಾಯಗಳು ಸೌಜನ್ಯಳ ಪ್ರತಿರೋಧದಿಂದಾಗಿ ಆಗಿವೆ ಎಂಬುದು ಪೊಲೀಸರ ವಿವರಣೆಯಾಗಿತ್ತು. ಸಂತೋಷ್ ತಾನೇ ಈ ಕೃತ್ಯ ಮಾಡಿದ್ದೇನೆಂದು ಒಪ್ಪಿಕೊಂಡಿರುವುದಾಗಿ ಅಕ್ಟೋಬರ್ 13ನೇ ತಾರೀಕು ಪೊಲೀಸರು ಘೋಷಿಸಿದರು. ಮತ್ತು ಸೌಜನ್ಯಳ ಮೃತದೇಹ ಸಿಕ್ಕ ಮಣ್ಣಸಂಕ ಎಂಬ ಸ್ಥಳಕ್ಕೆ ಸಂತೋಷ್‌ರನ್ನು ಮಹಜರಿಗಾಗಿ ಕರೆದೊಯ್ದರು.
ಆದರೆ ಸೌಜನ್ಯ ಕುಟುಂಬದ ಪ್ರಕಾರ ಆ ಮೂವರ ಗುಂಪೇ ನಿಜವಾದ ಪಾತಕಿಗಳು. ಹೀಗಿದ್ದರೂ ಸಿಐಡಿಗಾಗಲಿ, ಸಿಬಿಐಗಾಗಲಿ ಆ ಜೈನ್‌ಗಳ ವಿರುದ್ಧ ಯಾವೊಂದು ಸಾಕ್ಷ್ಯವೂ ಸಿಕ್ಕಿಲ್ಲ. ವಾಸ್ತವದಲ್ಲಿ ಈ ಯುವಕರ ಬಗ್ಗೆ ಸರಿಯಾದ ತನಿಖೆಯನ್ನೇ ನಡೆಸಿಲ್ಲ, ಬದಲಿಗೆ ಪೊಲೀಸರೇ ಹೆಜ್ಜೆಹೆಜ್ಜೆಗೂ ಸಾಕ್ಷ್ಯಗಳನ್ನು ನಾಶ ಪಡಿಸಿದ್ದಾರೆ ಎಂದು ಕುಟುಂಬದವರು ʼಈ ದಿನʼದ ಜೊತೆಗೆ ಮಾತನಾಡುವಾಗ ಆರೋಪಿಸಿದ್ದರು. ನಂತರ ಬಹಳಷ್ಟು ವೇದಿಕೆಗಳಲ್ಲಿ ಈ ಹೇಳಿಕೆಯನ್ನು ಮತ್ತೆ ಮತ್ತೆ ಹೇಳಿದ್ದಾರೆ.
ಧರ್ಮಸ್ಥಳದ ದೇವಸ್ಥಾನವೇ ನಡೆಸುತ್ತಿರುವ ಶಾಂತಿವನ ಪ್ರಕೃತಿ ಚಿಕಿತ್ಸಾಲಯ ಸೌಜನ್ಯಳ ಮೃತದೇಹ ಸಿಕ್ಕ ಸ್ಥಳದಿಂದ ಕೇವಲ 500 ಮೀಟರ್ ದೂರ ಅಷ್ಟೇ. ಈ ಕೇಸಿಗೆ ನಿರ್ಣಾಯಕ ಸಾಕ್ಷ್ಯ ಆಗಬಹುದಾಗಿದ್ದ ಶಾಂತಿವನದ ಗೇಟಿನಲ್ಲಿದ್ದ ಸಿಸಿ ಟಿವಿ ಫುಟೇಜ್‌ಗಳನ್ನು ತನಿಖಾಧಿಕಾರಿಗಳು ವಶಕ್ಕೆ ತೆಗೆದುಕೊಂಡೇ ಇಲ್ಲ. ಈ ವಿಷಯವನ್ನು ಸ್ವತಃ ಪೊಲೀಸ್ ಇನ್‌ಸ್ಪೆಕ್ಟರ್ ಯೋಗೇಶ್ ಕುಮಾರ್ ಕೂಡ ಕೋರ್ಟ್‌ನಲ್ಲಿ ಒಪ್ಪಿಕೊಂಡಿದ್ದಾರೆ.

ಸೌಜನ್ಯಳ ಮೃತದೇಹದಲ್ಲಿ ಒಳ ಉಡುಪು ಇರಲಿಲ್ಲ. ಶವ ಸಿಕ್ಕ ಸ್ಥಳದಲ್ಲಿಯೂ ಸಿಕ್ಕಿಲ್ಲ. ಆಕೆಯ ಛತ್ರಿ, ಚಪ್ಪಲಿ ಕೂಡಾ ಇರಲಿಲ್ಲ, ಇಡೀ ರಾತ್ರಿ ಮಳೆ ಸುರಿದರೂ ಆಕೆಯ ಬ್ಯಾಗಿನಲ್ಲಿದ್ದ ಪುಸ್ತಕಗಳು ಒದ್ದೆಯಾಗಿರಲಿಲ್ಲ. ಹಾಗಾಗಿ ಬೇರೆ ಕಡೆ ಅತ್ಯಾಚಾರ ಮಾಡಿ ಕೊಂದು ಬೆಳಿಗ್ಗೆ ಈ ಜಾಗದಲ್ಲಿ ತಂದು ಎಸೆದು ಹೋಗಿದ್ದಾರೆ ಎಂಬ ಸಂಶಯ ಬಲವಾಗಿತ್ತು. “ಪೊಲೀಸರು ಮನೆಗೆ ಬಂದು ಮಗಳು ಯಾವ ತರಹದ ಒಳ ಉಡುಪು ಧರಿಸಿದ್ದಳು ತೋರಿಸಿ ಎಂದು ಕೇಳಿದರು. ನಾವು ಗುರುತಿಗೆಂದು ಹೊಲಿಗೆ ಹಾಕಿ ಕೊಟ್ಟೆವು. ಪೊಲೀಸರು ಅದೇ ಒಳ ಉಡುಪನ್ನು ಮಣ್ಣಿನಲ್ಲಿ ಹೂತಿಟ್ಟು ಅದನ್ನೇ ಮಹಜರು ಸಮಯದಲ್ಲಿ ಸಂತೋಷನಿಂದ ಹೊರಗೆ ತೆಗೆಸಿದರು. ಅದನ್ನು ಸಂತೋಷನೇ ಹೂತಿಟ್ಟಿದ್ದು ಅಂತ ಹೇಳಿಕೆ ತೆಗೆದುಕೊಂಡರು” ಎಂದು ಸೌಜನ್ಯ ತಾಯಿ ಕುಸುಮಾವತಿ ಆರೋಪ ಮಾಡುತ್ತಲೇ ಇದ್ದರು. ಆ ಯಾವ ಮಾತುಗಳನ್ನೂ ಸಿಬಿಐ ಕೇಳಿಸಿಕೊಂಡಿರಲಿಲ್ಲ.
ಫೊರೆನ್ಸಿಕ್ ವರದಿಯಲ್ಲಿ ಬಯಲಾದ ವಿಷಯ ಏನೆಂದರೆ ಮೃತ ದೇಹದ ಬಟ್ಟೆಗಳಿಗೆ, ಮೃತಳ ಮರ್ಮಾಂಗಕ್ಕೆ ಅಂಟಿದ್ದ ಮತ್ತು ಮೃತ ದೇಹ ಸಿಕ್ಕ ಸ್ಥಳದ ಮಣ್ಣು ಒಂದೇ ಆಗಿತ್ತು; ಆದರೆ ಸಂತೋಷ್‌ನ ಬಟ್ಟೆಗಳಿಗೆ ಯಾವುದೇ ಮಣ್ಣು ಅಂಟಿರಲಿಲ್ಲ.
ಬೆಳ್ತಂಗಡಿ ಪೊಲೀಸರು, ಸಿಐಡಿ ಮತ್ತು ಸಿಬಿಐ ತನಿಖಾ ಸಂಸ್ಥೆಗಳು ಸಂತೋಷ್ ರಾವ್ ವಿರುದ್ಧದ ಕೇಸನ್ನು ಮೂರು ಅಂಶಗಳ ಮೇಲೆ ನಡೆಸಿದ್ದರು. ಸಂತೋಷ್ ತಪ್ಪೊಪ್ಪಿಗೆ, ವಶಪಡಿಸಿಕೊಂಡ ಬಟ್ಟೆಗಳು, ಆತನ ದೇಹದ ಮೇಲಿನ ಗಾಯದ ಗುರುತುಗಳು.
ಆದರೆ, ಆತನ ಮೇಲಿನ ಆರೋಪಗಳನ್ನು ಸಾಬೀತುಪಡಿಸಲು ಈ ಮೂರು ಸಾಕ್ಷ್ಯಗಳಷ್ಟೇ ಸಾಕಾಗುವುದಿಲ್ಲ, ಇವು ಬಲವಾದ ಸಾಕ್ಷ್ಯ ಅಂತ ಪರಿಗಣಿಸಲಿಕ್ಕೆ ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಆತನ ದೇಹದ ಮೇಲೆ ಕಂಡುಬಂದ ಉಗುರಿನಿಂದಾದ ನಾಲ್ಕು ಗಾಯಗಳು ಆತನನ್ನು ಪೊಲೀಸರ ವಶಕ್ಕೆ ಕೊಡುವ ಮೊದಲು ಥಳಿಸಿದ್ದ ಗಾಯಗಳಾಗಿರಬಹುದೆಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು.
ಸಂತೋಷ್ 5 ವರ್ಷಗಳಿಗಿಂತಲೂ ಹೆಚ್ಚು ಕಾಲ ಬಂಟ್ವಾಳದಲ್ಲಿ ಜೈಲುವಾಸ ಅನುಭವಿಸಿದ್ದ. ಅಂತಿಮವಾಗಿ ಕೋರ್ಟ್ ಆತನನ್ನು ನಿರ್ದೋಷಿ ಎಂದು ಹೇಳಿದೆ.
ಇದನ್ನು ಓದಿ ಸೌಜನ್ಯ ಸಾವಿನ ನಂತರ ಧರ್ಮಸ್ಥಳದಲ್ಲಿ ಅನುಮಾನಾಸ್ಪದ ಸಾವು ಕಡಿಮೆಯಾದವು ಯಾಕೆ: ಮಹೇಶ್ ತಿಮರೋಡಿ ಪ್ರಶ್ನೆ
ನಾವು ಸಂತೋಷ್ ಮನೆಗೆ ಹೋದಾಗ ನಮ್ಮ ಜೊತೆಗೆ ಮಾತನಾಡಿದ ತಂದೆ ಸುಧಾಕರ ರಾವ್, “ಮಗ ಕೇಸಿನಿಂದ ಖುಲಾಸೆಯಾದ ಮೇಲೂ ಮನೆಗೆ ಬಂದಿಲ್ಲ. ಐದು ವರ್ಷ ಜೈಲಿನಲ್ಲಿದ್ದು ಜಾಮೀನು ಸಿಕ್ಕಿದ ನಂತರ ಒಮ್ಮೆಯಷ್ಟೇ ಮನೆಗೆ ಬಂದಿದ್ದ. ಮಗನ ಬಂಧನವಾದ ನಂತರ ಆ ಕೊರಗಿನಲ್ಲೇ ತಾಯಿ ತೀರಿಕೊಂಡಳು. ಅಮ್ಮನಿಗೆ ಮಗನ ಭೇಟಿ ಮಾಡಿಸಲು ಮಾಡಿದ ಪ್ರಯತ್ನ ಫಲ ನೀಡಲಿಲ್ಲ. ಎಷ್ಟೇ ಅರ್ಜಿ ಹಾಕಿದರೂ ಕೋರ್ಟ್ ಅನುಮತಿ ಕೊಡಲಿಲ್ಲ. ಕೊನೆಗೂ ಮಗನ ಮುಖ ನೋಡಲಾಗದೆ, ಅವನ ನೆನಪಿನಲ್ಲೇ ತಾಯಿ ಕಣ್ಣು ಮುಚ್ಚಿದಳು. ಅಮ್ಮನಿಲ್ಲದ ಮನೆಗೆ ಬರಲಾಗುತ್ತಿಲ್ಲ ಅಂತ ಮಗ ಈಗಲೂ ಮನೆಗೆ ಬರುತ್ತಿಲ್ಲ” ಅಂತ ಹೇಳುತ್ತ ದುಃಖಿಸಿದ್ದರು.
ಸಿಬಿಐ ತೀರ್ಪು ಬಂದು ಸರಿಯಾಗಿ ಮೂರು ವರ್ಷ ಆಯ್ತು. ಈ ಮಧ್ಯೆ ಸಂತೋಷ್ ತಂದೆ ಸುಧಾಕರ ರಾವ್ ಮತ್ತು ಸೌಜನ್ಯಳ ತಂದೆ ಚಂದಪ್ಪ ಗೌಡ ಮೃತಪಟ್ಟಿದ್ದಾರೆ. ಸಂತೋಷ್ ತಂದೆಗೆ ಮಗ ದೋಷಮುಕ್ತನಾದ ನಿರಾಳತೆ ಇತ್ತು. ಆದರೆ, ಸೌಜನ್ಯ ತಂದೆಗೆ ಮಗಳ ಕೊಲೆಗಾರ ಇನ್ನೂ ಪತ್ತೆಯಾಗಿಲ್ಲವಲ್ಲಾ ಎಂಬ ಕೊರಗು ಜೊತೆಗಿತ್ತು. ಆ ಕೊರಗಿನಲ್ಲೇ ಕೊನೆಯುಸಿರೆಳೆದಿದ್ದಾರೆ. ತಾಯಿ ಕುಸುಮಾವತಿ ಅವರದ್ದು ಮಾತ್ರ ಬತ್ತದ ಹೋರಾಟ.
ಈ ಮಧ್ಯೆ ಬೆಳ್ತಂಗಡಿ ಸುತ್ತಮುತ್ತ ಅನಾಥ ಶವ ಹೂತು ಹಾಕಿದ್ದೇನೆ ಎಂದು ಹೇಳಿಕೊಂಡು ಬಂದ ಚಿನ್ನಯ್ಯ ಎಂಬಾತನ ದೂರು ಆಧರಿಸಿ ಸರ್ಕಾರ ಎಸ್‌ಐಟಿ ರಚನೆ ಮಾಡಿತ್ತು. ನೇತ್ರಾವತಿ ನದಿ ದಡಗಳಲ್ಲಿ ಹುಡುಕಾಟ ನಡೆಸಿದ ಎಸ್‌ಐಟಿ ಮೂಳೆಗಳನ್ನು ಸಂಗ್ರಹಿಸಿದ ಪ್ರಕ್ರಿಯೆ, ನಂತರ ಚಿನ್ನಯ ಉಲ್ಟಾ ಹೊಡೆದಿದ್ದು ಎಲ್ಲವನ್ನೂ ಈ ರಾಜ್ಯದ ಜನ ನೋಡಿದ್ದಾರೆ. ಇತ್ತೀಚೆಗೆ ಎಸ್‌ಐಟಿ ತನಿಖಾ ವರದಿಯನ್ನು ಬೆಳ್ತಂಗಡಿ ಕೋರ್ಟ್ಗೆ ಸಲ್ಲಿಸಿದೆ. ಆದರೆ ಬುರುಡೆ ಪ್ರಕರಣದಿಂದಾಗಿ ಸೌಜನ್ಯ ಪ್ರಕರಣಕ್ಕೆ ಮತ್ತೆ ಜೀವ ಬಂದಿತ್ತು. ಈ ಮಧ್ಯೆ ಸೌಜನ್ಯ, ವೇದವಲ್ಲಿ, ಪದ್ಮಲತಾ ಅಸಹಜ ಸಾವು ಹಾಗೂ ಮಾವುತ ಮತ್ತು ಆತನ ಸೋದರಿಯ ಜೋಡಿ ಕೊಲೆ ಪ್ರಕರಣದ ಮರುತನಿಖೆಗೆ ಒತ್ತಾಯ ಜೋರಾಗಿತ್ತು. ಪ್ರಗತಿಪರ ಸಂಘಟನೆಗಳು, ಸ್ತ್ರೀಪರ ಹೋರಾಟಗಾರರು “ಕೊಂದವರು ಯಾರು?” ಆಂದೋಲನದ ಮೂಲಕ ಸೋನಿಯಾಗಾಂಧಿ ಅವರಿಗೆ ಮರುತನಿಖೆಗೆ ರಾಜ್ಯಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಒತ್ತಾಯಿಸಲಾಯಿತು. ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಮನವಿ ಕೊಡಲಾಯಿತು. ಸರ್ಕಾರದಿಂದ ಯಾವುದೇ ಸ್ಪಂದನೆ ಬರಲಿಲ್ಲ.
ಈ ಮಧ್ಯೆ ಸುಪ್ರೀಂ ಮೆಟ್ಟಿಲೇರಿದ ಕುಸುಮಾವತಿ ಅವರ ಹೋರಾಟಕ್ಕೆ ಸಣ್ಣದೊಂದು ಭರವಸೆಯ ಬೆಳಕಿಂಡಿ ತೆರೆದುಕೊಂಡಂತಾಗಿದೆ. ಇದೊಂದು ಅಪರೂಪದ ಪ್ರಕರಣ ಮತ್ತು ಸುದೀರ್ಘ ಹೋರಾಟ ಕಂಡ ಪ್ರಕರಣ. ಸುಪ್ರೀಂ ನಿರ್ದೇಶನದಂತೆ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿ ದಕ್ಷ ಅಧಿಕಾರಿಯನ್ನು ನೇಮಕ ಮಾಡಬೇಕು. ಸರ್ಕಾರ ಯಾರದ್ದೇ ಪ್ರಭಾವಕ್ಕೆ ಒಳಗಾಗದೇ, ತನಿಖೆಯಲ್ಲಿ ಯಾವುದೇ ಹಸ್ತಕ್ಷೇಪ ಮಾಡದೇ ನಿಷ್ಪಕ್ಷಪಾತ ತನಿಖೆಗೆ ಅನುವು ಮಾಡಿಕೊಡಬೇಕು. ನಿಜವಾದ ಅಪರಾಧಿಗೆ ಶಿಕ್ಷೆಯಾಗಬೇಕು. ಸೌಜನ್ಯಳಿಗೆ ನ್ಯಾಯ ಸಿಗಬೇಕು. ಇದು ಯಾರ ವಿರುದ್ಧದ ಷಡ್ಯಂತ್ರವಲ್ಲ, ಕಾಮುಕರ ಅಟ್ಟಹಾಸಕ್ಕೆ ಬಲಿಯಾದ ಮುಗ್ಧ ಜೀವವೊಂದರ ಆತ್ಮಶಾಂತಿಗಾಗಿ ನಡೆಯುತ್ತಿರುವ ಕೊನೆಯ ಹೋರಾಟ.

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.




