ವಿಜಯಪುರ ಜಿಲ್ಲೆಯ ಜಿಲ್ಲೆಯ ಎಲ್ಲ ಶಾಸಕರು ಸದನದಲ್ಲಿ ರೈತಪರ ಧ್ವನಿ ಎತ್ತಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮನವಿ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಪಂಚ ನದಿಗಳ ಜಿಲ್ಲೆ ಎಂದೇ ಖ್ಯಾತಿ ಪಡೆದಿರುವ ವಿಜಯಪುರ ಜಿಲ್ಲೆಯಲ್ಲಿ ಪ್ರತಿ ಬೇಸಿಗೆಯಲ್ಲಿ ಟ್ಯಾಂಕರ್ ನೀರು ಹಾಕಿಸಿಕೊಳ್ಳುವುದು ತಪ್ಪುತ್ತಿಲ್ಲ. ರೈತರ ಆತ್ಮಹತ್ಯೆಗಳು ಕಡಿಮೆ ಆಗುತ್ತಿಲ್ಲ. ಆಲಮಟ್ಟಿ ಜಲಾಶಯದ ಎತ್ತರವನ್ನು 524.256ಕ್ಕೆ ಎತ್ತರಿಸಿರುವುದರಿಂದ ನಷ್ಟಗೊಂಡ ಎಲ್ಲ ರೈತರಿಗೆ ಪರಿಹಾರ, ಪುರ್ನವಸತಿ ನೀಡಿ ರೈತ ಆತ್ಮಹತ್ಯೆಗಳನ್ನು ತಡೆಯಬೇಕು ಎಂದು ಆಗ್ರಹಿಸಿದ್ದಾರೆ.
ರೈತರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಯಾವೊಬ್ಬ ಜನಪ್ರತಿನಿಧಿಗಳು ಈ ಕುರಿತು ಬಾಯಿ ಬಿಚ್ಚುತ್ತಿಲ್ಲ. ವಿಪತ್ತು ನಿರ್ವಹಣಾ ಯೋಜನೆಯಡಿ ರಾಜ್ಯ ಮತ್ತು ಕೇಂದ್ರ ಸರಕಾರ ಬರ ಪರಿಹಾರ ಹಾಕುವಲ್ಲಿ ಅನೇಕರಿಗೆ ಅನ್ಯಾಯವಾಗಿದೆ. ರೈತರು ಇಲಾಖೆಗಳಿಗೆ ಅಲೆದಾಡಿ ಸುಸ್ತಾದರೆ ಹೊರತು, ಯಾರಿಗೂ ಪರಿಹಾರ ಸಿಕ್ಕಿಲ್ಲ. ರೈತರಿಗೆ ಆಗುತ್ತಿರುವ ಅನ್ಯಾಯವನ್ನು ನೋಡಿಕೊಂಡು ಕಂಡು ಕಾಣದಂತೆ ಜಿಲ್ಲೆ ಜನಪ್ರತಿನಿಧಿಗಳು ಸುಮ್ಮನೆ ಕುಳಿತಿದ್ದಾರೆ ಎಂದು ದೂರಿದ್ದಾರೆ.
ಕಬ್ಬು ಕಾರ್ಖಾನೆಗೆ ಕಳುಹಿಸಿ 6 ತಿಂಗಳೂ ಕಳೆದರೂ ಜಿಲ್ಲೆಯ ಕೆಲ ರೈತರಿಗೆ ಬರಬೇಕಾದ ಕಬ್ಬಿನ ಬಾಕಿ ಬಿಲ್ ಬಂದಿಲ್ಲ. ಅದು ಸುಮಾರು 100 ಕೋಟಿ ಹಣ ಕಬ್ಬು ಬೆಳೆಗಹಾರರಿಗೆ ತಲುಪದೆ, ರೈತರು ಸಾಲ ಮಾಡಿಕೊಂಡು ಕಷ್ಟ ಅನುಭವಿಸುತ್ತಿದ್ದಾರೆ. ರೈತರ ಕಷ್ಟಕ್ಕೆ ಯಾರು ನಿಲ್ಲುತ್ತಿಲ್ಲ ಎಂಬುದೇ ಬೇಸರದ ವಿಷಯ ಎಂದಿರುವ ಅವರು, ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲ ಏತ ನೀರಾವರಿ ಕಾಲುವೆಗಳಲ್ಲಿ ಕ್ಲೋಜರ್ ಕಾಮಗಾರಿ ಮಾಡದೇ ವರ್ಷಗಳೆ ಕಳೆದಿವೆ. ಡೋಣಿ ನದಿ ಹೂಳೆತ್ತವುದು. ಭೂಮಿ ಕಳೆದುಕೊಂಡ ರೈತರಿಗೆ 10-15 ವರ್ಷಗಳೇ ಕಳೆದರು ಇನ್ನು ಪರಿಹಾರ ಬಂದಿಲ್ಲ. ಈ ಕುರಿತು ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಸಚಿವರುಗಳು ಧ್ವನಿ ಎತ್ತಿ ರೈತರ ಪರವಾಗಿ ನಿಲ್ಲಬೇಕು ಎಂದು ಸಂಗಮೇಶ ಸಗರ ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ಯಾದಗಿರಿ | ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ರೈತ ಸಂಘದಿಂದ ಪ್ರತಿಭಟನೆ
ಕಬ್ಬಿಗೆ ಸೂಕ್ತ ಬೆಂಬಲ ಬೆಲೆ, ತೋಟಗಾರಿಕಾ ಬೆಳೆಗಳಿಗೆ ವಿಶ್ವಪ್ರಸಿದ್ದಿ ಪಡೆದಿರುವ ದ್ರಾಕ್ಷಿ, ದಾಳಿಂಬೆ, ಲಿಂಬೆ, ಡ್ರಾಗನ್ ಸೇರಿದಂತೆ ವಿವಿಧ ಬೆಳೆಗಳಿಗೆ ಪ್ರೋತ್ಸಾಹ ನೀಡಿ ಉಪ ಉತ್ಪನ್ನ ಮಾಡುವಂತೆ ಉತ್ತೆಜಿಸುವ ಯೋಜನೆ ಮಾಡಬೇಕಾಗಿದೆ. ಇನ್ನು ಮಳೆಯಾಶ್ರಿತ ಬೆಳೆಗಳಾದ ಜೋಳ, ಸಜ್ಜೆ, ತೊಗರಿ, ಕಡಲೆ ಸೇರಿದಂತೆ ಮೆಣಸಿನಕಾಯಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದರಿಂದ ಅಕ್ಕಪಕ್ಕದ ಜಿಲ್ಲೆ ಹಾಗೂ ರಾಜ್ಯಗಳಿಗೆ ನಮ್ಮ ರೈತರು ಹಣ ಹಾಗೂ ಸಮಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಈ ಸಮಸ್ಯೆಗಳು ನಮ್ಮ ಜನಪ್ರತಿನಿಧಿಗಳಿಗೆ ಕಾಣುತ್ತಿಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದು, ಸದನದಲ್ಲಿ ರೈತರ ಧ್ವನಿಯಾಗಿ ಜಿಲ್ಲೆಯ ಜನಪ್ರತಿನಿಧಿಗಳು ಧ್ವನಿ ಎತ್ತಬೇಕು ಎಂದು ಮನವಿ ಮಾಡಿದ್ದಾರೆ.
