ಬ್ರಿಟಿಷ್ ಸರ್ಕಾರದಲ್ಲಿ ಪ್ರಾರಂಭವಾದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಮಾದರಿ ಪ್ರಾಥಮಿಕ ಶಾಲೆ ನೂರಾರು ವಿದ್ಯಾರ್ಥಿಗಳ ಜೀವನ ರೂಪಿಸಿದೆ. ನೂರಕ್ಕೂ ಹೆಚ್ಚು ವರ್ಷ ಕಂಡಿರುವ ಶಾಲೆ ಈಗ ಶತಮಾನೋತ್ಸವ ಸಂಭ್ರಮದ ಕನಸು ಕಾಣುತ್ತಿದೆ.
ತಾಲೂಕಿನ ಬಿದರಕುಂದಿ ಗ್ರಾಮದಲ್ಲಿ 1890ರಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯನ್ನು ಪ್ರಾರಂಭಿಸಲಾಯಿತು. ನಂತರ ದಿನಗಳಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳ ಪ್ರತ್ಯೇಕ ಶಾಲೆಯಾಗಿ ಮಾರ್ಪಟ್ಟಿತು. 2015ರಲ್ಲಿ ಒಂದೇ ಗ್ರಾಮದಲ್ಲಿರುವ ಎರಡೂ ಶಾಲೆ ವಿಲೀನ ಮಾಡಬೇಕೆಂಬ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಎಂಪಿಎಸ್ ಬಿದರಕುಂದಿ ಶಾಲೆಯಾಗಿ ಹೊರಹೊಮ್ಮಿತು. ಸದ್ಯಕ್ಕೆ ಈ ಶಾಲೆಗೆ 135 ವರ್ಷವಾಗಿದೆ. 323 ಮಕ್ಕಳು ಕಲಿಕೆ ನಡೆಸಿದ್ದು, 2023ರಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ವರ್ಗಗಳನ್ನೂ ಪ್ರಾರಂಭಿಸಲಾಗಿದೆ. ಒಟ್ಟು 354 ಮಂದಿ ಮಕ್ಕಳು ಕಲಿಯುತ್ತಿದ್ದು, 10 ಮಂದಿ ಶಿಕ್ಷಕರಿದ್ದಾರೆ. ಮುಖ್ಯಗುರು ಹುದ್ದೆ ಖಾಲಿಯಿದ್ದು, ಎಸ್ ಎನ್ ಲಿಂಗದಳ್ಳಿಯವರು ಪ್ರಭಾರ ಮುಖ್ಯಗುರುಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಭಾರ ಮುಖ್ಯಗುರು ಲಿಂಗದಳ್ಳಿ ಮಾತನಾಡಿ, “ಹಳೇ ವಿದ್ಯಾರ್ಥಿಗಳು ಶಾಲೆಯೊಳಗೆ ಸುಂದರವಾದ ವಾತಾವರಣ ನಿರ್ಮಿಸುವ ಕಾರ್ಯ ಮಾಡಿದರು. ಶಾಲೆ ಮುಂಭಾಗದಲ್ಲಿ ಅಲಂಕಾರಿತ ಹೂವಿನ ಗಿಡಗಳು ಹಾಗೂ ಮರಗಳನ್ನು ನೆಟ್ಟು ಶಾಲೆ ಸೌಂದರ್ಯ ಹೆಚ್ಚಿಸಿದರು. ಅಲ್ಲದೆ, ಶತಮಾನೋತ್ಸವ ಆಚರಣೆ ಮಾಡಬೇಕೆಂಬ ಹಿನ್ನೆಲೆಯಲ್ಲಿ ಗ್ರಾಮದ ಹಿರಿಯರೊಂದಿಗೆ ಚರ್ಚಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ಕಲಿತ ನಿವೃತ್ತ ಡಿವೈಎಸ್‌ಪಿ ಎಸ್ ಎಸ್ ಹುಲ್ಲೂರ ಸೇರಿದಂತೆ ಸಾವಿರಾರು ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಅವರೇ ಶಾಲಾ ಶತಮಾನೋತ್ಸವ ಆಚರಣೆ ಮಾಡಿ ಋಣ ಮುಟ್ಟಿಸಬೇಕಿದೆ” ಎಂದರು.

“ಶಾಲೆಯಲ್ಲಿ ಶೌಚಾಲಯ ಕೊರತೆಯಿದೆ. ಬಾಲಕಿಯರಿಗೆ ಮಾತ್ರ ಶೌಚಾಲಯವಿದ್ದು, ಬಾಲಕರು, ಶಿಕ್ಷಕರ ಶೌಚಕ್ಕೆ ಹೊರವಲಯವೇ ಗತಿಯಾಗಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯವನ್ನು ಒದಗಿಸುವ ಕೆಲಸ ಊರಿನ ಗುರು ಹಿರಿಯರು ಹಾಗೂ ಇಲಾಖೆಯ ಸಹಯೋಗದೊಂದಿಗೆ ಬಗೆಹರಿಸುತ್ತದೆ” ಎಂದು ವಚನ ಸಾಹಿತ್ಯ ಚಿಂತಕ ಅಬ್ದುಲ್ ರೆಹಮಾನ್ ಬೀದರಕುಂದಿ ತಿಳಿಸಿದರು.

ಶಾಲೆಯ ಪ್ರಧಾನ ಗುರುಗಳು ಮಾತನಾಡಿ, “ಶಾಲೆಯಲ್ಲಿ 18 ಕೋಣೆಗಳಿವೆ. ಮೂರು ಕೋಣೆಗಳ ದುರಸ್ತಿ ನಡೆದಿದೆ. ಶೌಚಾಲಯ ಕಟ್ಟಡ ಅರ್ಧಕ್ಕೆ ನಿಂತಿದ್ದು, ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಕಾಂಪೌಂಡ್ ಎತ್ತರಕ್ಕೆ ಏರಿಸಿದರೆ ಒಳ್ಳೆಯದಾಗುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
“ಈ ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ಹಾಗೂ ಒಂದರಿಂದ ಏಳನೇ ತರಗತಿವರೆಗಿನ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಎಲ್‌ಕೆಜಿಯಲ್ಲಿ 21 ಮಂದಿ ಮಕ್ಕಳಿದ್ದು, ಯುಕೆಜಿಯಲ್ಲಿ 11 ಮಂದಿ ಇದ್ದಾರೆ. ಒಂದನೇ ತರಗತಿಯಲ್ಲಿ 15 ಮಂದಿ ಗಂಡು ಮಕ್ಕಳಿದ್ದು, 23 ಮಂದಿ ಹೆಣ್ಣುಮಕ್ಕಳಿದ್ದಾರೆ. ಎರಡನೇ ತರಗತಿಯಲ್ಲಿ 11 ಮಂದಿ ಗಂಡುಮಕ್ಕಳಿದ್ದು, 29 ಮಂದಿ ಹೆಣ್ಣುಮಕ್ಕಳಿದ್ದಾರೆ. ಮೂರನೇ ತರಗತಿಯಲ್ಲಿ ತಲಾ 29 ಮಂದಿ ಸೇರಿ ಒಟ್ಟು 58 ಮಂದಿ ಮಕ್ಕಳಿದ್ದಾರೆ. ನಾಲ್ಕನೇ ತರಗತಿಯಲ್ಲಿ 28 ಮಂದಿ ಗಂಡುಮಕ್ಕಳಿದ್ದು, 25 ಮಂದಿ ಹೆಣ್ಣುಮಕ್ಕಳಿದ್ದಾರೆ. ಐದನೇ ತರಗತಿಯಲ್ಲಿ 23 ಮಂದಿ ಗಂಡುಮಕ್ಕಳಿದ್ದು, 22 ಮಂದಿ ಹೆಣ್ಣುಮಕ್ಕಳಿದ್ದಾರೆ. ಆರನೇ ತರಗತಿಯಲ್ಲಿ 24 ಮಂದಿ ಗಂಡುಮಕ್ಕಳಿದ್ದು, 17 ಮಂದಿ ಹೆಣ್ಣುಮಕ್ಕಳಿದ್ದಾರೆ. ಏಳನೇ ತರಗತಿಯಲ್ಲಿ 23 ಮಂದಿ ಗಂಡುಮಕ್ಕಳಿದ್ದು, 24 ಮಂದಿ ಹೆಣ್ಣುಮಕ್ಕಳಿದ್ದಾರೆ ಒಟ್ಟಾರೆಯಾಗಿ 354 ಮಂದಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳಿಗೆ ಆದಷ್ಟೂ ಬೇಗ ಶೌಚಾಲಯ ನಿರ್ಮಾಣವಾದರೆ ಸಾಕೆಂಬ ನಿರೀಕ್ಷೆಯಲ್ಲಿದ್ದೇವೆ” ಎಂದರು.

ಈ ಶಾಲೆಯ ಹಳೆ ವಿದ್ಯಾರ್ಥಿ ಹಾಗೂ ನಿವೃತ್ತ ಡಿವೈಎಸ್‌ಪಿ ಎಸ್ ಎಸ್ ಹುಲ್ಲೂರ್ ಮಾತನಾಡಿ, “ನಾನು ಕಲಿತ ಶಾಲೆಗೆ 100 ವರ್ಷ ಕಳೆದಿದೆ. ನನ್ನಂತೆ ಕಲಿತ ಹಲವು ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ. ಅವರೆಲ್ಲರ ಜೊತೆಗೂಡಿ ಚರ್ಚಿಸಿ ಆದಷ್ಟು ಬೇಗ ಶತಮಾನೋತ್ಸವದ ಆಚರಣೆ ಮಾಡುತ್ತೇವೆ” ಎಂದುರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಸಿಎಂಗೆ ಮಾದಿಗ ಹೋರಾಟ ಸಮಿತಿ ಮನವಿ
ಎಸ್‌ಡಿಎಂಸಿ ಅಧ್ಯಕ್ಷ ಬಸವರಾಜ್ ಹಿರೇಕುರುಬರ್ ಮಾತನಾಡಿ, “ಬಿದರಕುಂದಿ ಮಾದರಿ ಪ್ರಾಥಮಿಕ ಶಾಲೆಯು 135ನೇ ವರ್ಷಕ್ಕೆ ದಾಪುಗಾಲು ಇಡುತ್ತಿದೆ. ಇಲ್ಲಿ ಹಲವರು ಕಲಿತು ಉನ್ನತ ಹುದ್ದೆಯಲ್ಲಿದ್ದಾರೆ. ಅವರನ್ನು ಸಂಪರ್ಕಿಸಿ ಗ್ರಾಮದ ಮುಖಂಡರ ಸಮ್ಮುಖದಲ್ಲಿ ವಿಚಾರಿಸಿ ಶತಮಾನೋತ್ಸವ ಕಾರ್ಯಕ್ರಮವನ್ನು ನಿರ್ಧರಿಸಲಾಗುವುದು” ಎಂದರು.
ಒಟ್ಟಾರೆ ಶತಮಾನೋತ್ಸವ ಕಂಡ ಈ ಶಾಲೆಯ ವೈಭೋಗವನ್ನು ಮುದ್ದೇಬಿಹಾಳ ತಾಲೂಕಿನ ಬಿದರಕುಂದಿಯ ಜನರು ಹಾಗೂ ಶಿಕ್ಷಣ ಪ್ರೇಮಿಗಳು ಶತಮಾನೋತ್ಸವದ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.

ರಮೇಶ ಎಸ್ ಹೊಸಮನಿ
ವಿಜಯಪುರ ಜಿಲ್ಲಾ ಸಂಯೋಜಕರು