ಬಾಬಾಸಾಹೇಬ ಅಂಬೇಡ್ಕರ್ ವಿಚಾರಗಳ ಪ್ರಚಾರ ಮತ್ತು ಪ್ರಸಾರದ ದೃಷ್ಟಿಯಿಂದ ಬುದ್ಧವಿಹಾರದಲ್ಲಿ ಗ್ರಂಥಾಲಯ ಪ್ರಾರಂಭಿಸಲಾಗಿದ್ದು, ಈ ಗ್ರಂಥಾಲಯವು ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಿದೆ. ಎಲ್ಲರೂ ಅದರ ಪ್ರಯೋಜನ ಪಡೆದುಕೊಳ್ಳಬೇಕೆಂದು ವಿಜಯಪುರದ ಬೌದ್ಧ ವಿಹಾರದ ನಿರ್ದೇಶಕ ರಾಜಶೇಖರ ಯಡಳ್ಳಿ ಮನವಿ ಮಾಡಿದರು.
ನಗರದ ಸಾರಿಪುತ್ರ-ಬೌದ್ಧದಮ್ಮ ಬೌದ್ಧವಿಹಾರ ಗ್ರಂಥಾಲಯದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಮ್ಮ ಸಮಾಜದ ವಿದ್ಯಾರ್ಥಿ ಯುವಕರು ಹಾಗೂ ಸಾರ್ವಜನಿಕರು ಬೌದ್ಧವಿಹಾರದ ಗ್ರಂಥಾಲಯವನ್ನು ಸದುಪಯೋಗ ಮಾಡಿಕೊಂಡು ಬುದ್ಧರ ವಿಚಾರ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ವಿಚಾರಧಾರೆಗಳನ್ನು ನಾಡಿನಾದ್ಯಂತ ಪಸರಿಸುವ ಕೆಲಸ ಆಗಬೇಕು” ಎಂದರು.
ಈ ವೇಳೆ ಬಹುಜನ ಸಮಾಜ ಪಾರ್ಟಿಯ ರಾಜ್ಯ ಸಂಯೋಜಕ ಕಲ್ಲಪ್ಪ ತೊರವಿ ಅವರು 5000 ರೂ. ಮುಖಬೆಲೆಯ ಬಾಬಾಸಾಹೇಬ ಅಂಬೇಡ್ಕರ್ ಅವರ ಭಾಷಣ ಮತ್ತು ಬರಹಗಳ ಇಂಗ್ಲಿಷ್ ಆವೃತ್ತಿಗಳ ಗ್ರಂಥದಾನ ಮಾಡಿದರು.
ಬುದ್ಧವಿಹಾರಕ್ಕೆ ಆಗಮಿಸಿದ ಕಲ್ಲಪ್ಪ ತೊರವಿಯವರು ಸಾಮೂಹಿಕ ಬುದ್ಧವಂದನೆಯ ನಂತರ ಬೌದ್ಧವಿಹಾರ ನಿರ್ಮಾಣ ಸಮಿತಿಯ ಅಧ್ಯಕ್ಷ ರಾಜಶೇಖರ ಯಡಹಳ್ಳಿ ಅವರಿಗೆ ಡಾ. ಅಂಬೇಡ್ಕರ್ ಸಂಪುಟಗಳನ್ನು ಅರ್ಪಿಸಿದರು.
ಇದನ್ನೂ ಓದಿ: ವಿಜಯಪುರ | ಕೃಷಿ ಉಪಕರಣಗಳ ಸಮರ್ಪಕ ಪೂರೈಕೆಗೆ ರೈತ ಸಂಘ ಆಗ್ರಹ
ಬುದ್ಧವಿಹಾರ ನಿರ್ಮಾಣ ಸಮಿತಿಯ ಕಾರ್ಯದರ್ಶಿ ನಾಗರಾಜ ಲಂಬು, ನಿರ್ದೇಶಕರಾದ ಅನಿಲ ಹೊಸಮನಿ, ರಾಜೇಶ ತೊರವಿ, ಮನೋಜ ಕೋಟ್ಯಾಳಕರ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕ ಚೆನ್ನು ಕಟ್ಟಿಮನಿ, ಮುಖಂಡರಾದ ಬಸವರಾಜ ಬ್ಯಾಳಿ, ಎಂ.ಬಿ. ಹಳ್ಳದಮನಿ, ಕೆ.ಎಂ. ಶಿವಶರಣ, ರಮೇಶ ಹಾದಿಮನಿ, ಪ್ರತಾಪ ಚಿಕ್ಕಲಕಿ ಮತ್ತಿತರರು ಉಪಸ್ಥಿತರಿದ್ದರು.