ಎಸ್ಐಆರ್ ಪ್ರಕ್ರಿಯೆಯಿಂದ ಮತ ರಕ್ಷಿಸಿಕೊಳ್ಳಲು ಸಾರ್ವಜನಿಕರಿಗೆ ನೆರವಾಗುವ ಉದ್ದೇಶದಿಂದ ನಾಗರಿಕ ಮತಕಾವಲು ಸಮಿತಿ ರಚಿಸಲಾಗಿದ್ದು, ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸಮಿತಿ ವತಿಯಿಂದ ಸುದ್ದಿಗೋಷ್ಠಿ ನಡೆಸಲಾಯಿತು. ಇದೇ ವೇಳೆ ಎಸ್ಐಆರ್ ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹಕ್ಕು ಉಳಿಸುವಲ್ಲಿ ಜನರಿಗೆ ನೆರವಾಗಲು ವೆಬ್ಸೈಟ್ ಅನಾವರಣ ಮಾಡಲಾಯಿತು.
ನಾಡಿನ ಪ್ರತಿಯೊಂದು ಮತವೂ ನಮ್ಮೆಲ್ಲರ ಹೊಣೆ ಎಂಬ ಧ್ಯೇಯ ವಾಕ್ಯದಡಿ www.matakavalu.com ವೆಬ್ಸೈಟ್ ಅನ್ನು ಲಾಂಚ್ ಮಾಡಲಾಗಿದ್ದು, ಎಸ್ಐಆರ್ ಕುರಿತ ನೆರವು ಹಾಗೂ ನಿರಂತರ ಮಾಹಿತಿ ಪಡೆಯಲು ಸಹಕಾರಿಯಾಗಲಿದೆ.
ಇದೇ ವೇಳೆ ಮಾತನಾಡಿದ ಜನಶಕ್ತಿ ಸಂಘಟನೆಯ ಕರಿಯಪ್ಪ ಗುಡಿಮನಿ, “ಮತದಾರರನ್ನು ಎಚ್ಚರಗೊಳಿಸಲು ಸಂಘಟನೆಗಳು ಮತ್ತು ಪತ್ರಕರ್ತರ ಕಾರ್ಯ ಅಮೂಲ್ಯವಾದುದು. ಇಡೀ ಚುನಾವಣಾ ಆಯೋಗವನ್ನು ಕೇಂದ್ರ ಸರ್ಕಾರ ಹತೋಟಿಗೆ ತೆಗೆದುಕೊಳ್ಳಲು ಯತ್ನಿಸುತ್ತಿದೆ. ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆ. ಆದರೆ ಇಲ್ಲಿ ಎಲ್ಲರೂ ಜಾಗೃತರಾಗಿದ್ದಾರೆ. ಇದು ಪಶ್ಚಿಮ ಬಂಗಾಳ ಅಥವಾ ಬಿಹಾರ ಅಲ್ಲ, ಬದಲಾಗಿ ಕರ್ನಾಟಕ. ಲಂಬಾಣಿ, ಬೋವಿ ಸಮುದಾಯ ಸೇರಿದಂತೆ ಅಲೆಮಾರಿ ಸಮುದಾಯದ ಜನರು ದುಡಿಯಲು ವಲಸೆ ಹೋಗುತ್ತಾರೆ. ಅಂತಹ ಮತದಾರರು ತಮ್ಮ ಮತವನ್ನು ಹೇಗೆ ಉಳಿಸಿಕೊಳ್ಳಬೇಕು?” ಎಂದು ಪ್ರಶ್ನಿಸಿದರು.
ಅಲೆಮಾರಿ ಸಮುದಾಯದ ಮುಖಂಡ ಮಾರೆಣ್ಣ, “ಎಸ್ಐಆರ್ ಜಾರಿಯಾಗಿ ಅಲೆಮಾರಿಗಳಿಗೆ ದಿಕ್ಕೇ ತೋಚದಂತಾಗಿದೆ. ಮನೆಯಿಲ್ಲ, ಭೂಮಿಯಿಲ್ಲ. ಎಲ್ಲೋ ಒಂದು ಕಡೆ ಟೆಂಟ್ ಹಾಕಿಕೊಂಡು ಜೀವನ ನಡೆಸುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ಚುನಾವಣಾ ಆಯೋಗ ಕೇಳಿದ ದಾಖಲೆಗಳನ್ನು ಒದಗಿಸುವುದು ಹೇಗೆ? ನಮಗೆ ವಾಸಸ್ಥಳ ಪ್ರಮಾಣಪತ್ರವನ್ನು ಸರ್ಕಾರ ಒದಗಿಸಬೇಕು,” ಎಂದು ಆಗ್ರಹಿಸಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರವಿಕುಮಾರ್ ಮಾತನಾಡಿ, “ಎಸ್ಐಆರ್ ಪ್ರಕ್ರಿಯೆಯಲ್ಲಿ ಯುವಕರು ಎಚ್ಚರಗೊಂಡು ಮತ ರಕ್ಷಣೆಗೆ ಮುಂದಾಗಬೇಕು. ಒಂದು ತಿಂಗಳು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣ ಬಿಟ್ಟು ಮತ ಉಳಿಸಿಕೊಳ್ಳಲು ಹೋರಾಡಬೇಕು. ಇಲ್ಲದಿದ್ದಲ್ಲಿ ಅರ್ಹ ಮತದಾರರು ಮತಪಟ್ಟಿಯಿಂದ ಹೊರಗುಳಿಯುತ್ತಾರೆ,” ಎಂದು ಹೇಳಿದರು.
ಎಸ್ಡಿಪಿಐ ಮುಖಂಡ ವಲಿಬಾಷಾ ಅವರು ಮಾತನಾಡಿ, “ಕೇಂದ್ರ ಸರ್ಕಾರ ಕಳ್ಳತನ ಮಾಡಿ ಕಳ್ಳನೊಬ್ಬ ನುಗ್ಗಿದ ಊರನ್ನೇ ಈಗ ಕಳ್ಳರು ಎಂದು ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಬರಲು ಕಾರಣ ಕೇಂದ್ರ ಸರ್ಕಾರವೇ ಅಲ್ಲವೇ? ಜನಸಾಮಾನ್ಯರ ಮೇಲೆ ಯಾಕೆ ಗೂಬೆ ಕೂರಿಸುತ್ತಿದ್ದೀರಿ?” ಎಂದು ಪ್ರಶ್ನಿಸಿದರು.
ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜೆ.ಎಂ. ವೀರಂಗಯ್ಯ ಮಾತನಾಡಿ, “ಎಸ್ಐಆರ್ ಫಾರಂ ಅನ್ನು ತುಂಬುವ ವಿಚಾರದಲ್ಲಿಯೇ ಗೊಂದಲವಿದೆ. ಬಿಎಲ್ಓಗಳೇ ತುಂಬಬೇಕು ಎಂದು ಕೆಲವರು ಹೇಳುತ್ತಾರೆ. ಮತ್ತೊಂದಿಷ್ಟು ಜನ ಬಿಎಲ್ಓಗಳು ಅರ್ಜಿ ತುಂಬಬಾರದು ಎಂದು ಹೇಳುತ್ತಾರೆ. ಮತದಾರರಿಗೆ ಈ ವಿಚಾರದಲ್ಲಿ ತುಂಬಾ ಗೊಂದಲವಿದ್ದು, ಗೊಂದಲ ಬಗೆಹರಿಸಿ. ಕರ್ನಾಟಕದಲ್ಲಿ ಒಂದು ಮತವೂ ಕೈತಪ್ಪಬಾರದು. ಕರ್ನಾಟಕದ ಸಮಗ್ರ ಮತದಾರರನ್ನು ಉಳಿಸಿಕೊಳ್ಳಬೇಕು. ವಾಸಸ್ಥಳ ಪ್ರಮಾಣಪತ್ರ, ಚೆಕ್ಲಿಸ್ಟ್ ಸೇರಿದಂತೆ ಮೂರು ದಾಖಲೆಗಳನ್ನು ಸರ್ಕಾರವೇ ಕೊಡಬೇಕು,” ಎಂದು ಸಿಎಂ ಡಿ.ಕೆ. ಶಿವಕುಮಾರ್ ಅವರಿಗೂ ಮನವಿ ಮಾಡಿದ್ದೇವೆ ಎಂದರು.
ಈ ವೇಳೆ ಹಿರಿಯ ಸಾಹಿತಿ ಪೀರ್ ಭಾಷಾ, ರೈತ ಸಂಘದ ಹೊಸಪೇಟೆ ಘಟಕದ ತಾಲೂಕು ಅಧ್ಯಕ್ಷ ಸೋಮಶೇಖರ್ ಘಂಟೆ, ಡಿಎಸ್ಎಸ್ನ ಹನುಮೇಶ್ ರಾಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.




