ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಇಂಡಿಗೋ ಏರ್ಲೈನ್ಸ್ನಲ್ಲಿ ಯುವಕನೊಬ್ಬ ತನ್ನ ಕನಸಿನ ಉದ್ಯೋಗವನ್ನು ಅನಿವಾರ್ಯವಾಗಿ ತೊರೆದಿರುವ ಘಟನೆ ಬೆಳಕಿಗೆ ಬಂದಿದೆ. ಕೆಲಸದ ಸ್ಥಳದಲ್ಲಿ ಎದುರಾದ ಅವಮಾನ ಮತ್ತು ಟಾಕ್ಸಿಕ್ ಕಾರ್ಯಸಂಸ್ಕೃತಿಯೇ ರಾಜೀನಾಮೆಗೆ ಕಾರಣ ಎಂದು ಮಾಜಿ ಉದ್ಯೋಗಿ ಮೊಹಮ್ಮದ್ ಜಮ್ಶೀದ್ ವೈ ಆರೋಪಿಸಿದ್ದಾರೆ.
ಏನಿದು ಪ್ರಕರಣ?
ಘಟನೆಯ ವಿವರವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಜಮ್ಶೀದ್, “ಅಂದು ಟರ್ಮಿನಲ್ 1ರಲ್ಲಿ ವಾರಾಂತ್ಯದ ತಪಾಸಣೆಯನ್ನು ನಡೆಸುತ್ತಿದ್ದೆ. ಆ ಸಂದರ್ಭದಲ್ಲಿ ನಾನು ಟೈ ಧರಿಸಿಲ್ಲ ಎಂಬುದನ್ನು ಗಮನಿಸಿದ ಸಪ್ತರ್ಷಿ ಮುಖರ್ಜಿ ಎಂಬ ಅಧಿಕಾರಿ, ನನ್ನ ಮೇಲ್ವಿಚಾರಕರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ನಾನು ನನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದೆ ಮತ್ತು ಮತ್ತೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದೆ. ಕ್ಷಮೆಯಾಚಿಸಿದರೂ ವಿಷಯ ಅಲ್ಲಿಗೆ ಮುಗಿಯಲಿಲ್ಲ. ನನ್ನ ಮೇಲ್ವಿಚಾರಕರ ಬಳಿ ಕ್ಷಮೆ ಕೇಳುವಂತೆ ಅಧಿಕಾರಿ ಒತ್ತಾಯಿಸಿದರು. ನಾನು ಅದನ್ನೂ ಮಾಡಿದೆ. ಆದರೆ, ಆ ನಂತರ ನನ್ನ ಮೇಲ್ವಿಚಾರಕರ ‘ಕಾಲು ಮುಟ್ಟುವಂತೆ’ ಆದೇಶಿಸಲಾಯಿತು. ವೃತ್ತಿಪರ ಕೆಲಸದ ಸ್ಥಳದಲ್ಲಿ ಇಂತಹ ಅವಮಾನಕರವಾದ ಮತ್ತು ಘನತೆಗೆ ಕುಂದು ತರುವ ಬೇಡಿಕೆಯನ್ನು ನಾನು ವಿರೋಧಿಸಿದೆ. ಈ ಕಾರಣಕ್ಕೆ ನನ್ನನ್ನು ಟರ್ಮಿನಲ್ನಿಂದ ಹೊರಹೋಗುವಂತೆ ಸೂಚಿಸಲಾಯಿತು” ಎಂದು ಜಮ್ಶೀದ್ ವಿವರಿಸಿದ್ದಾರೆ.
ರಜೆಯ ನಂತರ ಮರಳಿದಾಗ, ಈ ಘಟನೆ ಸಹೋದ್ಯೋಗಿಗಳ ನಡುವೆ ಚರ್ಚೆಯ ವಿಷಯವಾಗಿ ನನ್ನನ್ನು ಮತ್ತಷ್ಟು ಅವಮಾನಕ್ಕೆ ಗುರಿಮಾಡಿತು. ಕೂಡಲೇ ನಾನು ಇಂಡಿಗೋದ ನೀತಿ ಮತ್ತು ಅನುಸರಣಾ (Ethics and Compliance) ತಂಡಕ್ಕೆ ದೂರು ನೀಡಿದೆ. ಆದರೆ, ತನಿಖೆಯ ಫಲಿತಾಂಶ ಸಮಾಧಾನಕರವಾಗಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮಣಿಪುರ | ತೌನೋಜಂ ಬೃಂದಾ ಜೊತೆ 10 ನಾಯಕರು ಕಾಂಗ್ರೆಸ್ಗೆ; ʼಕೈʼ ಪಡೆಗೆ ದಕ್ಕೀತೇ ಅಧಿಕಾರ?
“ಅಂದು ಟರ್ಮಿನಲ್ 1ರಲ್ಲಿ ನೀವು ಇದ್ದಿದ್ದಕ್ಕೆ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಯಾವುದೇ ಪುರಾವೆ ಇಲ್ಲ ಎಂದು ಕಂಪನಿ ನನಗೆ ತಿಳಿಸಿತು. ಆದರೆ, ಟರ್ಮಿನಲ್ 1 ಸಂಪೂರ್ಣ ಸಿಸಿಟಿವಿ ಕಣ್ಗಾವಲಿನಲ್ಲಿದೆ, ಹೀಗಿರುವಾಗ ನಾನು ಅಲ್ಲಿ ಇದ್ದಿದ್ದೇ ಸಾಬೀತಾಗಲಿಲ್ಲ ಎಂಬುದು ನನಗೆ ಅಚ್ಚರಿ ಮೂಡಿಸಿದೆ” ಎಂದು ಜಮ್ಶೀದ್ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ.
ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವೃತ್ತಿಪರ ಸಂಸ್ಥೆಗಳಲ್ಲಿ ಉದ್ಯೋಗಿಗಳ ಗೌರವ ಮತ್ತು ಘನತೆಯನ್ನು ಕಾಪಾಡುವ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿವೆ. ಈ ಬಗ್ಗೆ ಇಂಡಿಗೋ ಸಂಸ್ಥೆ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಈವರೆಗೂ ಪ್ರತಿಕ್ರಿಯಿಸಿಲ್ಲ.




