ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವು ಗೌರವಯುತ ಜೀವನ ನಡೆಸಲು ತಮಗೆ ಲಿಂಗತ್ವ ಅಲ್ಪಸಂಖ್ಯಾತರ ಕಾರ್ಡ್ ಸೇರಿದಂತೆ ಹಲವಾರು ಹಕ್ಕುಗಳನ್ನು ನೀಡಬೇಕು ಎಂದು ಒತ್ತಾಯಿಸಿ ಹೋರಾಟ ನಡೆಸಲು ಮುಂದಾಗಿದೆ. ವಿಜಯನಗರ ಜಿಲ್ಲೆ ರಚನೆಯಾದಾಗ, ತಮ್ಮ ಸಮುದಾಯಕ್ಕೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಕುರಿತು ಸರ್ಕಾರ ಯಾವುದೇ ಯೋಜನೆ ರೂಪಿಸಲಿಲ್ಲ. ತಮ್ಮನ್ನು ನಿರ್ಲಕ್ಷಿಸಿದೆ ಎಂದು ಸಮುದಾಯದ ಮುಖಂಡರು ಆರೋಪಿಸಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ 161 ಮಂದಿ ಲಿಂಗತ್ವ ಅಲ್ಪಸಂಖ್ಯಾತರಿದ್ದು, ನಮಗೆ ಯಾವುದೇ ಹಕ್ಕುಗಳನ್ನು ನೀಡಲಾಗಿಲ್ಲ ಎಂದಿರುವ ಸಮುದಾಯದ ಮುಖಂಡರು, ಚಿಗುರು ಸಮುದಾಯ ಸೇವಾ ಸಂಸ್ಥೆ ನೇತೃತ್ವದಲ್ಲಿ ಹೋರಾಟ ನಡೆಸುತ್ತಿದ್ದಾರೆ.
“ಹೊಸಪೇಟೆ ಮತ್ತು ಜಿಲ್ಲೆಯ ಇತರ ಪಟ್ಟಣಗಳಲ್ಲಿ ವಾಸಿಸುವ ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ರೋಟರಿ ಕ್ಲಬ್‌ನಂತಹ ಸಾಮಾಜಿಕ ಸಂಸ್ಥೆಗಳ ಸಹಯೋಗದೊಂದಿಗೆ ಪ್ರತಿ ತಿಂಗಳು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗುತ್ತಿತ್ತು. ಲಿಂಗತ್ವ ಅಲ್ಪಸಂಖ್ಯಾತರ (ಟಿಜಿ) ಕಾರ್ಡ್‌ಗಳನ್ನು ನೀಡಲಾಗುತ್ತಿತ್ತು. ಆದರೆ, ವಿಜಯನಗರ ಜಿಲ್ಲೆ ರಚನೆಯಾದ ನಂತರ ಈ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು. ಇದೀಗ ಆಧಾರ್, ಪ್ಯಾನ್, ಮತದಾರರ ಗುರುತಿನ ಚೀಟಿಗಳು ಮತ್ತು ಇತರ ದಾಖಲೆಗಳನ್ನು ಪಡೆಯಲು ನಾವು ನಮ್ಮ ಸದಸ್ಯರಿಗೆ ಸಹಾಯ ಮಾಡುತ್ತಿದ್ದೇವೆ” ಎಂದು ಚಿಗುರು ಸಮುದಾಯ ಸೇವಾ ಸಂಸ್ಥೆಯ ಅಧ್ಯಕ್ಷೆ ಲಕ್ಷ್ಮಿ ನಾಗರಾಜ್ ಹೇಳಿದ್ದಾರೆ.
“ಭಿಕ್ಷಾಟನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿರುವುದರಿಂದ, ನಮ್ಮಲ್ಲಿ ಅನೇಕರು ಸಾಮಾನ್ಯ ಜೀವನ ನಡೆಸಲು ಹೆಣಗಾಡುತ್ತಿದ್ದಾರೆ. ಅನೇಕ ಸದಸ್ಯರು ಕೃಷಿ ಕಾರ್ಮಿಕರು, ಬಟ್ಟೆ ಮಾರಾಟಗಾರರು, ಸೀರೆ ಮಾರಾಟಗಾರರಾಗಿ ಕೆಲಸ ಮಾಡುತ್ತಿದ್ದಾರೆ. ವಿಶೇಷವಾಗಿ, ಸೀರೆ ಧರಿಸಿದ ಲಿಂಗತ್ವ ಅಲ್ಪಸಂಖ್ಯಾತರಿಗೆ ಕೃಷಿ ಕ್ಷೇತ್ರಗಳು, ಹೋಟೆಲ್‌ಗಳು ಮತ್ತು ಇತರ ಸ್ಥಳಗಳಲ್ಲಿ ಉದ್ಯೋಗ ಸಿಗುತ್ತಿಲ್ಲ. ಪ್ಯಾಂಟ್ ಧರಿಸಿದ ಲಿಂಗತ್ವ ಅಲ್ಪಸಂಖ್ಯಾತರಿಗೆ ಕೆಲಸಗಳು ಸಿಗುತ್ತಿರುವುದರಿಂದ ಉತ್ತಮರಾಗಿದ್ದಾರೆ. ನಮ್ಮಲ್ಲಿ ಅನೇಕರಿಗೆ ನಮ್ಮ ಕುಟುಂಬ ಸದಸ್ಯರನ್ನು ನೋಡಿಕೊಳ್ಳುವ ಜವಾಬ್ದಾರಿ ಇದೆ” ಎಂದು ಪದಾಧಿಕಾರಿ ಶಿವಾನಿ, ಮನೋಜ್ ಮತ್ತು ಸುಧಾ ಜೋಗತಿ ಮಾಹಿತಿ ಹಂಚಿಕೊಂಡಿದ್ದಾರೆ.
“ನಗರದಲ್ಲಿ ಬಾಡಿಗೆ ಆಧಾರದ ಮೇಲೆ ಮನೆಗಳು ಸಿಗದ ಕಾರಣ ವಸತಿ ಸೌಲಭ್ಯಕ್ಕಾಗಿ ಒತ್ತಾಯಿಸುತ್ತಿದ್ದು, ಸರ್ಕಾರದ ಗಮನ ಸೆಳೆಯಲು ಸರ್ಕಾರಿ ಭೂಮಿಯಲ್ಲಿ 34 ಗುಡಿಸಲುಗಳನ್ನು ನಿರ್ಮಿಸಿದ್ದೇವೆ. ವಸತಿ ಸೌಲಭ್ಯಕ್ಕಾಗಿ ನಾವು ಚುನಾಯಿತ ಪ್ರತಿನಿಧಿಗಳನ್ನು ಸಂಪರ್ಕಿಸಿದ್ದೇವೆ. ಅವರ ಸಕಾರಾತ್ಮಕ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಅಕ್ರಮ ಸಾಗಾಟ; 9 ಲೀಟರ್ ಮದ್ಯ, 45 ಲಕ್ಷ ರೂ. ಮೌಲ್ಯದ ಬಸ್ ವಶ
“ಪ್ರತಿ ಜಿಲ್ಲೆಯಲ್ಲೂ ಸಮುದಾಯ ಆಧಾರಿತ ಸಂಘಟನೆ ಇದ್ದು, ವಿಜಯನಗರ ಜಿಲ್ಲೆಗೆ 6 ರಿಂದ 7 ತಿಂಗಳ ಹಿಂದೆಯೇ ದೊರೆತಿದೆ. ಲಿಂಗತ್ವ ಅಲ್ಪಸಂಖ್ಯಾತರಿಗೆ ಆರೋಗ್ಯ ಮತ್ತು ನೇತ್ರ ತಪಾಸಣಾ ಶಿಬಿರಗಳನ್ನು ನಡೆಸಲು ಹಾಗೂ ಆರೋಗ್ಯ ಇಲಾಖೆಯಿಂದ ಉಚಿತವಾಗಿ ಔಷಧಿಗಳನ್ನು ಪಡೆಯಲು ಅವರಿಗೆ ಬೆಂಬಲ ನೀಡುತ್ತಿದ್ದೇವೆ” ಎಂದು ಕಲಬುರಗಿಯ ಸಂಗಮ ಅಭಿವೃದ್ಧಿ ಸಂಸ್ಥೆ ಕಾರ್ಯಕ್ರಮದ ವ್ಯವಸ್ಥಾಪಕ ಮಹೇಶ್ ಪಾಟೀಲ್ ಹೇಳಿದರು.